Advertisement

ರಾಜ್ಯದಲ್ಲಿ ಉಚಿತ ವಿದ್ಯುತ್‌ ಪಾಲಿಟಿಕ್ಸ್‌

09:57 PM Jan 12, 2023 | Team Udayavani |

ಬೆಂಗಳೂರು: ದಿಲ್ಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದ  “ಬಿಜಲಿ ಪಾಲಿಟಿಕ್ಸ್‌’  ಈಗ ನಮ್ಮ ರಾಜ್ಯದಲ್ಲೂ ಸದ್ದು ಮಾಡುತ್ತಿದೆ. ತಾನು ಅಧಿಕಾರಕ್ಕೆ ಬಂದರೆ ಎಲ್ಲ ವರ್ಗದ ಜನರಿಗೆ 200 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡುವುದಾಗಿ ಕಾಂಗ್ರೆಸ್‌ ಮಾಡಿರುವ ಘೋಷಣೆಗೆ ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ.

Advertisement

ಇದೊಂದು ಕಾರ್ಯಸಾಧುವಲ್ಲದ ಸುಳ್ಳು ಭರವಸೆ ಎಂದು ಬಿಜೆಪಿ ಟೀಕಿಸಿದ್ದು,  ಚುನಾವಣೆ ಬಂದಾಗ ಇಂಥ ಅತಾರ್ಕಿಕ ವಿಚಾರಗಳನ್ನು ಪ್ರಸ್ತಾಪಿಸಲಾಗುತ್ತದೆ. ಕೃಷ್ಣಾ ಮೇಲ್ದಂಡೆ ಯೋಜನೆಗೆ ವಾರ್ಷಿಕ 10 ಸಾವಿರ ಕೋಟಿ ರೂ. ನೀಡುತ್ತೇವೆ ಎಂದು ಘೋಷಣೆ ಮಾಡಿದ್ದ ಕಾಂಗ್ರೆಸ್‌  ಭರವಸೆಯನ್ನು ಈಡೇರಿಸದೆ ಇರುವುದು ನಮ್ಮ ಕಣ್ಣ ಮುಂದಿದೆ. ಮುಂಬರುವ ದಿನಗಳಲ್ಲಿ ಕಾಂಗ್ರೆಸ್‌ ನೀಡುವ ಪ್ರತಿ ಸುಳ್ಳು ಭರವಸೆ ಬಗ್ಗೆಯೂ ಜನಜಾಗೃತಿ ಮಾಡುತ್ತೇವೆಂದು ಬಿಜೆಪಿ ತಿರುಗೇಟು ನೀಡಿದೆ.

ಇಂಧನ ಸಚಿವ ವಿ.ಸುನಿಲ್‌ ಕುಮಾರ್‌ ಮಾತನಾಡಿ, ಸಿದ್ದರಾಮಯ್ಯ ಅಧಿಕಾರದಲ್ಲಿದ್ದಾಗ ಎಸ್ಕಾಂಗಳಿಗೆ ಕೊಡಬೇಕಿದ್ದ ಸಬ್ಸಿಡಿಗಳನ್ನು ಬಿಡುಗಡೆ ಮಾಡದೆ  ವಿದ್ಯುತ್‌ ಸರಬರಾಜು ಕಂಪೆನಿಗಳನ್ನು ನಷ್ಟಕ್ಕೆ ದೂಡಿದ್ದರು. ಈಗ ಮತ್ತೆ ಹೊಸ ಸುಳ್ಳು ಹೇಳುತ್ತಿದ್ದಾರೆ. ಅತಿಯಾದ ಉಚಿತ ಸೌಲಭ್ಯ ಘೋಷಣೆ ಮಾಡಿ ಶ್ರೀಲಂಕಾ, ಪಾಕಿಸ್ಥಾನ ದಿವಾಳಿಯಾಗಿದೆ. ನೆರೆಯ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳ ಆರ್ಥಿಕತೆ ಈ ಕಾರಣಕ್ಕಾಗಿಯೇ ತೊಂದರೆಗೆ ಸಿಲುಕಿದೆ. ನವ ಕರ್ನಾಟಕದ ಜನತೆ ನಿಮ್ಮ ಈ ಪೊಳ್ಳು ಭರವಸೆಗೆ ಮಣಿಯುವುದಿಲ್ಲ ಎಂದು ಟೀಕಿಸಿದ್ದಾರೆ.

