Advertisement

ಆಸ್ಪತ್ರೆಗೆ ಬರುವ ಬಡವರಿಗೆ ಉಚಿತ ಊಟದ ವ್ಯವಸ್ಥೆ

10:50 AM Oct 15, 2019 | Suhan S |

ದಾವಣಗೆರೆ: ಸ್ವತಃ ಅವರೇ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದವರಾದರೂ ಇತರರಿಗೆ ನೆರವಾಗಬೇಕು ಎಂಬ ಕಳಕಳಿಯಿಂದಾಗಿ ವಿಕಲ ಚೇತನರು, ಅನಾಥರು, ಅಸಹಾಯಕರು, ಆಸ್ಪತ್ರೆಗೆ ಬರುವಂತಹ ಕಡು ಬಡವರಿಗೆ ಪ್ರತಿ ದಿನ ಮಧ್ಯಾಹ್ನ ಉಚಿತವಾಗಿ ಊಟದ ವ್ಯವಸ್ಥೆಗೆ ಮುಂದಾಗುವ ಮೂಲಕ ಮಾನವೀಯತೆಗೆ ಸಾಕ್ಷಿ ಆಗಿದ್ದಾರೆ.

Advertisement

ಇಂದಿನ ಆಧುನಿಕ ಕಾಲದಲ್ಲೂ ಈ ರೀತಿಯ ಮನಸ್ಸುಳ್ಳವರು, ಸಾಮಾಜಿಕ ಕಾಳಜಿ, ಕಳಕಳಿ ಹೊಂದಿದವರು ಇದ್ದಾರಾ ಎಂದು ಪ್ರಶ್ನಿಸುವಂತೆ ಪ್ರತಿ ದಿನ ಊಟದ ವೆಚ್ಚಕ್ಕಾಗಿಯೇ 1,500 ರಿಂದ 2 ಸಾವಿರ ರೂ. ಭರಿಸಲು ಸಿದ್ಧರಾಗಿದ್ದಾರೆ. ಅವರ ಈ ಮಹಾನ್‌ ಕಾರ್ಯಕ್ಕೆ ಅನೇಕರು ಆರ್ಥಿಕ ಒಳಗೊಂಡಂತೆ ಎಲ್ಲ ರೀತಿಯ ನೆರವಿಗೆ ಮುಂದಾಗಿದ್ದಾರೆ. ಆ ಧೈರ್ಯದಿಂದಲೇ ಒಂದೊಳ್ಳೆ ಕಾರ್ಯಕ್ಕೆ ಮುಂದಡಿಯಿಟ್ಟಿದ್ದಾರೆ. ಅವರೇ ಸಿರಿಗನ್ನಡಂ ವಿಕಲಚೇತನರ ಸೇವಾ ಚಾರಿಟೇಬಲ್‌ ಟ್ರಸ್ಟ್‌ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಟಿ. ವೆಂಕಟೇಶ್‌ ಕಣ್ಣಾಳರ್‌.

ಅನೇಕ ವಿಕಲಚೇತನರು, ಅನಾಥರು, ಅಸಹಾಯಕರು, ಆಸ್ಪತ್ರೆಗೆ ಬರುವಂತಹ ಕಡು ಬಡವರು ಒಂದೊತ್ತಿನ ಊಟಕ್ಕೆ ಪರಿತಪಿಸುವುದನ್ನು ಕಣ್ಣಾರೆ ಕಂಡಂತಹ ವೆಂಕಟೇಶ್‌ ಅವರ ಏನಾದರೂ ಮಾಡಬೇಕು ಎಂಬ ಆಲೋಚನೆಯ ಪರಿಣಾಮವೇ ಪ್ರತಿ ದಿನ ಮಧ್ಯಾಹ್ನ ಉಚಿತ ಊಟದ ವ್ಯವಸ್ಥೆ. ಸೋಮವಾರ ದಾವಣಗೆರೆಯ ಜಿಲ್ಲಾ ಕ್ರೀಡಾಂಗಣ ಪಕ್ಕದ ರಸ್ತೆಯಲ್ಲಿ ಒಳ್ಳೆಯ ಸದುದ್ದೇಶ ಕಾರ್ಯಕ್ಕೆ ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ ವಿಧ್ಯುಕ್ತ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು, 12ನೇ ಶತಮಾನದಲ್ಲಿಯೇ ವಿಶ್ವಗುರು ಬಸವಣ್ಣನವರು ಅನುಭವ ಮಂಟಪದಲ್ಲಿ ಉಚಿತ ಪ್ರಸಾದದ ವ್ಯವಸ್ಥೆ ಪ್ರಾರಂಭಿಸಿದ್ದರು. ಅನುಭವ ಮಂಟಪಕ್ಕೆ ಪ್ರತಿ ದಿನ ಆಗಮಿಸುತ್ತಿದ್ದ 1.96 ಲಕ್ಷ ಭಕ್ತ ಗಣಂಗಳಿಗೆ ಉಚಿತ ಪ್ರಸಾದದ ವ್ಯವಸ್ಥೆ ಇತ್ತು. ಯಾರೆಯೇ ಆಗಲಿ, ಆನುಭವ ಮಂಟಪಕ್ಕೆ ಬಂದವರು ಉಪವಾಸ ಇರುವಂತೆಯೇ ಇಲ್ಲ. ಸಂತೃಪ್ತಿಯಾಗಿ ಇರಬೇಕು ಎಂದು ಪ್ರಸಾದ ನೀಡಲಾಗುತ್ತಿತ್ತು ಎಂದು ತಿಳಿಸಿದರು.

