ಮುಂಬಯಿ: ವೃತ್ತಿ, ಜೀವನ ಸಾಧನೆ, ಗಳಿಕೆಯ ಧಾವಂತದಲ್ಲಿರುವ ಮಾನವನ ಒತ್ತಡದ ಜೀವನದಲ್ಲಿ ಆರೋಗ್ಯದ ಕಾಳಜಿಗೆ ಮಹತ್ವ ನೀಡದಿರುವುದೇ ಅನಾರೋಗ್ಯದ ಬೆಳವಣಿಗೆಗೆ ಪ್ರಧಾನ ಕಾರಣವಾಗಿದೆ. ಆರೋಗ್ಯದ ಬಗ್ಗೆ ಕಾಳಜಿ, ನಿರ್ಲಕ್ಷ್ಯಭಾವನೆಯೇ ಅಸ್ವಸ್ಥತೆಗೆ ಮೂಲ ಎನ್ನುವುದು ಸೂಕ್ತ. ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭದಿಂದಲೇ ಗುರುತಿಸಿಕೊಂಡು ಶಮನಗೊಳಿಸಲು ಸಾಧ್ಯವಿದೆ. ಆದರೆ ನಾವು ಸಣ್ಣಪುಟ್ಟ ನೆಪವೊಡ್ಡಿ ಕಾಯಿಲೆಗಳ ಬಗ್ಗೆ ನಿರ್ಲಕ್ಷ್ಯ ಮಾಡಿ, ಅದು ಗುಣಮುಖ ಹೊಂದದ ಹಂತಕ್ಕೆ ಬಂದಾಗ ಎಚ್ಚರವಾಗದಿರುವುದು ವಿಷಾದನೀಯ. ಆದ್ದರಿಂದ ಮೊದಲ ಹಂತದಲ್ಲೇ ಕಾಲಕಾಲಕ್ಕೆ ಆರೋಗ್ಯ ತಪಾಸಣೆಗೈದು ಆರೋಗ್ಯ ಭಾಷ್ಯವನ್ನು ಕಾಪಾಡಿಕೊಳ್ಳಬೇಕು. ಆರೋಗ್ಯದ ಬಗ್ಗೆ ಸದಾ ಕಾಳಜಿ ವಹಿಸಿ ತಮ್ಮ ಜತೆಗೆ ಸಮಾಜದ ಸ್ವಾಸ್ಥ್ಯವನ್ನು ಕಾಪಾಡುವಂತೆ ಟಾಟಾ ಮೆಮೋರಿಯಲ್ ಆಸ್ಪತ್ರೆಯ ವೈದ್ಯಾಧಿಕಾರಿ ಡಾ| ಶ್ಯಾಮಿಲಿ ಎಸ್. ಪೂಜಾರಿ ಅವರು ನುಡಿದರು.
ಮಾ. 31ರಂದು ಬೆಳಗ್ಗೆ ಬಿಲ್ಲವರ ಅಸೋಸಿಯೇಶನ್ ಮಹಿಳಾ ವಿಭಾಗವು ಟಾಟಾ ಮೆಮೋರಿಯಲ್ ಆಸ್ಪತ್ರೆಯ ಸಹಯೋಗದೊಂದಿಗೆ ಸಾಂತಾಕ್ರೂಜ್ ಪೂರ್ವದ ಬಿಲ್ಲವರ ಭವನದಲ್ಲಿ ಆಯೋಜಿಸಿದ್ದ ಉಚಿತ ವೈದ್ಯಕೀಯ ಶಿಬಿರ ಮತ್ತು ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಅವರು, ಮಹಿಳೆಯರು ತಮ್ಮ ದೈನಂದಿನ ಕಾರ್ಯಚಟುವಟಿಕೆಗಳೊಂದಿಗೆ ಆರೋಗ್ಯದೆಡೆಗೆ ಹೆಚ್ಚಿನ ಮಹತ್ವವನ್ನು ನೀಡಿದಾಗ ಕುಟುಂಬವು ಸುರಕ್ಷಿತವಾಗಿರುತ್ತದೆ ಎಂದರು.
ಬಿಲ್ಲವರ ಅಸೋಸಿಯೇಶನ್ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್. ಪೂಜಾರಿ ಮಾರ್ಗದರ್ಶನ ಹಾಗೂ ಮಹಿಳಾ ವಿಭಾಗಾಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಸಾರಥ್ಯದಲ್ಲಿ ನಡೆಸಲ್ಪಟ್ಟ ಶಿಬಿರವನ್ನು ಬಿಲ್ಲವರ ಅಸೋಸಿಯೇಶನ್‌ನ ಉಪಾಧ್ಯಕ್ಷ ಹರೀಶ್ ಜಿ. ಅಮೀನ್ ದೀಪ ಪ್ರಜ್ವಲಿಸಿ ಉದ್ಘಾಟಿಸಿದರು.
