ಬೆಂಗಳೂರು: ನಗರದಲ್ಲಿ ಪಾಕಿಸ್ತಾನ ಪರ ಘೋಷಣೆ ಮತ್ತು ಫ್ರೀ ಕಾಶ್ಮೀರ ನಾಮಫಲಕ ಪ್ರದರ್ಶನ ಪ್ರಕರಣಗಳ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಅದೇ ಮಾದರಿಯ ಮತ್ತೂಂದು ಪ್ರಕರಣ ಬೆಳಕಿಗೆ ಬಂದಿದೆ.
ಡಿಕೆನ್ಸನ್ ರಸ್ತೆಯಲ್ಲಿರುವ ಸಂದೀಪ್ ಉನ್ನಿಕೃಷ್ಣನ್ ಏನ್‌ಕ್ಲೇವ್ ವಸತಿ ಸಮುಚ್ಚಯದ ಗೋಡೆಯ ಮೇಲೆ ಕೆಲ ಕಿಡಿಗೇಡಿಗಳು ಭಾನುವಾರ ತಡರಾತ್ರಿ “ಫ್ರೀ ಕಾಶ್ಮೀರ’ “ನೋ ಸಿಎಎ’ ಹಾಗೂ ಪ್ರಧಾನಿ ಮೋದಿ ಬಗ್ಗೆ ಆಕ್ಷೇಪಾರ್ಹ ಬರಹಗಳನ್ನು ಬರೆದಿದ್ದಾರೆ.
ಸೇನೆ ಅಧಿಕಾರಿಗಳು ಮತ್ತು ಕುಟುಂಬ ಸದಸ್ಯರು ಈ ವಸತಿ ಸಮುಚ್ಚಯದಲ್ಲಿ ವಾಸವಾಗಿದ್ದು, ಕಾಂಪೌಂಡ್‌ಗೆ ಹೊಂದಿಕೊಡಂತೆ ಕಾಲೇಜು ಕೂಡ ಇದೆ. ಇದೇ ಗೋಡೆಯ ಮೇಲೆ ಕಿಡಿಗೇಡಿಗಳು ಕೃತ್ಯ ಎಸಗಿದ್ದು, ಸೋಮವಾರ ಮುಂಜಾನೆ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಹಲಸೂರು ಪೊಲೀಸರು ಪರಿಶೀಲಿಸಿ, ಆಕ್ಷೇಪಾರ್ಹ ಬರಹದ ಮೇಲೆ ಬಣ್ಣ ಬಳಿದು ಅಳಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿದ ಪೂರ್ವ ವಿಭಾಗದ ಡಿಸಿಪಿ ಡಾ ಶರಣಪ್ಪ, ಗೋಡೆಯ ಮೇಲೆ ಆಕ್ಷೇಪಾರ್ಹ ಬರಹ ಬರೆದಿದ್ದು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿದ್ದೇನೆ. ಆ ಈ ಸಂಬಂಧ ಹಲಸೂರು ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಮುಕ್ತ ಸ್ಥಳಗಳ ವಿರೂಪಗೊಳಿಸುವಿಕೆ ತಡೆ ಕಾಯ್ದೆ(ಕೆಒಪಿಡಿ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಲಾಗಿದೆ ಎಂದರು.
ಈ ಹಿಂದೆಯೂ ಘಟನೆ: ಕೆಲ ತಿಂಗಳ ಹಿಂದಷ್ಟೇ ಚರ್ಚ್‌ಸ್ಟ್ರೀಟ್ ವಾಣಿಜ್ಯ ಮಳಿಗೆಗಳ ಮೇಲೆ ಕೆಲ ಕಿಡಿಗೇಡಿಗಳು ಫ್ರೀಕಾಶ್ಮೀರ ಎಂಬ ಬರಹ ಬರೆದಿದ್ದರು. ಈ ಸಂಬಂಧ ಬಿಜೆಪಿ ಕಾರ್ಯಕರ್ತರು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದರು. ಬಳಿಕ ಪೊಲೀಸರು ಬರಹಗಳಿಗೆ ಕಪ್ಪು ಬಣ್ಣದ ಮಸಿ ಬಳಿದು ಅಳಿಸಿದ್ದರು. ಈ ಸಂಬಂಧ ಕಬ್ಬನ್‌ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿತ್ತು. ಆದರೆ, ಇದುವರೆಗೂ ಆರೋಪಿಗಳು ಪತ್ತೆಯಾಗಿಲ್ಲ.