ವಿಶ್ವಗುರು ಬಸವಣ್ಣನವರು ಪ್ರಾರಂಭಿಸಿದ್ದ ಅನುಭವ ಮಂಟಪಕ್ಕೆ ಎಲ್ಲರಿಗೂ ಮುಕ್ತ ಪ್ರವೇಶ ಅವಕಾಶ ಇತ್ತು. ಆದರೆ, ಯಾರೆಯೇ ಆಗಿರಲಿ ಕಡ್ಡಾಯವಾಗಿ ಕಾಯಕ ಮಾಡಲೇಬೇಕಿತ್ತು. ಕಾಯಕದಿಂದ ಬಂದ ಪ್ರತಿಫಲವನ್ನು ದಾಸೋಹಕ್ಕೆ ಬಳಕೆ ಮಾಡಬೇಕಾಗಿತ್ತು. 12ನೇ ಶತಮಾನದಲ್ಲೇ ಹಸಿವು ಮುಕ್ತ… ಸಮಾಜ ನಿರ್ಮಾಣ ಕಾರ್ಯ ಪ್ರಾರಂಭಿಸಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ ಎಂದು ತಿಳಿಸಿದರು. ಪ್ರತಿಯೊಬ್ಬರು ದಾಸೋಹ ಮಾಡಬೇಕು. ದಾಸೋಹ ಮಾಡುವಾಗ ನಾನು… ಎಂಬ ಭಾವನೆ ಸಲ್ಲದು. ದೇವರು ಕೊಟ್ಟಿದ್ದನ್ನು ಸಮಾಜಕ್ಕೆ ಕೊಡುತ್ತಿದ್ದೇನೆ ಎಂಬ ಉದಾತ್ತ ಮನೋಭಾವ ಇರಬೇಕು. ನಾವು ಮನುಷ್ಯರಲ್ಲಿ ದೇವರನ್ನು ಕಾಣಬೇಕು. ಆದರೆ, ಇಂದಿನ ದಿನಮಾನಗಳಲ್ಲಿ ಮನುಷ್ಯರಲ್ಲಿ ಜಾತಿ, ಧರ್ಮ ಕಾಣುತ್ತಿರುವ ಕಾರಣಕ್ಕೆ ದೇಶ, ಸಮಾಜ ಹಿಂದುಳಿದಿದೆ ಎಂದು ವಿಷಾದ ವ್ಯಕ್ತಪಡಿಸಿದರು.

