Advertisement

Karnataka: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌: ಸಿದ್ದರಾಮಯ್ಯ ಭರವಸೆ

11:19 PM Feb 03, 2024 | Team Udayavani |

ದಾವಣಗೆರೆ: ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್‌ ಪಾಸ್‌ ನೀಡುವ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ಬಜೆಟ್‌ನಲ್ಲಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.

Advertisement

ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಆಯೋಜಿಸಿರುವ 38ನೇ ರಾಜ್ಯ ಪತ್ರಕರ್ತರ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜನಸಾಮಾನ್ಯರು ಪತ್ರಕರ್ತರ ಮೇಲೆ ಇಟ್ಟುಕೊಂಡಿರುವ ನಿರೀಕ್ಷೆಗಳು ಹುಸಿಯಾಗದಂತೆ ಪತ್ರಕರ್ತರು ವೃತ್ತಿಪರತೆ ಬೆಳೆಸಿಕೊಳ್ಳಬೇಕು. ಮೌಡ್ಯ, ಕಂದಾಚಾರ, ಕರ್ಮ ಸಿದ್ಧಾಂತವನ್ನು ಪತ್ರಕರ್ತರು ತಿರಸ್ಕರಿಸಿ ಜನರಿಗೆ ಸತ್ಯ ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು. ಮೌಡ್ಯ ಬಿತ್ತುವ ಪಟ್ಟಭದ್ರರನ್ನು ಗುರುತಿಸಿ ಮಟ್ಟ ಹಾಕುವ ನಿಷ್ಠುರತೆಯನ್ನು ಪತ್ರಕರ್ತರು ರೂಢಿಸಿಕೊಳ್ಳಬೇಕು. ಪತಿ- ಪತ್ನಿ ಜಗಳವನ್ನು ಇಡೀ ದಿನ ತೋರಿಸುವುದಕ್ಕಿಂತ, ಸಮಾಜದ ಬೆಳೆವಣಿಗೆಗೆ ಅಡ್ಡಿ ಆಗಿರುವ ಪಟ್ಟಭದ್ರರನ್ನು ಗುರುತಿಸಿ ಬರೆಯಿರಿ ಎಂದರು.

ಹಣವಂತರ ಕೈಯಲ್ಲಿ ಸಿಲುಕಿದ ಪತ್ರಿಕೋದ್ಯಮ
ಕೇವಲ ಪತ್ರಿಕೋದ್ಯಮದ ಓದಿದವರಷ್ಟೇ ಅಲ್ಲ, ಓದದೆ ಇರುವವರೂ ಪತ್ರಿಕಾ ಕ್ಷೇತ್ರದಲ್ಲಿ ಅಪಾರ ಕೊಡುಗೆ ನೀಡಿದ್ದಾರೆ. ಮಹಾತ್ಮ ಗಾಂಧಿ, ಅಂಬೇಡ್ಕರ್‌ ಸಹ ಪತ್ರಕರ್ತರಾಗಿ ಜನರನ್ನು ನಿರಂತರವಾಗಿ ಎಚ್ಚರಿಸುತ್ತಿದ್ದರು. ಸ್ವಾತಂತ್ರ್ಯ ಪೂರ್ವದ ಪತ್ರಿಕೋದ್ಯಮದಲ್ಲಿ ದೇಶಕ್ಕೆ ಸ್ವಾತಂತ್ರ್ಯ ತರಬೇಕು ಎನ್ನುವ ಆಶಯ ಪ್ರಧಾನವಾಗಿ ಕೆಲಸ ಮಾಡಿತ್ತು. ಬಳಿಕ ಪ್ರಜಾಪ್ರಭುತ್ವವನ್ನು ಕಾಯುವ, ಸಂವಿಧಾನವನ್ನು ರಕ್ಷಿಸುವ ಆಶಯ ಪ್ರಮುಖವಾಗಿದೆ. ಇಂದು ಪತ್ರಿಕೋ ದ್ಯಮ ಶ್ರೀಮಂತರ ಕೈಯಲ್ಲಿ ಸಿಲುಕಿದೆ. ಹೀಗಾಗಿ ಶ್ರೀಮಂತರ ಹಿತಾಸಕ್ತಿ ಕಾಯುವ, ಬಡವರ ಹಿತಾಕ್ತಿಗೆ ವಿರುದ್ಧವಾಗಿ ಬರೆಯುವ ಅಪಾಯ ಇದೆ ಎಂದರು.

