ಹುಬ್ಬಳ್ಳಿ: ಬಡಜನರ ಮನೆ ಬಾಗಿಲಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ನನ್ನ ಕ್ಷೇತ್ರ ವ್ಯಾಪ್ತಿಯ ಎಲ್ಲೆಡೆ ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ ಎಂದು ಶಾಸಕ ಪ್ರಸಾದ ಅಬ್ಬಯ್ಯ ಹೇಳಿದರು.
ಎಸ್‌ಡಿಎಂ ನಾರಾಯಣ ಹಾರ್ಟ್ ಸೆಂಟರ್ ಹಾಗೂ ಪ್ರಸಾದ ಅಬ್ಬಯ್ಯ ಫೌಂಡೇಶನ್ ವತಿಯಿಂದ ರವಿವಾರ ವಾರ್ಡ್ ನಂ. 79ರ ಎಸ್.ಎಂ. ಕೃಷ್ಣ ನಗರದ ರಾಜೀವ ಗಾಂಧಿ ಕನ್ನಡ ಮತ್ತು ಉರ್ದು ಶಾಲೆ ಆವರಣದಲ್ಲಿ ಆಯೋಜಿಸಿದ್ದ ಉಚಿತ ಹೃದ್ರೋಗ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.ಉಚಿತ ಶಿಕ್ಷಣ ಹಾಗೂ ಆರೋಗ್ಯ ಸೌಲಭ್ಯಗಳಿಂದ ಮಾತ್ರ ಸದೃಢ ದೇಶ ನಿರ್ಮಿಸಲು ಸಾಧ್ಯ ಎಂಬುದು ಡಾ| ಬಿ.ಆರ್. ಅಂಬೇಡ್ಕರ ಅವರ ಆಶಯವಾಗಿತ್ತು.
ಅವರ ಅಭಿಲಾಷೆಯಂತೆ ಕ್ಷೇತ್ರ ವ್ಯಾಪ್ತಿಯ ಬಡ ಜನರ ಆರೋಗ್ಯ ಸುಧಾರಣೆ ಹಾಗೂ ಬಡ ಮಕ್ಕಳ ಶಿಕ್ಷಣಕ್ಕೆ ವಿಶೇಷ ಒತ್ತು ಕೊಟ್ಟು ಕೋಟ್ಯಂತರ ರೂ. ಅನುದಾನದಲ್ಲಿ ಕ್ಷೇತ್ರದ ವಿವಿಧೆಡೆ ಸರಕಾರಿ ಆಸ್ಪತ್ರೆಗಳನ್ನು ನಿರ್ಮಿಸಿದ್ದಲ್ಲದೇ ಸರಕಾರಿ ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಿ ಮಕ್ಕಳ ಕಲಿಕೆಗೆ ಪ್ರೇರೇಪಣೆ ನೀಡಲಾಗಿದೆ ಎಂದರು.
ಕ್ಷೇತ್ರ ವ್ಯಾಪ್ತಿಯಲ್ಲಿ ಬಡವರು, ಮಧ್ಯಮ ವರ್ಗದ ಜನರೇ ಅತಿ ಹೆಚ್ಚು ವಾಸವಾಗಿದ್ದು, ಅವರಿರುವಲ್ಲಿಯೇ ತಜ್ಞ ವೈದ್ಯರ ತಂಡದೊಂದಿಗೆ ಉಚಿತ ತಪಾಸಣೆ ನಡೆಸಿ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಶಿಬಿರಗಳನ್ನು ಆಯೋಜಿಸಲಾಗುತ್ತಿದೆ. ಕಳೆದ ಬಾರಿ ಹಮ್ಮಿಕೊಂಡಿದ್ದ ನೇತ್ರ ತಪಾಸಣೆ ಶಿಬಿರದಲ್ಲಿ ಸುಮಾರು 400ಕ್ಕೂ ಹೆಚ್ಚು ಜನರು ತಪಾಸಣೆಗೊಳಪಟ್ಟು 120ಕ್ಕೂ ಅಧಿಕ ಜನರು ಶಸ್ತ್ರಚಿಕಿತ್ಸೆಗೆ ಆಯ್ಕೆಯಾಗಿದ್ದರು.
ಇಂತಹ ಆರೋಗ್ಯ ಶಿಬಿರಗಳಿಂದ ಕಡುಬಡವರಿಗೆ ಅನುಕೂಲವಾಗಿದೆ ಎಂದು ಹೇಳಿದರು. ಸಾನ್ನಿಧ್ಯ ವಹಿಸಿದ್ದ ತಾಜುದ್ದೀನ್ ಪೀರಾ ಖಾದ್ರಿ ಮಾತನಾಡಿ, ಕ್ಷೇತ್ರದ ಬಡ ಜನರ ಆರೋಗ್ಯದ ಕಾಳಜಿಯಿಂದ ಫೌಂಡೇಶನ್ ಸ್ಥಾಪಿಸಿ ಜನರ ಮನೆ ಬಾಗಿಲಿಗೆ ಉಚಿತವಾಗಿ ಆರೋಗ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿರುವ ಶಾಸಕ ಪ್ರಸಾದ ಅಬ್ಬಯ್ಯ ಅವರ ಸೇವಾಕಾರ್ಯ ಶ್ಲಾಘನೀಯ. ಜನರು ಶಿಬಿರದ ಸದುಪಯೋಗಪಡಿಸಿಕೊಂಡು ಉತ್ತಮ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಪಾಲಿಕೆ ಮಾಜಿ ಸದಸ್ಯರಾದ ಮೋಹನ ಅಸುಂಡಿ, ಅಲ್ತಾಫ್ ಕಿತ್ತೂರ, ಮುತುವಲ್ಲಿ ಶಬ್ಬೀರ್ ನದಾಫ್, ಎಸ್‌ಡಿಎಂ ಆಸ್ಪತ್ರೆಯ ವೈದ್ಯ ಡಾ| ಮಹಾಂತೇಶ ಉಳ್ಳಾಗಡ್ಡಿ, ಮುಖಂಡರಾದ ಬಾಬಾಜಾನ ಕಾರಡಗಿ, ಪ್ರಭು ಪ್ರಭಾಕರ, ಸೈಯದ್ ಸಲೀಂ ಮುಲ್ಲಾ, ರಿಯಾಜ್ ಖೀಲ್ಲೇದಾರ, ಜಾಫರ ಸೊಲ್ಲಾಪುರಿ, ಶಂಕ್ರಪ್ಪ ಅಸುಂಡಿ, ಮೀರಾನಸಾಬ ನದಾಫ, ರಾಕೇಶ ಪಲ್ಲಾಟೆ, ದೇವೇಂದ್ರಪ್ಪ ಇಟಗಿ, ಅಬ್ದುಲ ಮುನಾಫ ಮುಲ್ಲಾ, ಅಹಮ್ಮದಸಾಬ ಸವಣೂರು, ಮಹ್ಮದಗೌಸ್ ಮುನವಳ್ಳಿ ಮೊದಲಾದವರಿದ್ದರು.