5,403.60 ಕೋಟಿ ರೂ. ಹೆಚ್ಚುವರಿ ಹೊರೆ:

ಇಂಧನ ಇಲಾಖೆ ಮೂಲಗಳ ಪ್ರಕಾರ 200 ಯೂನಿಟ್‌ವರೆಗೆ ಎಲ್ಲ ವರ್ಗದ ಜನತೆಗೆ ಉಚಿತ ವಿದ್ಯುತ್‌ ನೀಡಿದರೆ ರಾಜ್ಯದ ಬೊಕ್ಕಸಕ್ಕೆ ಪ್ರತಿ ವರ್ಷ 5,403.60 ಕೋಟಿ ರೂ. ಹೆಚ್ಚುವರಿ ಹೊರೆ ಬೀಳುತ್ತದೆ.  ಸರಕಾರ ಕೃಷಿ ಪಂಪ್‌ಸೆಟ್‌, ಭಾಗ್ಯ ಜ್ಯೋತಿ ಹಾಗೂ ಕುಟೀರ ಜ್ಯೋತಿ ಯೋಜನೆಗಾಗಿ ವಿದ್ಯುತ್‌ ರಿಯಾಯಿತಿ ನೀಡಬೇಕಾಗುತ್ತದೆ. ಇಂಧನ ಇಲಾಖೆ ಪ್ರಸಕ್ತ ಸಾಲಿನ ಕೃಷಿ ಪಂಪ್‌ಸೆಟ್‌ ಸಬ್ಸಿಡಿಗಾಗಿ ಕೆಇಆರ್‌ಸಿ 13,018 ಕೋಟಿ ರೂ. ಸಬ್ಸಿಡಿ ನೀಡುವುದಕ್ಕೆ ಒಪ್ಪಿಗೆ ನೀಡಿದೆ. ರಾಜ್ಯದ ಒಟ್ಟು 33.15 ಲಕ್ಷ ಕೃಷಿ ಪಂಪ್‌ ಸೆಟ್‌ಗಳಿಗೆ ಈ ಸಬ್ಸಿಡಿ ಸೌಲಭ್ಯ ದೊರೆಯುತ್ತಿದೆ. 2020-21ರಲ್ಲಿ ಈ ಸಬ್ಸಿಡಿ ಮೊತ್ತ 12,340.29 ಕೋಟಿ ರೂ. 2021-22ರಲ್ಲಿ ಇದು 12, 478.78 ಕೋಟಿ ರೂ.ನಷ್ಟಿತು.¤ ಕೆಇಆರ್‌ಸಿ ಅನುಮೋದನೆ ಮಾಡುವ ಸಬ್ಸಿಡಿ ಪ್ರಮಾಣ ಇಷ್ಟಾದರೂ ಸರಕಾರ 2021-22ರಲ್ಲಿ ನಾನಾ ಎಸ್ಕಾಂಗಳಿಗೆ ಬಿಡುಗಡೆ ಮಾಡಿರುವುದು 18,847.34 ಕೋಟಿ. ಇದರಲ್ಲಿ 2016ರಿಂದ 2021ರವರೆಗಿನ 8064.31 ಕೋಟಿ ರೂ. ಹಿಂಬಾಕಿಯೂ ಸೇರಿದೆ. ಹೀಗಾಗಿ ಉಚಿತ ವಿದ್ಯುತ್‌ ಘೋಷಣೆಗಳು ಇಲಾಖೆ ಮೇಲೆ ಇನ್ನಷ್ಟು ಹೊರೆ ಸೃಷ್ಟಿಸಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

