ಬೆಂಗಳೂರು: ಇಂಧನ ಇಲಾಖೆ ಸಾವಿರಾರು ಕೋಟಿ ರೂ. ನಷ್ಟದಲ್ಲಿದ್ದರೂ ಕೂಡಾ ರೈತರ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಬೆಸ್ಕಾಂ ವತಿಯಿಂದ ನಗರದ ಖಾಸಗಿ ಹೋಟೆಲ್‌ನಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ “ಗ್ರಾಹಕರ ಜಾಗೃತಿ ಅರಿವು ಸಮ್ಮೇಳನ -2019” ಉದ್ಘಾಟಿಸಿ ಮಾತನಾಡಿದ ಅವರು, ಇಂಧನ ಇಲಾಖೆಯು ಸಬ್ಸಿಡಿ, ಶುಲ್ಕ ಬಾಕಿ, ಹೊಸ ಯೋಜನೆಗಳ ಅನುಷ್ಠಾನಕ್ಕೆ ಹಣ ವಿನಿಯೋಗದಿಂದ ಆರಂಭದಿಂದಲೂ ನಷ್ಟದಲ್ಲಿಯೇ ಸಾಗುತ್ತಿದ್ದು, ಈಗಲೂ 16 ಸಾವಿರ ಕೋಟಿ ರೂ. ಆರ್ಥಿಕ ಹೊರೆ ಇದೆ.
ಅದರ ನಡುವೆಯೂ 2008 ರಿಂದ ರೈತರ ಪಂಪ್‌ಸೆಟ್‌ಗಳಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಿ ಕೃಷಿ ಚಟುವಟಿಕೆಯಲ್ಲಿ ಸಾಕಷ್ಟು ನೆರವಾಗಿ ರಾಜ್ಯದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ ಎಂದು ಹೇಳಿದರು. 2008ರಲ್ಲಿ ಅಂದಿನ ಸರ್ಕಾರ ರೈತರು ಬಳಕೆ ಮಾಡುವ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡುವ ತೀರ್ಮಾನಕ್ಕೆ ಬಂದಿತು. ಇದರಿಂದ ಅಂದು ಸುಮಾರು 4 ಸಾವಿರ ಕೋಟಿ ರೂ.ಸಬ್ಸಿಡಿ ನೀಡಬೇಕಾಯಿತು.
ನಂತರ ದಿನಗಳಲ್ಲಿ ಪಂಪ್‌ಸೆಟ್ ಬಳಕೆ ಪ್ರಮಾಣ ಹಾಗೂ ವಿದ್ಯುತ್ ದರ ಏರಿಕೆಯಾಗುತ್ತಾ ಇಂದು ಸಬ್ಸಿಡಿ ವೆಚ್ಚ 11 ಸಾವಿರ ಕೋಟಿ ರೂ.ತಲುಪಿ ಇಲಾಖೆಗೆ ಪ್ರಮುಖ ಹೊರೆಯಾಗುತ್ತಿದೆ ಎಂದರು. ಮುಂದಿನ ದಿನಗಳಲ್ಲಿ ಗ್ರಾಮಾಂತರ ಪ್ರದೇಶ ಹಾಗೂ ರೈತರಿಗೆ 24 ಗಂಟೆ ವಿದ್ಯುತ್ ಪೂರೈಕೆ ಮಾಡುವ ಗುರಿ ಹೊಂದಿದ್ದೇವೆ. ಹೀಗಾಗಿ, ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಳ್ಳಬೇಕು.
ಸೋರಿಕೆ ಪ್ರಮಾಣ ಶೇ.14ರಷ್ಟಿದ್ದು, ಇಳಿಕೆಗೆ ಕಠಿಣ ಕ್ರಮಕ್ಕೆ ಮುಂದಾಗಬೇಕಾದ ಅನಿವಾರ್ಯತೆ ಇದೆ. ಇದಕ್ಕೆ ರೈತರ ನೆರವು ಅಗತ್ಯವಿದ್ದು, ವ್ಯವಸಾಯ ಭೂಮಿಯಲ್ಲಿ ಕಡ್ಡಾಯ ಮೀಟರ್ ಅಳವಡಿಕೆ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸೌರ ಮೇಲ್ಛಾವಣಿ ಘಟಕ ಸಾಮರ್ಥ್ಯದ ಮೌಲ್ಯಮಾಪನ ಸಾಧನ ಮತ್ತು ವಿದ್ಯುತ್ಛಕ್ತಿ ಚಾಲಿತ ವಾಹನ ರೀಚಾರ್ಜಿಂಗ್ ಸ್ಟೇಷನ್ ಲಾಂಛನ ಬಿಡುಗಡೆಗೊಳಿಸಿದರು.
ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಲೋಕಪಾಲ ಎನ್.ಎಸ್.ಪಟ್ಟಣಶೆಟ್ಟಿ, ಇಂಧನ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಶಿಖಾ, ಸಿಟಿಜನ್ಸ್ ಫಾರ್ ಬೆಂಗಳೂರು ಸಮೂಹದ ಸಹಸ್ಥಾಪಕ ಶ್ರೀನಿವಾಸ ಅಲವಿಲ್ಲಿ ಮತ್ತಿತರರು ಉಪಸ್ಥಿತರಿದ್ದರು.