ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ನ್ಯಾಯಾಲಯಕ್ಕೆ ಸ್ವಯಂಪ್ರೇರಿತವಾಗಿ ದಾವೆ ಸಲ್ಲಿಸಿ ನಕಲಿ ವಾದಿ- ಪ್ರತಿವಾದಿಗಳಿಂದ ವಾದ ಮಂಡಿಸಿ ಕೋರ್ಟ್‌ನಿಂದ ಆದೇಶ ಪಡೆದು ಮಾಲೀಕರ ಜಮೀನು, ನಿವೇಶನಗಳನ್ನ ಕಬಳಿಸಿದ ಆರೋಪದಡಿ 18 ಮಂದಿ ವಂಚಕರು ಸಿಐಡಿ ಬಲೆಗೆ ಬಿದ್ದಿದ್ದಾರೆ.
ಪ್ರಮುಖ ಆರೋಪಿ ಬಿ.ಮಣಿ (ನಕಲಿ ಮಾಲೀಕ) ಅರುಣ್ (ನಕಲಿ ಬಾಡಿಗೆದಾರ) ಸೆಂದಿಲ್ ಕುಮಾರ್, ಜಾನ್ ಮೋಸಸ್, ಅಂಥೋಣಿರಾಜ್, ನರೇಂದ್ರ ಕುಮಾರ್, ಎಡ್ವಿನ್, ಕಾಂತಮ್ಮ ಸೇರಿದಂತೆ 18 ಮಂದಿ ವಂಚಕರನ್ನು ಸಿಐಡಿ ಬಂಧಿಸಿದೆ.
ವಿವಾದಿತ ಅಥವಾ ಖಾಲಿಯಿರುವ ಜಮೀನು, ನಿವೇಶನಗಳನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಆರೋಪಿಗಳು ಇದಕ್ಕೆ ಸಂಬಂಧಿಸಿದ ಸಮಗ್ರ ದಾಖಲಾತಿ ಮಾಹಿತಿ ಸಂಗ್ರಹಿಸಿ ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ಆರೋಪಿಗಳೇ ಮಾಲೀಕ ಹಾಗೂ ಬಾಡಿಗೆದಾರರನ್ನು ಸೃಷ್ಟಿಸಿ ಅವರ ನಡುವೆ ವಿವಾದವಿದೆ ಎಂಬಂತೆ ಪ್ರತಿಬಿಂಬಿಸಿ ಕೋರ್ಟ್ ಮೊರೆ ಹೋಗುತ್ತಿದ್ದರು. ನ್ಯಾಯಾಲಯದಲ್ಲಿ ವಾದಿ- ಪ್ರತಿವಾದಿಗಳ ಪರ ಆರೋಪಿತ ವಕೀಲರೇ ವಾದ ಮಂಡಿಸಿ ನ್ಯಾಯಾಲಯ ದಿಂದ ರಾಜಿ ಸಂಧಾನ ಮಾಡಿಸಿ ಆದೇಶ ಪತ್ರ ಪಡೆಯುತ್ತಿದ್ದರು. ಆದೇಶ ಪತ್ರವನ್ನು ಅಸಲಿ ಮಾಲೀಕರಿಗೆ ತೋರಿಸಿ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದರು. ಬಂಧಿತರ ಪೈಕಿ ಕೆಲವರು ಜೈಲಿಗೆ ಹೋಗಿ ಜಾಮೀನು ಪಡೆದು ಹೊರ ಬಂದಿದ್ದಾರೆ ಎಂಬುದು ಗೊತ್ತಾಗಿದೆ. ಹಲಸೂರು, ಯಲಹಂಕ ಸೇರಿದಂತೆ ಬೆಂಗಳೂರಿನ ವಿವಿಧೆಡೆ ಸುಮಾರು 116 ಪ್ರಕರಣಗಳಲ್ಲಿ ಇದೇ ಮಾದರಿಯಲ್ಲಿ ಆರೋಪಿಗಳು ಕೃತ್ಯ ಎಸಗಿರುವುದು ಪತ್ತೆಯಾಗಿದೆ. ರಾಜಧಾನಿಯಲ್ಲಿರುವ ಖಾಲಿ ನಿವೇಶನ, ಜಮೀನುಗಳನ್ನೇ ಆರೋಪಿಗಳು ಟಾರ್ಗೆಟ್ ಮಾಡುತ್ತಿದ್ದರು ಎನ್ನಲಾಗಿದೆ.