Advertisement

ಕೆಲ ಅಂಗಹೀನತೆಯಿಂದ ಜನಿಸಿದಂತಹವರನ್ನು ಕುಂಟ, ಕಿವುಡ, ಮೂಕ.. ಎಂಬುದಾಗಿ ಕರೆಯುವುದು ಒಳ್ಳೆಯದಲ್ಲ. ಆ ರೀತಿ ಕರೆಯುವುದು ದೇವರಿಗೇ ಬೈದಂತಾಗುತ್ತದೆ. ವಿಕಲ ಚೇತನರನ್ನು ಮಾನವೀಯ ಪ್ರೀತಿಯಿಂದ ಕಾಣುವುದೇ ನಿಜವಾದ ಬಸವತತ್ವ, ಏಕೆಂದರೆ ಬಸವತತ್ವ ಸರ್ವರಲ್ಲೂ ಸಮಾನತೆಯ ಬಯಸುತ್ತದೆ ಎಂದು ತಿಳಿಸಿದರು. ಕೈ-ಕಾಲು ಎಲ್ಲವೂ ಚೆನ್ನಾಗಿ ಇದ್ದವರೇ ಕೆಲಸ ಮಾಡಲಿಕ್ಕೆ ಹಿಂದೇಟು ಹಾಕುವ ಕಾಲ ಇದೆ. ವಿಕಲಚೇತನರು ಇರುವುದರಲ್ಲೇ ಒಳ್ಳೆಯ ಕೆಲಸ ಮಾಡುತ್ತಾರೆ. ಅವರ ಬುದ್ಧಿಮತ್ತೆ, ಪ್ರತಿಭೆಗೆ ಸಾಟಿಯೇ ಇಲ್ಲ. ಸರ್ಕಾರ ಈಗ ನೀಡುತ್ತಿರುವ ಸೌಲಭ್ಯಕ್ಕಿಂತಲೂ ಇನ್ನೂ ಹೆಚ್ಚಿನ ಸೌಲಭ್ಯ ನೀಡಬೇಕು ಎಂದು ಆಗ್ರಹಿಸಿದರು.

ಸಿರಿಗನ್ನಡಂ ವಿಕಲಚೇತನರ ಸೇವಾ ಚಾರಿಟಬಲ್‌ ಟ್ರಸ್ಟ್‌ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಟಿ. ವೆಂಕಟೇಶ್‌ ಕಣ್ಣಾಳರ್‌ ಪ್ರತಿ ದಿನ ಉಚಿತವಾಗಿ ಮಧ್ಯಾಹ್ನದ ಊಟ ನೀಡುವುದನ್ನು ಪ್ರಾರಂಭಿಸಿರುವುದು ನಿಜಕ್ಕೂ ಅದ್ಭುತ ಸಾಧನೆ. ಅಂತಹ ಕಾರ್ಯಕ್ಕೆ ಎಲ್ಲರೂ ಸಹಕರಿಸಬೇಕು. ತಾವು ಸಹ ತಮ್ಮ ಕೈಲಾದಷ್ಟು ನೆರವು ನೀಡುವುದಾಗಿ ಶ್ರೀಗಳು ತಿಳಿಸಿದರು.

ವಿಕಲಚೇತನರು ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಜಿ.ಎಸ್‌. ಶಶಿಧರ್‌ ಮಾತನಾಡಿ, ವಿಕಲ ಚೇತನರು, ಅನಾಥರು, ಅಸಹಾಯಕರು, ಆಸ್ಪತ್ರೆಗೆ ಬರುವಂತಹ ಕಡು ಬಡವರಿಗೆ ಪ್ರತಿ ದಿನ ಮಧ್ಯಾಹ್ನ ಉಚಿತವಾಗಿ ಊಟದ ವ್ಯವಸ್ಥೆ ಯಾವುದೇ ಕಾರಣಕ್ಕೆ ನಿಲ್ಲುವಂತಾಗಬಾರದು. ಇಲಾಖೆಯಿಂದ ಅಗತ್ಯ ಸಹಕಾರ ನೀಡಲಾಗುವುದು. ಎಲ್ಲರೂ ಸಹಕರಿಸಬೇಕು ಎಂದು ಮನವಿ ಮಾಡಿದರು. ಸಿರಿಗನ್ನಡಂ ವಿಕಲಚೇತನರ ಸೇವಾ ಚಾರಿಟಬಲ್‌ ಟ್ರಸ್ಟ್‌ ಸಂಸ್ಥಾಪಕ ರಾಜ್ಯ ಅಧ್ಯಕ್ಷ ಟಿ. ವೆಂಕಟೇಶ್‌ ಕಣ್ಣಾಳರ್‌, ಮಹಾನಗರ ಪಾಲಿಕೆಯ ಲೋಕೇಶಪ್ಪ, ತ್ರಿಲೋಕ್‌, ಟಿ. ಅಜ್ಜೆಶಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next