Advertisement

ಅಪಘಾತ ಸ್ಥಳದಿಂದಲೇ ಉಚಿತ ಏರ್‌ ಆ್ಯಂಬುಲೆನ್ಸ್‌; ಹಳ್ಳಿಗಳಿಂದಲೂ ಸೇವೆ ಕಲ್ಪಿಸ ಬೇಕೆಂಬ ಹಂಬಲ

11:11 PM Nov 02, 2022 | Team Udayavani |

ಬೆಂಗಳೂರು: ಅಂಗಾಂಗಗಳ ರವಾನೆ, ತುರ್ತು ಪರಿಸ್ಥಿತಿಯಲ್ಲಿರುವ ನವಜಾತ ಶಿಶುಗಳ ರಕ್ಷಣೆ, ಅಪಘಾತಕ್ಕೀಡಾದ ರೋಗಿಗಳನ್ನು ಅಪಘಾತವಾದ ಸ್ಥಳದಿಂದಲೇ ಆಸ್ಪತ್ರೆ ಗಳಿಗೆ ಸಾಗಿಸುವ ಉಚಿತ “ಏರ್‌ ಆ್ಯಂಬುಲೆನ್ಸ್‌’ ಸೇವೆ ಸದ್ಯದಲ್ಲಿಯೇ ರಾಜ್ಯದಲ್ಲಿ ಆರಂಭವಾಗಲಿದೆ.

Advertisement

ಈ ಸಂಬಂಧ ರಾಜ್ಯ ಸರಕಾರ ಮತ್ತು ಐ ಕ್ಯಾಟ್‌ ಏರ್‌ ಆ್ಯಂಬುಲೆನ್ಸ್‌ ಸರ್ವೀಸ್‌ ಸಂಸ್ಥೆಯು ಒಂದು ಸುತ್ತಿನ ಮಾತುಕತೆ ನಡೆದಿದ್ದು, ಮತ್ತೊಂದು ಸುತ್ತಿನ ಮಾತುಕತೆ ನಡೆಸಿದ ಬಳಿಕ ಸೇವೆ ಆರಂಭಿಸುವ ಸಾಧ್ಯತೆಗಳಿವೆ.

ಜಾಗತಿಕ ಹೂಡಿಕೆ ಸಮಾವೇಶದಲ್ಲಿ ಈ ಕುರಿತು ಮಾತನಾಡಿದ ಐ ಕ್ಯಾಟ್‌ ಫೌಂಡೇಶನ್‌ ಅಧ್ಯಕ್ಷೆ ಡಾ| ಶಾಲಿನಿ ನಲವಾಡ್‌, ಪ್ರಸ್ತುತ ವಿಮಾನ ನಿಲ್ದಾಣ ದಿಂದ ವಿಮಾನ ನಿಲ್ದಾಣಕ್ಕೆ ಏರ್‌ ಆ್ಯಂಬುಲೆನ್ಸ್‌ ಸೇವೆ ನೀಡುತ್ತಿದ್ದೇವೆ. ಆದರೆ, ಅಪಘಾತಕ್ಕೀಡಾದ ಸ್ಥಳದಿಂದ ಅಥವಾ ತಾಲೂಕು ಕೇಂದ್ರಗಳಿಂದ ಏರ್‌ ಆ್ಯಂಬುಲೆನ್ಸ್‌ ಸೇವೆ ಕಲ್ಪಿಸಲು ಸಾಧ್ಯವಾಗಿಲ್ಲ. ಇದೀಗ ಸಮಾ ಜದ ಕಟ್ಟಕಡೆಯ ಹಳ್ಳಿಗಳಿಂದಲೂ ಸೇವೆ ಕಲ್ಪಿಸ ಬೇಕೆಂಬ ಹಂಬಲ ಹೊಂದಿದ್ದೇವೆ ಎಂದು ಹೇಳಿದರು.