ವಂಚನೆ ಹೇಗೆ?: ಆರೋಪಿ ಜಾನ್ ಮೋಸಸ್ ತಂಡ ಕಟ್ಟಿಕೊಂಡು ಯಶವಂತಪುರ ವಿಲೇಜ್ ಬಳಿಯ ಗೋಕುಲ 1ನೇ ಹಂತದಲ್ಲಿರುವ ರವಿಂದ್ರ ಸಿ.ಷಾ ಅವರಿಗೆ ಸೇರಿದ ಸ್ವತ್ತನ್ನು ಲಪಟಾಯಿಸಲು 2020ರಲ್ಲಿ ಸಂಚು ರೂಪಿಸಿದ್ದ. ಸ್ವತ್ತಿಗೆ ಮಾಲೀಕರಾಗಿ ಆರೋಪಿಗಳಾದ ಮಣಿ, ಬಾಡಿಗೆದಾರನಾಗಿ ಅರುಣ್, ಜಿಪಿಎ ಹೋಲ್ಡರ್ ಆಗಿ ಸೆಂದಿಲ್ ಕುಮಾರ್‌ನನ್ನು ದಾಖಲೆಗಳಲ್ಲಿ ತೋರಿಸಿದ್ದ. ಜಾಗಕ್ಕೆ ಬೇಕಾದ ಎಲ್ಲಾ ರೀತಿಯ ನಕಲಿ ದಾಖಲಾತಿ ಸೃಷ್ಟಿಸಿದ್ದ. ಆರೋಪಿಗಳಿಂದ ನಕಲಿ ಸಹಿ ಮಾಡಿಸಿ ನೈಜವೆಂದು ಬಿಂಬಿಸಿ ನ್ಯಾಯಾಲಯಕ್ಕೆ ಆರೋಪಿತ ವಕೀಲರ ಮೂಲಕ ದಾವೆ ಹೂಡಿದ್ದ. ನಕಲಿ ಸ್ವತ್ತನ್ನು ಖಾಲಿ ಮಾಡಿಸುವ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ. ವಿಚಾರಣೆ ನಡೆಸಿ ವಾದಿ-ಪ್ರತಿವಾದಿಗಳ ನಡುವೆ ರಾಜಿ ಸಂಧಾನ ಮಾಡಿಸುವ ರೀತಿ ಕೋರ್ಟ್‌ನಲ್ಲಿ ಆದೇಶ ಪಡೆದಿದ್ದ. ಬಳಿಕ ನ್ಯಾಯಾಲಯ ಆದೇಶ ಮೇರೆಗೆ ಸ್ವತ್ತಿನಲ್ಲಿದ್ದವರನ್ನು ಎಬ್ಬಿಸಿ ಆ ಸ್ವತ್ತನ್ನು ವಶಕ್ಕೆ ಪಡೆದು ವಂಚಿಸಿದ್ದ. ಈ ಸಂಬಂಧ ಸ್ವತ್ತಿನ ಮಾಲೀಕರು ಹೈಕೋರ್ಟ್ ಮೊರೆ ಹೋಗಿದ್ದರು. ವಾದ ಆಲಿಸಿ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ನಗರ ಪೊಲೀಸರಿಗೆ 2020ರಲ್ಲಿ ನ್ಯಾಯಾಲಯವು ನಿರ್ದೇಶನ ನೀಡಿತ್ತು.