ಕುಷ್ಟಗಿ: ಇಲ್ಲಿನ ಬನ್ನಿಕಟ್ಟೆ ಸಂತೆ ಮೈದಾನದಲ್ಲಿ ಬುಧವಾರ ಭಗತ್ ಸಿಂಗ್ ಸಾಂಸ್ಕೃತಿಕ ಕ್ರೀಡಾ ಸಂಸ್ಥೆ, ಬನ್ನಿ ಮಹಾಂಕಾಳಿ ಸೇವಾ ಸಮಿತಿ ಅಧ್ಯಕ್ಷ ವಜೀರ ಗೋನಾಳ ನೇತೃತ್ವದಲ್ಲಿ ಆಯೋಜಿಸಿದ್ದ ಸರ್ವ ಧರ್ಮ ವಿವಾಹ ಮಹೋತ್ಸವದಲ್ಲಿ 30 ನವ ಜೋಡಿಗಳು ಹಸೆಮಣೆ ಏರಿದರು.
ಬನ್ನಿಕಟ್ಟೆಯ ಸಂತೆ ಮೈದಾನದಲ್ಲಿ ಸಾವಿರಾರು ಜನರ ಸಮ್ಮುಖದಲ್ಲಿ ಹಿಂದೂ ಧರ್ಮದ ವಿಧಿ ವಿಧಾನಗಳ ಮೂಲಕ ಶಾಸ್ತ್ರೀಯವಾಗಿ ವಿವಾಹ ಕಾರ್ಯಕ್ರಮ ನೆರವೇರಿಸಲಾಯಿತು. ಕುಷ್ಟಗಿ ಮದ್ದಾನೇಶ್ವರ ಮಠದ ಶ್ರೀ ಕರಿಬಸವ ಶಿವಾಚಾರ್ಯರರ ಸಾನಿಧ್ಯದಲ್ಲಿ 30 ಜೋಡಿಗಳು ಸತಿ-ಪತಿಗಳಾಗಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಇದೇ ವೇಳೆ ಆಶೀರ್ವಚನ ನೀಡಿದ ಮದ್ದಾನಿಮಠದ ಕರಿಬಸವ ಶಿವಾಚಾರ್ಯ ಸ್ವಾಮೀಜಿ, ಸಮಾಜದಲ್ಲಿ ಆರ್ಥಿಕ ಹೊರೆಯಿಂದ ಬಳಲುತ್ತಿರುವರ ಹಿತ ಕಾಯಲು ಹಾಗೂ ನೆಮ್ಮದಿ ಜೀವನ ನಡೆಸಲು ಸಾಮೂಹಿಕ ವಿವಾಹಗಳು ಹೆಚ್ಚಾಗಿ ನಡೆಯಬೇಕು. ಇತ್ತೀಚಿನ ದಿನಗಳಲ್ಲಿ ಸಾಮೂಹಿಕ ವಿವಾಹಗಳ ಸಂಖ್ಯೆ ಕ್ಷೀಣಿಸುತ್ತಿವೆ. ಹೀಗಾಗಿ, ಬಡ ಹಾಗೂ ಕೂಲಿಕಾರರಿಗೆ ವಿವಾಹಗಳು ಭಾರವಾಗಿ ಪರಿಣಮಿಸುತ್ತಿವೆ ಇಂತಹ ಸಂದರ್ಬದಲ್ಲಿ ವಜೀರ ಗೋನಾಳ ಅವರು, ಬಡ ಕುಟುಂಬಗಳಿಗೆ ಆಸರೆಯಾಗಲು ವಿವಾಹ ಕಾರ್ಯಕ್ರಮವನ್ನೂ ಅದ್ದೂರಿಯಾಗಿ ನೆರೆವೇರಿಸಿದ್ದಾರೆ.
ಪ್ರತಿ ವರ್ಷ ತಪ್ಪದೇ ಸಾಮೂಹಿಕ ವಿವಾಹ ಕಾರ್ಯಕ್ರಮ ತಪ್ಪದೇ ವಜೀರ ಗೋನಾಳ ಅವರು, ತಮ್ಮ ಮನೆಯ ಕಾರ್ಯಕ್ರಮ ಎನ್ನುವಂತೆ ಆಯೋಜಿಸುತ್ತಾ ಬಂದಿದ್ದಾರೆ ಅವರ ಈ ಸತ್ಕಾರ್ಯಗಳಿಗೆ ಸಮಾಜ, ಸರ್ಕಾರ ಬೆಂಬಲಿಸಬೇಕು ಎಂದರು.
ಹಾಲುಮತಸಮಾಜದ ಅಧ್ಯಕ್ಷ ಮಲ್ಲಣ್ಣ ಪಲ್ಲೇದ ಮಾತನಾಡಿ, ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ವಜೀರ ಗೋನಾಳ ಆಯೋಜಿಸುತ್ತಿರುವುದು ಪುಣ್ಯದ ಕಾರ್ಯವಾಗಿದೆ ಎಂದರು.
ಇದೇ ವೇಳೆ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ, ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕೆ.ರಾಮಚಂದ್ರರಾವ್, ಆಯೋಜಕ ವಜೀರ ಗೋನಾಳ, ಅಮರಚಂದ ಜೈನ್, ಮಲ್ಲಿಕಾರ್ಜುನ ಮಸೂತಿ ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ಸುಮಾ ಬ್ಯಾಳಿ ಮತ್ತೀತರರು ಹಾಜರಿದ್ದರು.
ಹಿಂದೂ-ಮುಸ್ಲಿಂ ಅಸಹಿಷ್ಣುತೆಯ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ವಜೀರ ಗೋನಾಳ ಅವರು, ಕೊರೊನಾ ಎರಡು ವರ್ಷ ಹೊರತುಪಡಿಸಿದರೆ ಪ್ರತಿ ವರ್ಷ ಬನ್ನಿ ಮಹಾಂಕಾಳಿ ದೇವಸ್ಥಾನದ ಮುಂದೆ ಹಿಂದೂ ಧರ್ಮದ ಪದ್ದತಿಯಲ್ಲಿ ಶಾಸ್ತ್ರೀಯವಾಗಿ ಸರ್ವ ಧರ್ಮಿಯರ ವಿವಾಹ ಕಾರ್ಯಕ್ರಮ ನೆರವೇರಿಸಿರುವುದು ಭಾವೈಕ್ಯತೆಗೆ ಮುನ್ನುಡಿಯಾಗಿದೆ.