ವಿಜಯಪುರ: ಮಧುಮೇಹದಂತಹ ಕಾಯಿಲೆ ಗಳು ಇಂದು ವ್ಯಾಪಕವಾಗಿ ಹರಡಿದ್ದು, ಕಣ್ಣಿನ ದೃಷ್ಟಿಯ ಮೇಲೂ ಪರಿಣಾಮ ಬೀರುತ್ತಿವೆ. ಕಣ್ಣಿನ ದೃಷ್ಟಿ ದೋಷಗಳಲ್ಲಿಯೂ ವಿವಿಧ ಬಗೆಯಿದ್ದು, ಕಣ್ಣಿನ ರಕ್ಷಣೆ ಎಲ್ಲರೂ ಆದ್ಯತೆ ನೀಡಬೇಕು ಎಂದು ರೋಟರಿ ಜಿಲ್ಲಾ ಕಮ್ಯುನಿಟಿ ಸರ್ವೀಸ್ ಕಮಿಟಿಯ ಲೆಫ್ಟಿನೆಂಟ್ ಗವರ್ನರ್ ವಿ.ಆರ್.ರಮೇಶ್ ತಿಳಿಸಿದರು.
ಪಟ್ಟಣದ ರೋಟರಿ ಶತಮಾನೋತ್ಸವ ಆರೋಗ್ಯ ಸಲಹಾ ಕೇಂದ್ರದ ಆವರಣದಲ್ಲಿ ವಿಜಯಪುರ ರೋಟರಿ ವತಿಯಿಂದ ನಡೆದ ಉಚಿತ ನೇತ್ರ ತಪಸಾಣೆ ಮತ್ತು ಕಣ್ಣಿನ ಪೊರೆ ರೋಗ ಶಸ್ತ್ರ ಚಿಕಿತ್ಸಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಕಳೆದ 20 ವರ್ಷದಿಂದ ವಿಜಯಪುರ ರೋಟರಿಯು ಪಟ್ಟಣ ಹಾಗೂ ಸುತ್ತಮುತ್ತಲ ಜನರಿಗಾಗಿ ಅನೇಕ ಸೇವಾ ಯೋಜನೆಗಳನ್ನು ಮಾಡಿಕೊಂಡು ಬಂದಿದೆ. ನೇತ್ರ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಮೂಲಕ ಸುಮಾರು 4 ಸಾವಿರಕ್ಕೂ ಹೆಚ್ಚು ಮಂದಿಗೆ ಮರುದೃಷ್ಟಿ ನೀಡಿರುವುದು ಶ್ಲಾಘನೀಯ ಎಂದರು.
ಡಯಾಲಿಸಿಸ್ ಕೇಂದ್ರ ಅಗತ್ಯ: ವಿಜಯಪುರ ಸುತ್ತಮುತ್ತಲಿನ ಜನರಿಗೆ ಅಗತ್ಯವಾಗಿ ಈ ಭಾಗದಲ್ಲಿ ಡಯಾಲಿಸಿಸ್ ಕೇಂದ್ರ ಅಗತ್ಯವಿದೆ. ರೋಟರಿ ವತಿಯಿಂದ ತೆರೆದು ಉತ್ತಮ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉದಾಸೀನತೆ ತೋರಬೇಡಿ: ರೋಟರಿ ಅಧ್ಯಕ್ಷ ಎಚ್.ಎಸ್.ರುದ್ರೇಶಮೂರ್ತಿ ಮಾತ ನಾಡಿ, ದೃಷ್ಟಿಯನ್ನು ಕಳೆದುಕೊಂಡರೆ ಜೀವನದ ಬಹು ಭಾಗವನ್ನು ಕಳೆದುಕೊಂಡತ್ತಾಗುತ್ತದೆ. ದೃಷ್ಟಿ ಕಳೆದುಕೊಂಡವರಿಗೆ ಪುನಃ ದೃಷ್ಟಿ ನೀಡುವ ಸೇವೆಯು ಮಹತ್ವದ್ದಾಗಿದೆ. ಕಣ್ಣಿನ ರಕ್ಷಣೆಯ ಬಗ್ಗೆ ಉದಾಸೀನತೆ ತೋರದೆ, ಹೆಚ್ಚು ಕಾಳಜಿ ವಹಿಸಬೇಕು. ಕಣ್ಣು, ಮೂಗು, ಕಿವಿ ಮತ್ತಿತರ ಸೂಕ್ಷ್ಮಾ ಅಂಗಗಳಿಗೆ ವೈರಸ್, ಸೂಕ್ಷ್ಮಾಣು ಜೀವಿಗಳು ಪ್ರವೇಶಿಸಿಸದಂತೆ ಮುಖದ ಭಾಗವನ್ನು ರಕ್ಷಿಸಿಕೊಳ್ಳ ಬೇಕು ಎಂದು ತಿಳಿಸಿದರು.