ಇದೇ ಸಂದರ್ಭದಲ್ಲಿ ಸಂಘದ ವೆಬ್‌ಸೈಟ್‌ ಹಾಗೂ ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಸಿಎಂ ಬಿಡುಗಡೆಗೊಳಿಸಿ ದರು. ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ರಾಮಲಿಂಗಾ ರೆಡ್ಡಿ, ಶಾಸಕರಾದ ಶಾಮನೂರು ಶಿವಶಂಕರಪ್ಪ, ಕೆ.ಎಸ್‌.ಬಸವಂತಪ್ಪ, ಡಿ.ಜಿ.ಶಾಂತನಗೌಡ, ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್‌, ಜಿಲ್ಲಾಧಿಕಾರಿ ಡಾ| ವೆಂಕಟೇಶ್‌ ಎಂ.ವಿ., ಎಸ್ಪಿ ಉಮಾ ಪ್ರಶಾಂತ್‌, ಜಿಪಂ ಸಿಇಒ ಸುರೇಶ್‌ ಇಟ್ನಾಳ್‌ ಮುಂತಾದವರಿದ್ದರು. ಕಾರ್ಯನಿರತ ಪತ್ರಕರ್ತರ ಅಧ್ಯಕ್ಷ ಶಿವಾನಂದ ತಗಡೂರು ಅಧ್ಯಕ್ಷತೆ ವಹಿಸಿದ್ದರು.

ಗ್ಯಾರಂಟಿ ಸೌಲಭ್ಯಕ್ಕೆ ಬಿಟ್ಟಿ ಎನ್ನಬೇಡಿ
ಗ್ಯಾರಂಟಿ ಯೋಜನೆಗಳಿಂದ ಸಮಾಜದ ಬಡವರಿಗೆ ಹೆಚ್ಚಿನ ಅನುಕೂಲವಾಗಿದೆ. ಆರ್ಥಿಕ ಬಲ ಬಂದಿದೆ. ಈ ಯೋಜನೆಗಳಿಂದ ಬಡವರಿಗೆ ಅನುಕೂಲವಾಗಿದೆ. ಗ್ಯಾರಂಟಿ ಯೋಜನೆಗಳಿಂದ ಪ್ರತಿ ವ್ಯಕ್ತಿಗೆ ಪ್ರತಿ ತಿಂಗಳು ನಾಲ್ಕೈದು ಸಾವಿರ ರೂ. ಸರಕಾರದಿಂದ ಸಿಗುತ್ತಿದೆ. ಇದು ಒಳ್ಳೆಯ ಯೋಜನೆ ಅಲ್ಲವೇ? ವಿಪಕ್ಷದವರು ರಾಜಕೀಯಕ್ಕಾಗಿ ನಮ್ಮ ಗ್ಯಾರಂಟಿ ಯೋಜನೆಗಳಿಗೆ ಬಿಟ್ಟಿ ಭಾಗ್ಯ ಎನ್ನುತ್ತಾರೆ. ಆದರೆ ರಾಜಕೀಯದಿಂದ ಹೊರತಾಗಿರುವ ಪತ್ರಕರ್ತರು ಬಿಟ್ಟಿ ಭಾಗ್ಯ ಎಂದು ಕರೆಯಬಾರದು ಎಂದರು.

Advertisement

ಮೌಡ್ಯ, ಕಂದಾಚಾರ ಬಿತ್ತಬೇಡಿ
ನನ್ನ ಕಾರಿನ ಮೇಲೆ ಕಾಗೆ ಕುಳಿತಾಗ ಕಾಗೆ ಕುಳಿತಿದ್ದರಿಂದ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುತ್ತಾರೆ ಎಂದು ಸುದ್ದಿ ಪ್ರಸಾರವಾಯಿತು. ಆ ಘಟನೆ ಆದ ಮೇಲೂ ಎರಡು ವರ್ಷ ನಾನು ಮುಖ್ಯಮಂತ್ರಿಯಾಗಿದ್ದೆ. ಚಾಮರಾಜನಗರಕ್ಕೆ ಹೋದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳುತ್ತಾರೆ ಎಂಬ ಸುದ್ದಿಯೂ ಬಂತು. ದೇವರಾಜ ಅರಸು ಬಳಿಕ ಅತಿ ಹೆಚ್ಚು ಬಾರಿ ಅಂದರೆ 12 ಬಾರಿ ನಾನು ಚಾಮರಾಜನಗರಕ್ಕೆ ಭೇಟಿ ನೀಡಿದ್ದೇನೆ. ಸಮಾಜದಲ್ಲಿ ಮೌಡ್ಯ ಬಿತ್ತುವ ಸುದ್ದಿಗಳನ್ನು ಮಾಡಬಾರದು ಎಂದು ಸಿಎಂ ಸಿದ್ದರಾಮಯ್ಯ ಕಿವಿಮಾತು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next