ಟಾಟಾ ಆಸ್ಪತ್ರೆಯ ಡಾ| ಶ್ಯಾಮಿಲಿ ಎಸ್. ಪೂಜಾರಿ, ಡಾ| ಅದಿತಿ ಆಗರ್‌ವಾಲ್, ಡಾ| ಮಂಗಳಾ ಪಾಟೀಲ್ ಸೇರಿದಂತೆ ಇತರ ನುರಿತ ವೈದ್ಯರು ಭಾಗವಹಿಸಿ ಧರ್ಮಾರ್ಥವಾಗಿ ವೈದ್ಯಕೀಯ ಶಿಬಿರ ನಡೆಸಿಕೊಟ್ಟರು. ಶಿಬಿರದಲ್ಲಿ ಕ್ಯಾನ್ಸರ್ ತಡೆಗಟ್ಟುವಿಕೆ ಬಗ್ಗೆ ವೈದ್ಯರು ವಿಶೇಷ ತಪಾಸಣೆ ನಡೆಸಿ ಬಿಲ್ಲವರ ಅಸೋಸಿಯೇಶನ್‌ನಂತಹ ಸೇವಾ ಸಂಸ್ಥೆಗಳಿಂದ ಇಂತಹ ಶಿಬಿರಗಳ ಆವಶ್ಯಕತೆಯಿದೆ. ಕ್ಯಾನ್ಸರ್ ಅಂದಾಕ್ಷಣ ಭಯ ಪಡುವ ಅಗತ್ಯವಿಲ್ಲ. ಬದಲಾಗಿ ಇಂತಹ ಲಕ್ಷಣಗಳೇನೂ ಕಾಡಿದರೂ ತತ್‌ಕ್ಷಣವೇ ಜಾಗೃತರಾಗಿ ಪ್ರಥಮ ಚಿಕಿತ್ಸೆಗೆ ಒಳಗಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿರಿ ಎಂದರು.
ಕಾರ್ಯಕ್ರಮದಲ್ಲಿ ಭಾರತ್ ಬ್ಯಾಂಕಿನ ನಿರ್ದೇಶಕ ಪುರುಷೋತ್ತಮ ಎಸ್. ಕೋಟ್ಯಾನ್, ಸಮಾಜ ಸೇವಕರಾದ ಗೋಪಾಲ್ ಪಾಲನ್ ಮಲಾಡ್, ಶಂಕರ್ ಕೆ. ಸುವರ್ಣ ಖಾರ್, ಶಿವರಾಮ ಪೂಜಾರಿ, ಮಾಧವ ಐಲ್, ಮಹಿಳಾ ವಿಭಾಗದ ಉಪ ಕಾರ್ಯಾಧ್ಯಕ್ಷೆಯರಾದ ಪ್ರಭಾ ಕೆ. ಬಂಗೇರ ಮತ್ತು ಗಿರಿಜಾ ಚಂದ್ರಶೇಖರ್, ಅಸೋಸಿಯೇಶನ್‌ನ ಮಾಜಿ ಕೋಶಾಧಿಕಾರಿ ಮಹೇಶ್ ಕಾರ್ಕಳ, ಜತೆ ಕಾರ್ಯದರ್ಶಿಗಳಾದ ಜಯಂತಿ ಎಸ್. ಕೋಟ್ಯಾನ್ ಮತ್ತು ಕುಸುಮಾ ಅಮೀನ್, ಯಶೋದಾ ಎನ್. ಟಿ. ಪೂಜಾರಿ, ಪೂಜಾ ಪುರುಷೋತ್ತಮ್ ಕೋಟ್ಯಾನ್ ಸೇರಿದಂತೆ ಅಸೋಸಿಯೇಶನ್‌ನ ವಿವಿಧ ಸ್ಥಳೀಯ ಸಮಿತಿಗಳ, ಸ್ಥಳೀಯ ಕಚೇರಿಗಳ ಪದಾಧಿಕಾರಿಗಳು, ಸದಸ್ಯರು, ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಮಹಿಳಾ ವಿಭಾಗದ ಅಧ್ಯಕ್ಷೆ ಜಯಂತಿ ವಿ. ಉಳ್ಳಾಲ್ ಸ್ವಾಗತಿಸಿ ಅತಿಥಿಗಳನ್ನು ಹಾಗೂ ವೈದ್ಯಾಧಿಕಾರಿಗಳನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು. ಅಸೋಸಿಯೇಶನ್‌ನ ಗೌರವ ಪ್ರಧಾನ ಕಾರ್ಯದರ್ಶಿ ಧನಂಜಯ ಎಸ್. ಕೋಟ್ಯಾನ್ ಪ್ರಸ್ತಾವನೆಗೈದು ಕಾರ್ಯಕ್ರಮ ನಿರೂಪಿಸಿದರು. ಮಹಿಳಾ ಗೌರವ ಕಾರ್ಯದರ್ಶಿ ಸುಮಿತ್ರಾ ಎಸ್. ಬಂಗೇರ ವಂದಿಸಿದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.
ಚಿತ್ರ – ವರದಿ: ರೊನಿಡಾ ಮುಂಬಯಿ