ಉತ್ತಮ ಸ್ಪಂದನೆ: ಉಚಿತ ಶಿಬಿರಕ್ಕೆ ಉತ್ತಮ ಸ್ಪಂದನೆ ವ್ಯಕ್ತವಾಗಿದ್ದು, ಶಿಬಿರದಲ್ಲಿ ನೂರಕ್ಕೂ ಹೆಚ್ಚಿನ ಮಂದಿಗೆ ತಪಾಸಣೆ ಮಾಡಿ, ಸೂಕ್ತ ಸಲಹೆಗಳನ್ನು ನೀಡಲಾಯಿತು. ಶಸ್ತ್ರ ಚಿಕಿತ್ಸೆ ಅಗತ್ಯವುಳ್ಳ 20ಕ್ಕೂ ಹೆಚ್ಚು ಮಂದಿಯನ್ನು ಬೆಂಗಳೂರಿನ ಶಾರದಾ ಕಣ್ಣಾಸ್ಪತ್ರೆಗೆ ಕರೆದೊಯ್ದು, ಉಚಿತವಾಗಿ ಶಸ್ತ್ರಚಿಕಿತ್ಸೆ ಮಾಡಿಸಲಾಯಿತು. ಕಳೆದ ತಿಂಗಳ ಶಿಬಿರದಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾದವರಿಗೆ ಉಚಿತ ಕನ್ನಡಕ ವಿತರಿಸಲಾಯಿತು.
ರೋಟರಿ ಮಾಜಿ ಅಧ್ಯಕ್ಷ ಎನ್. ರುದ್ರಮೂರ್ತಿ, ಬೆಂಗಳೂರಿನ ಶಂಕರ ಕಣ್ಣಾಸ್ಪತ್ರೆಯ ಗಿರೀಶ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಹಡಪದ್, ಬೆಂಗಳೂರಿನ ರೋಟರಿ ಪಶ್ಚಿಮ ಕ್ಲಬ್‌ನ ಮಾಜಿ ಅಧ್ಯಕ್ಷ ವೆಂಕಟನಾರಾಯಣ್, ಬೆಂಗಳೂರು ವೆಸ್ಟ್ ರೋಟರಿ ಅಧ್ಯಕ್ಷ ನಾಗೇಶ್ ಶ್ರೀಧರ್, ಎಚ್.ನಾಗರಾಜು, ಎಂ.ಆರ್. ಶಿವಕುಮಾರ್, ವಿಜಯಪುರ ರೋಟರಿ ಕಾರ್ಯದರ್ಶಿ ಎಸ್.ಮಹೇಶ್, ಸಾಮಾಜಿಕ ಕಾರ್ಯಕರ್ತ ವಿ.ಎನ್.ಸೂರ್ಯ ಪ್ರಕಾಶ್, ರೋಟರಿ ಮಾಜಿ ಅಧ್ಯಕ್ಷ ಪಿ.ಎನ್.ಪುಟ್ಟರಾಜು, ಅನುಸೂಯಮ್ಮ ಸಂಪತ್ ಕುಮಾರ್, ಎಸ್. ಬಸವರಾಜು, ಎನ್.ಬಸವರಾಜು, ಬಿ.ಸಿ. ಸಿದ್ದರಾಜು, ನವೀನ್, ನಿಯೋಜಿತ ಅಧ್ಯಕ್ಷೆ ಎ.ಎಂ.ಮಂಜುಳಾ, ಆಂಜನೇಯ, ಎಂ.ಗಿರಿಜಾ ಹಾಜರಿದ್ದರು.