ಬೆಂಗಳೂರು: ರಾಜ್ಯದ ಸಣ್ಣ ವ್ಯಾಪಾರಿಗಳು ಜಿಎಸ್‌ಟಿಯಡಿ ಸುಲಭವಾಗಿ ವ್ಯವಹರಿಸಲು ಅನುಕೂಲವಾಗುವಂತಹ ಹೊಸ ಅಕೌಂಟಿಂಗ್ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದ್ದು, ಸದ್ಯದಲ್ಲೇ ರಾಜ್ಯದ ನೋಂದಾಯಿತ ವ್ಯಾಪಾರಿಗಳಿಗೆ ಉಚಿತವಾಗಿ ಸಿಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಜಂಟಿ ಆಯುಕ್ತ (ಇ-ಆಡಿಟ್) ಕೆ.ಎಸ್.ಬಸವರಾಜು ಹೇಳಿದರು.
ಸರ್ಜಾಪುರ ರಸ್ತೆ ಬಳಿಯ ಕಸವನಹಳ್ಳಿಯ ಅಮೃತಾ ವಿಶ್ವ ವಿದ್ಯಾಪೀಠಂ ವಿಶ್ವವಿದ್ಯಾಲಯವು ಶುಕ್ರವಾರ ಹಮ್ಮಿಕೊಂಡಿದ್ದ “ಜಿಎಸ್‌ಟಿ ಜಾರಿ ನಂತರ ಸವಾಲುಗಳು’ ಕುರಿತ ಸಂವಾದದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ನಾಲ್ಕು ಲಕ್ಷ ಸಣ್ಣ ವ್ಯಾಪಾರಿಗಳಿದ್ದು, ಜಿಎಸ್‌ಟಿ ಬಗ್ಗೆ ಹಲವರು ಗೊಂದಲದಲ್ಲಿದ್ದಂತಿದೆ. ಆನ್‌ಲೈನ್‌ನಲ್ಲಿ ತೆರಿಗೆ ಪಾವತಿ ಬಗ್ಗೆಯೂ ಇನ್ನಷ್ಟು ಸ್ಪಷ್ಟತೆ ಅಗತ್ಯವಿದೆ ಎನಿಸುತ್ತಿದ್ದು, ಆ ನಿಟ್ಟಿನಲ್ಲಿ ಸಾಫ್ಟ್ವೇರ್ ಅಭಿವೃದ್ಧಿಪಡಿಸಲಾಗಿದೆ ಎಂದು ತಿಳಿಸಿದರು.
ದೊಡ್ಡ ವ್ಯಾಪಾರಿಗಳು ತಮ್ಮದೇ ಆದ ಪ್ರತ್ಯೇಕ ಸಾಫ್ಟ್ವೇರ್ ಅಳವಡಿಸಿಕೊಂಡು ಬಳಸುತ್ತಾರೆ. ಆದರೆ ಸಣ್ಣ ವ್ಯಾಪಾರಿಗಳಿಗೆ ಇದು ಸಾಧ್ಯವಾಗದ ಕಾರಣ ಎನ್‌ಐಸಿ ಸಂಸ್ಥೆ ಸಹಯೋಗದಲ್ಲಿ ಅಭಿವೃದ್ಧಿಪಡಿಸಿರುವ ಸಾಫ್ಟ್ವೇರ್ ಅನ್ನು ಶೀಘ್ರವೇ ನೀಡಲಾಗುವುದು ಎಂದರು.
ರಾಜ್ಯ ಸರ್ಕಾರದ ವಿತ್ತೀಯ ನೀತಿ ಸಂಸ್ಥೆ ಸಲಹೆಗಾರರಾದ ಸುಬ್ರಾಯ ಎಂ. ಹೆಗಡೆ, ರಾಜ್ಯದಲ್ಲಿ ಜಿಎಸ್‌ಟಿ ಯಾವುದೇ ರೀತಿಯ ಗೊಂದಲವಿಲ್ಲದೆ ಯಶಸ್ವಿಯಾಗಿ ಜಾರಿಯಾಗಿದೆ. ಇದರಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ರಾಜ್ಯ ಸರ್ಕಾರದ ತೆರಿಗೆ ಆದಾಯ ಏರಿಕೆಯಾಗುವ ನಿರೀಕ್ಷೆ ಇದೆ. ಜಿಎಸ್‌ಟಿ ಅನುಷ್ಠಾನದ ಬಳಿಕ ವ್ಯಾಪಾರಿಗಳ ನೋಂದಣಿಯೂ ಹೆಚ್ಚಾಗಿದ್ದು, “ಗುಡ್ ಆ್ಯಂಡ್ ಸಿಂಪಲ್ ಟ್ಯಾಕ್ಸ್ ಎಂದು ವಿಶ್ಲೇಷಿಸಬಹುದು ಎಂದು ಅಭಿಪ್ರಾಯಪಟ್ಟರು.
ರಾಜ್ಯ ತೆರಿಗೆ ಸಮಿತಿ ಮತ್ತು ಜಿಎಸ್‌ಟಿ ಸಲಹಾ ಸಮಿತಿ ಅಧ್ಯಕ್ಷ ಬಿ.ಟಿ.ಮನೋಹರ್, ಅಮೃತಾ ವಿವಿಯ ಪಿ.ಮನೋಜ್, ಮ್ಯಾನೇಜ್‌ಮೆಂಟ್ ವಿಭಾಗದ ಡಾ.ಎಂ.ಜೆ.ದೀಪಿಕಾ ಇತರರು ಉಪಸ್ಥಿತರಿದ್ದರು.