Advertisement

ಇಂಧನ ಇಲಾಖೆ ಮೂಲಗಳ ಪ್ರಕಾರ ನಾನಾ ಎಸ್ಕಾಂಗಳಿಗೆ ಸರಕಾರದ ಬೇರೆ ಬೇರೆ ಇಲಾಖೆಗಳು ಕಟ್ಟಬೇಕಿರುವ ವಿದ್ಯುತ್‌ ಶುಲ್ಕದ ಬಾಕಿ ಹಣವೇ ಸುಮಾರು 8,124 ಕೋಟಿ ರೂ.ನಷ್ಟಿದ್ದು ಗ್ರಾಮೀಣಾಭಿವೃದ್ಧಿ 5,813.43 ಕೋಟಿ ರೂ., ನಗರಾಭಿವೃದ್ಧಿ ಇಲಾಖೆ 380.44 ಕೋಟಿ ರೂ., ಬಿಬಿಎಂಪಿ 649.35 ಕೋಟಿ ರೂ., ಜಲಮಂಡಳಿ 468.38 ಕೋ. ರೂ., ಜವಳಿ ಇಲಾಖೆ 74.45 ಕೋ. ರೂ., ಜಲಸಂಪನ್ಮೂಲ 203.09 ಕೋಟಿ ರೂ., ಸಣ್ಣ ನೀರಾವರಿ 62.52 ಕೋಟಿ ರೂ., ಬಹುಗ್ರಾಮ ಕುಡಿಯುವ ನೀರು ಯೋಜನೆಯಿಂದ 90.02 ಕೋಟಿ ರೂ., ಸರಕಾರ‌ದ ಇತರ ಇಲಾಖೆ 340.70 ಕೋಟಿ ರೂ., ಕೇಂದ್ರ ಸ್ವಾಮ್ಯದ ಇಲಾಖೆಯಿಂದ 42.31 ಕೋಟಿ ರೂ. ವಿದ್ಯುತ್‌ ಬಾಕಿ ಸಂಗ್ರಹವಾಗಬೇಕಿದೆ.

ಇದೆಲ್ಲದರ ಹೊರತಾಗಿ ಇಂಧನ ಇಲಾಖೆಯ 6 ವಿದ್ಯುತ್‌ ಸರಬರಾಜು ಕಂಪೆನಿಗಳ ಮೇಲೆ ಇದುವರೆಗೆ ಒಟ್ಟು 29,328.77 ಕೋಟಿ ರೂ. ಸಾಲದ ಹೊರೆಯಿದೆ. ಸರಕಾರಿ ಮೂಲಗಳನ್ನು ಹೊರತುಪಡಿಸಿ ಇತರೆ ಹಣಕಾಸು ಮೂಲಗಳಿಂದಲೇ 18,933.98 ಕೋಟಿ ರೂ. ಸಾಲವನ್ನು ಎಸ್ಕಾಂಗಳು ಪಡೆದಿವೆ.

ರಾಜ್ಯದ ಪ.ಜಾತಿ, ಪಂಗಡದ ಬಿಪಿಎಲ್‌ ಕಾರ್ಡ್‌ದಾರರಿಗೆ 75 ಯೂನಿಟ್‌ವರೆಗೆ ಉಚಿತ ವಿದ್ಯುತ್‌ ನೀಡಲು  ಅಮೃತ ಜ್ಯೋತಿ  ಎಂಬ ಯೋಜನೆಯನ್ನು ನಾವು ಜಾರಿಗೆ ತಂದಿದ್ದೇವೆ. ಸಿದ್ದರಾಮಯ್ಯ  ಅಧಿಕಾರದಲ್ಲಿದ್ದಾಗ ವಿದ್ಯುತ್‌ ಸರಬರಾಜು ಕಂಪೆನಿಗಳ ಮೇಲೆ ಸಾಲದ ಹೊರೆಯಿಟ್ಟು ಹೋಗಿದ್ದರು. ನಾವು ಅಧಿಕಾರಕ್ಕೆ ಬಂದ ಬಳಿಕ 9,000 ಕೋಟಿ ರೂ. ಸಾಲ ತೀರಿಸಿದ್ದೇವೆ. ಈಗ ಮತ್ತೆ ಸುಳ್ಳು ಭರವಸೆ ನೀಡುತ್ತಿದ್ದಾರೆ.-ವಿ.ಸುನಿಲ್‌ ಕುಮಾರ್‌, ಇಂಧನ ಮತ್ತು ಕನ್ನಡ-ಸಂಸ್ಕೃತಿ ಸಚಿವ

