ಕಾರ್ಕಳ: ಬಡಕುಟುಂಬಗಳಿಗೆ ಉಚಿತವಾಗಿ ಗ್ಯಾಸ್ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಕನಸಿನ ಉಜ್ವಲ ಯೋಜನೆಯ ಪ್ರಯೋಜನ ಪಡೆದು ಯಶಸ್ವಿಗೊಳಿಸುವಂತೆ ಶಾಸಕ ವಿ. ಸುನಿಲ್‌ಕುಮಾರ್ ಹೇಳಿದ್ದಾರೆ.
ಮಂಜುನಾಥ ಪೈ ಸಾಂಸ್ಕೃತಿಕ ಸಭಾಭವನದಲ್ಲಿ ಜೂ. 28ರಂದು ಕಾರ್ಕಳ ಮಾರುತಿ ಗ್ಯಾಸ್ ಏಜೆನ್ಸಿ, ಪ್ರಿಯದರ್ಶಿನಿ ಗ್ಯಾಸ್ ಏಜೆನ್ಸಿ, ವೆಂಕಟರಮಣ ಗ್ಯಾಸ್ ಏಜೆನ್ಸಿ ಬಜಗೋಳಿ ಇವುಗಳ ಆಶ್ರಯದಲ್ಲಿ ವಿವಿಧ ಗ್ಯಾಸ್ ಕಂಪೆನಿಗಳ ಸಹಯೋಗದಲ್ಲಿ ನಡೆದ ಕಾರ್ಕಳ ತಾ| ವ್ಯಾಪ್ತಿಯ ಉಜ್ವಲ ಯೋಜನೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರತಿಯೊಬ್ಬರ ಮನೆಗೂ ಗ್ಯಾಸ್ ಸಂಪರ್ಕ ಇರಲೇಬೇಕು ಮತ್ತು 2019ರೊಳಗಾಗಿ ಎಲ್ಲರಿಗೂ ಗ್ಯಾಸ್ ಸಂಪರ್ಕ ಗುರಿ ಸಾಧಿಸಬೇಕೆಂಬ ಚಿಂತನೆಯಿಂದ ಈ ಯೋಜನೆಗೆ ಕೇಂದ್ರ ಸರಕಾರ ಚಾಲನೆ ನೀಡಿದೆ. ಹುಬ್ಬಳ್ಳಿಯಲ್ಲಿ ಈ ಯೋಜನೆಗೆ ಚಾಲನೆ ದೊರಕಿದೆ. ಇದೀಗ ಕಾರ್ಕಳದಲ್ಲಿ 600 ಮಂದಿ ಬಿಪಿಎಲ್ ಕಾರ್ಡುದಾರರಿಗೆ ಪ್ರಥಮ ಹಂತದಲ್ಲಿ ಗ್ಯಾಸ್ ಸಂಪರ್ಕ ಮಂಜೂರಾತಿ ನೀಡಲಾಗಿದೆ. ಗ್ಯಾಸ್, ಒಲೆ, ರೆಗ್ಯುಲೇಟರ್ ಎಲ್ಲವೂ ಉಚಿತ ವಿದ್ದು ಯಾರೂ ಯಾವುದೇ ಶುಲ್ಕ ಭರಿಸುವ ಅಗತ್ಯವಿಲ್ಲ ಎಂದವರು ಹೇಳಿದರು.ಕಾರ್ಯಕ್ರಮವನ್ನು ತಾ.ಪಂ. ಅಧ್ಯಕ್ಷೆ ಮಾಲಿನಿ ಶೆಟ್ಟಿ ಉದ್ಘಾಟಿಸಿದರು.
ಕುಕ್ಕುಂದೂರು ಗ್ರಾ.ಪಂ. ಸದಸ್ಯ ಅಂತೋನಿ ಡಿ’ಸೋಜಾ, ಅಜೆಕಾರು ತಾ.ಪಂ. ಸದಸ್ಯ ಹರೀಶ್ ನಾಯಕ್, ಎಚ್‌ಪಿ ಕಾರ್ಪೊರೇಶನ್ ಪಿಎಂವಿವೈಯ ಜಿಲ್ಲಾ ನೋಡಲ್ ಅಧಿಕಾರಿ ನವೀನ್ ಕುಮಾರ್, ಎಚ್‌ಪಿ ಕಾರ್ಪೊರೇಶನ್‌ನ ಸೇಲ್ಸ್ ಆಫೀಸರ್ ಜುನೈದ್, ಐಒಸಿ ಕಂಪೆನಿಯ ಸೇಲ್ಸ್ ಆಫೀಸರ್ ಮನೀಶ್ ಉಪಸ್ಥಿತರಿದ್ದರು.
ಎಸ್. ನಿತ್ಯಾನಂದ ಪೈ ಸ್ವಾಗತಿಸಿ ದರು. ನಂದಕಿಶೋರ್ ವಂದಿಸಿದರು. ಸೀಮಾ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ 35 ಮಂದಿಗೆ ಅನಿಲ ಸಂಪರ್ಕವನ್ನು ಶಾಸಕರು ವಿತರಿಸಿದರು.