ಕಲಬುರಗಿ: ರಾಜ್ಯದ ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡಬೇಕೆಂದು ಆಗ್ರಹಿಸಿ ಎಐಡಿವೈಒ, ಎಐಡಿಎಸ್‌ಒ ಸಂಘಟನೆಗಳ ನೇತೃತ್ವದಲ್ಲಿ ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಿದರು.
ಎಲ್ಲ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ನೀಡುವ ಬಗ್ಗೆ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಈಗಾಗಲೇ ವಿದ್ಯಾರ್ಥಿ ನಾಯಕರಿಗೆ ನೀಡಿದ ಭರವಸೆ ಸುಳ್ಳಾಗಿದೆ. ಸಾರಿಗೆ ಇಲಾಖೆ ಅಧಿಕಾರಿಗಳು ಪೂರ್ಣ ಪ್ರಮಾಣದ ಬಸ್ ಪಾಸ್ ಹಣವನ್ನು ಸಂಗ್ರಹಿಸುವ ಆದೇಶ ಹೊರಡಿಸಿದ್ದಾರೆ ಎಂದು ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಮೂಲಕ ಸಾರಿಗೆ ಸಚಿವರಿಗೆ ಸಲ್ಲಿಸಿದ ಮನವಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.
ಸಾರಿಗೆ ಇಲಾಖೆಯಲ್ಲಿ ನಡೆಯುತ್ತಿರುವ ಸೋರಿಕೆ ತಡೆಗಟ್ಟಿದರೆ ಕೋಟ್ಯಂತರ ರೂ. ಉಳಿಯುತ್ತದೆ. ಸಾರಿಗೆ ಅಧಿಕಾರಿಗಳು ಸರ್ಕಾರದೊಂದಿಗೆ ಚರ್ಚಿಸಿ ಉಚಿತ ಬಸ್ ಪಾಸ್ ನೀತಿ ಜಾರಿಗೊಳಿಸುವ ಬದಲು ವಿದ್ಯಾರ್ಥಿಗಳ ಪ್ರಜಾತಾಂತ್ರಿಕ ಹಕ್ಕು ಕಸಿದುಕೊಳ್ಳಲು ಹೊರಟಿರುವುದು ವಿದ್ಯಾರ್ಥಿ ವಿರೋಧಿ ನೀತಿಯಾಗಿದೆ ಎಂದರು.
ಕೂಡಲೇ ಉಚಿತ ಬಸ್ ನೀಡಬೇಕು. ಅಲ್ಲಿಯವರೆಗೆ ಹಿಂದಿನ ವರ್ಷದ ಬಸ್ ಪಾಸ್‌ನ್ನು ಉಪಯೋಗಿಸಲು ಇಲಾಖೆಗೆ ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು.
ಮಹೇಶ ನಾಡಗೌಡ, ಮಲ್ಲಿನಾಥ ಸಿಂಗೆ, ಹಣಮಂತ ಎಸ್.ಎಚ್., ಅಶ್ವಿನಿ, ಅಭಯಾ, ಸ್ನೇಹಾ, ಶಿವಕುಮಾರ, ಮಹೇಶ ಎಸ್.ಬಿ., ಶರಣು ವಿ.ಕೆ. ಸೇರಿದಂತೆ ವಿವಿಧ ಶಾಲೆ, ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.