ಅಪಘಾತಕ್ಕೀಡಾಗಿರುವ ವ್ಯಕ್ತಿ ಗಳನ್ನು ವಿಮಾನ ನಿಲ್ದಾಣಕ್ಕೆ ಸಾಗಿಸಿ ಮತ್ತೆ ಅಲ್ಲಿಂದ ಆಸ್ಪತ್ರೆಗೆ ಸಾಗಿಸಲು ಸಾಕಷ್ಟು ಸಮಯ ವಾಗಲಿದೆ. ಈ ವೇಳೆ ಜೀವ ಬದುಕುಳಿಯುವ ಸಾಧ್ಯತೆಗಳು ಕೂಡ ಕಡಿಮೆ ಇರುತ್ತದೆ. ಆದರೆ, ಗೋಲ್ಡನ್‌ ಅವರ್ಸ್‌ನಲ್ಲಿ ಅಪ ಘಾತಕ್ಕೀಡಾದ ಸ್ಥಳದಿಂದಲೇ ಸೇವೆ ಕಲ್ಪಿಸಿದರೆ ಅಪಘಾತಕ್ಕೆ ಒಳಗಾದವರು ಜೀವ ಕಳೆದುಕೊಳ್ಳುವುದನ್ನು ತಪ್ಪಿಸ ಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಹಾಲಿ ನೀಡುತ್ತಿರುವ ಸೇವೆಯಲ್ಲಿ ಶೇ. 90 ರಷ್ಟು ಸೇವೆ ಅಂಗಾಂಗಗಳ ರವಾನೆಗೆ ಬಳಸಲಾಗುತ್ತಿದೆ.

ಬೆಂಗಳೂರು, ಹೈದರಾಬಾದ್‌, ಕೋಲ್ಕತ ಮುಂಬಯಿ ಮತ್ತು ದಿಲ್ಲಿಗೆ ಸೇವೆ ಕಲ್ಪಿಸುತ್ತಿದ್ದೇವೆ. ಇದನ್ನು ಅವಶ್ಯವಿರುವ ಕಡೆಗೆ ಕೂಡ ಸೇವೆ ಕಲ್ಪಿಸಲು ಸಾಧ್ಯವಾಗುತ್ತದೆಯೇ ಎಂಬುದನ್ನು ಚಿಂತನೆ ನಡೆಸುತ್ತಿದ್ದೇವೆ ಎಂದರು.

Advertisement

ಪುನೀತ್‌ ಸಾವಿನ ಬಳಿಕ ಹೆಚ್ಚು
ಅಂಗಾಂಗಗಳನ್ನು ಮತ್ತೊಬ್ಬರಿಗೆ ದಾನ ಮಾಡುವ ಪ್ರಕರಣಗಳು ನಟ ಪುನೀತ್‌ ರಾಜಕುಮಾರ್‌ ಸಾವಿನ ನಂತರ ಹೆಚ್ಚಾಗಿವೆ. ಪುನೀತ್‌ ಕಣ್ಣಿನ ದಾನದಿಂದ ಪ್ರೇರಿತರಾಗಿರುವ ಜನ ತಾವು ಕೂಡ ಅಂಗಾಂಗಗಳನ್ನು ದಾನ ಮಾಡುತ್ತಿದ್ದಾರೆ. ಇತ್ತೀಚೆಗೆ ಚಿಕ್ಕಮಗಳೂರಿನ ವಿದ್ಯಾರ್ಥಿನಿ ಯೊಬ್ಬರು ದಾನ ಮಾಡಿದ್ದರು ಎಂದು ಘಟನೆಯೊಂದನ್ನು ಹಂಚಿಕೊಂಡರು.

ಭಾರತದಲ್ಲಿಯೇ ಮೊದಲ ಏರ್‌ ಆ್ಯಂಬುಲೆನ್ಸ್‌ ಸೇವೆ ಎಂಬ ಹೆಗ್ಗಳಿಕೆ ಪಡೆದಿದ್ದು, 2017ರಲ್ಲಿ ನಮ್ಮ ಸೇವೆ ಆರಂಭವಾಯಿತು. ಈವರೆಗೆ ಸುಮಾರು ಸಾವಿರಕ್ಕೂ ಹೆಚ್ಚಿನ ಪ್ರಕರಣಗಳನ್ನು ಜನರನ್ನು ರಕ್ಷಿಸುವ ಕಾರ್ಯ ಮಾಡಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೇಂದ್ರಗಳಲ್ಲಿ “ಅಂಗಾಂಗ ಕಸಿ’ ಪರವಾನಿಗೆ
ಬೆಂಗಳೂರು ಮತ್ತು ಬೆಳಗಾವಿಯಲ್ಲಿ “ಅಂಗಾಂಗ ಕಸಿ’ ವ್ಯವಸ್ಥೆ ಇತ್ತು. ಈಗ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗಳಲ್ಲಿಯೂ ಪರವಾನಿಗೆ ನೀಡಲಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಕಲ್ಪಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಐ ಕ್ಯಾಟ್‌ ಫೌಂಡೇಷನ್‌ ಅಧ್ಯಕ್ಷೆ ಡಾ| ಶಾಲಿನಿ ನಲವಾಡ್‌.

Advertisement

Udayavani is now on Telegram. Click here to join our channel and stay updated with the latest news.

Next