ಮುಂಡಗೋಡ: ಕಣ್ಣುಗಳ ದೃಷ್ಟಿಯು ಸಮರ್ಪಕವಾಗಿ ಇದ್ದರೆ ಕುಳಿತ ಸ್ಥಳದಿಂದಲೆ ಜಗತ್ತನ್ನು ವೀಕ್ಷಿಸುವ ಶಕ್ತಿ ಪ್ರತಿಯೊಬ್ಬರಲ್ಲಿದೆ ಎಂದು ಜಿಪಂ ಮಾಜಿ ಸದಸ್ಯ ಅಶೋಕ್ ಸಿರ್ಸಿಕರ ಹೇಳಿದರು. ಅವರು ಶುಕ್ರವಾರ ತಾಲೂಕಿನ ಮಳಗಿ ಗ್ರಾಮದಲ್ಲಿ ದೇಶಪಾಂಡೆ ರುಡಸೆಟ್, ಸರಕಾರಿ ಆಸ್ಪತ್ರೆ, ಸಮೃದ್ಧಿ ಸಂಸ್ಥೆ ಹಾಗೂ ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಉಚಿತ ಕಣ್ಣಿನ ಪೊರೆ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸೆ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕಣ್ಣಿನ ದೃಷ್ಟಿ ಎಲ್ಲರಿಗೂ ಮಹತ್ವದ್ದು ಅದರಲ್ಲೂ ವಿಶೇಷವಾಗಿ ವಯೋವೃದ್ಧರೇ ಹೆಚ್ಚಿನ ಸಂಖ್ಯೆಯಲ್ಲಿ ಕಣ್ಣಿನ ಪೊರೆಗೆ ತುತ್ತಾಗುತ್ತಿದ್ದಾರೆ. ನಿತ್ಯ ಜೀವನದ ಕೆಲಸ ಕಾರ್ಯಗಳನ್ನು ನಿರ್ವಹಿಸಲು ಅವರಿಗೆ ಅನುಕೂಲ ಕಲ್ಪಿಸಲು ನಾವು ಈ ಶಿಬಿರವನ್ನು ಆಯೋಜಿಸಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಿ ಎಂದರು.
ಶಿರಸಿ ರೋಟರಿ ಆಸ್ಪತ್ರೆಯ ಗಿರೀಶ್ ಧಾರೇಶ್ವರ ಮಾತನಾಡಿ, ರೋಟರಿ ಕಣ್ಣಿನ ಆಸ್ಪತ್ರೆಯಿಂದ ಈಗಾಗಲೆ ಸಾವಿರಾರು ಜನರಿಗೆ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಲಾಗಿದೆ, ಎಲ್ಲರಿಗೂ ಉತ್ತಮವಾದ ವ್ಯವಸ್ಥೆಯಲ್ಲಿ ಆಪರೇಷನ್ ಮಾಡಿಸುತ್ತಿದ್ದು ಇದರ ಉಪಯೋಗ ಮಾಡಿಕೊಳ್ಳಿ ಎಂದರು.
ರುಡಸೆಟ್‌ನ ಯೋಜನಾಧಿಕಾರಿ, ಮಹಾಬಲೇಶ್ವರ ನಾಯ್ಕ ಮಾತನಾಡಿ, ಸಂಸ್ಥೆ ನಡೆಸುವ ಹಲವಾರು ಚಟುವಟಿಕೆಗಳ ಪರಿಚಯ ಮಾಡಿಕೊಟ್ಟರು. 226 ಜನರಿಗೆ ನೇತ್ರ ತಪಾಸಣೆ ನಡೆಸಲಾಯಿತು. 130 ಜನರನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.
ಮಳಗಿ ಪ್ರಾಥಮಿಕ ಅರೋಗ್ಯ ಕೇಂದ್ರದ ವೈದ್ಯ ಡಾ| ಶಿಫಾ ಮುಜಾವರ ನೇತ್ರ ತಜ್ಞ ಮಾರುತಿ ಸಿ, ಡಾ| ಎ.ಜೆ ವಸ್ತ್ರದ, ಶಿರಸಿ ರೋಟರಿ ಆಸ್ಪತ್ರೆ ಪ್ರದೀಪ ಕೊಳಗಿ, ಸಾಮಾಜಿಕ ಕಾರ್ಯಕರ್ತ ವಿಠuಲ ಅವಾಗಾನ, ಉಷಾ ಸಿರ್ಸಿಕರ, ಈರಯ್ಯ ಚಿಕ್ಕಮಠ, ಶಿವಾನಂದ ವಿಡಿ, ಶಾಂತಕುಮಾರ, ವಿಜಯ ನಾಯ್ಕ ಇತರರಿದ್ದರು.