ಯಾರಿಗೆ ಅಗತ್ಯವಿದೆಯೋ ಅವರಿಗೆ ಉಚಿತ ಸೌಲಭ್ಯ ನೀಡಬೇಕು. ನಮ್ಮ ಸರಕಾರ ಈಗಾಗಲೇ ಅಮೃತ ಜ್ಯೋತಿ ಯೋಜನೆ ಜಾರಿಗೆ ತಂದಿದೆ. ಎಲ್ಲವನ್ನೂ ಉಚಿತವಾಗಿ ಕೊಡುತ್ತಾ ಹೋದರೆ ದೇಶ ಹಾಗೂ ರಾಜ್ಯವನ್ನು ನಡೆಸಲು ಸಾಧ್ಯವೇ? ಕಾಂಗ್ರೆಸ್‌ ನೀಡಿರುವ ಈ ಸುಳ್ಳು ಭರವಸೆ ಬಗ್ಗೆ ಜನರು ಯೋಚಿಸಬೇಕು. ನಾವು ಜನಜಾಗೃತಿ ಮಾಡುತ್ತೇವೆ.-ಎನ್‌.ರವಿಕುಮಾರ್‌, ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ.

ಚುನಾವಣ ಪ್ರಕ್ರಿಯೆ ಆರಂಭಗೊಳ್ಳುವ ಮುಂಚೆಯೇ ಕಾಂಗ್ರೆಸ್‌ ಸೋಲುವ ಆತಂಕದಲ್ಲಿದೆ. ಗೆಲುವು ತಮ್ಮಿಂದ ದೂರ ಸರಿಯುತ್ತಿದೆ ಎಂಬ ಭಯದಲ್ಲಿರುವ ಕಾಂಗ್ರೆಸಿಗರು ಈಗ ಬಸ್‌ ಯಾತ್ರೆ ಮಾಡಿ ಅನೇಕ ಯೋಜನೆಗಳನ್ನು ಘೋಷಿಸುತ್ತಿದ್ದಾರೆ. – ಕೋಟ ಶ್ರೀನಿವಾಸ ಪೂಜಾರಿ, ಸಚಿವ

ನುಡಿದಂತೆ ನಡೆಯುತ್ತೇವೆ:

ನಾನು ಇಂಧನ ಸಚಿವನಾಗಿದ್ದವನು. ನಾನೂ ದಾಖಲೆ ಕೊಡುತ್ತೇನೆ. ರಾಜ್ಯದಲ್ಲಿ ವಿದ್ಯುತ್‌ ಕೊರತೆಯಿಂದ ಪವರ್‌ ಕಟ್‌ ಆಗುತ್ತಿತ್ತು. ನಾನು ಪವರ್‌ ಮಿನಿಸ್ಟರ್‌ ಆಗಿ ಇಳಿದ ಮೇಲೆ ಈವರೆಗೂ ಹೆಚ್ಚುವರಿಯಾಗಿ ವಿದ್ಯುತ್‌ ಮಾರಾಟ ಮಾಡ್ತಾ ಇದ್ದಾರೆ. ನನಗೆ ಎಷ್ಟು, ಯಾವ ರೀತಿಯ ಹಣ ಸಂಗ್ರಹ ಸರಕಾರಕ್ಕೆ ಮಾಡಬೇಕು ಗೊತ್ತು. ಜನರಿಗೆ ಸಹಾಯ ಮಾಡಲು ಪ್ರಜಾಧ್ವನಿ ಯಾತ್ರೆ ಘೋಷಣೆ ಮಾಡಿದ್ದೇವೆ. ನಾವು ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತೇವೆ.-ಡಿ.ಕೆ.ಶಿವಕುಮಾರ್‌, ಕೆಪಿಸಿಸಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next