ಬೆಂಗಳೂರು: ರೈಸ್ ಪುಲ್ಲಿಂಗ್ ಯಂತ್ರ ಮಾರಾಟ ಮಾಡುವುದಾಗಿ ನಂಬಿಸಿ ಲಕ್ಷಾಂತರ ರೂ. ಪಡೆದು ವಂಚಿಸುತ್ತಿದ್ದ ಎಂಟು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ರಾಜೇಶ್ (36), ಮೊಹಮ್ಮದ್ ಗೌಸ್ (52), ಸ್ಟೀಫನ್ (38), ಸಾಹಿಲ್ (35), ಶ್ರೀನಿವಾಸ್ (35), ವಿಕಾಸ್ (27) ಕುಮಾರ್ (29) ಹಾಗೂ ಸ್ರೀವಲ್ಸನ್ (42) ಬಂಧಿತರು. ಆರೋಪಿಗಳಿಂದ ರೈಸ್ ಪುಲ್ಲಿಂಗ್ ಯಂತ್ರ ಹಾಗೂ ಸಾರ್ವಜನಿಕರಿಂದ ವಸೂಲಿ ಮಾಡಿದ್ದ 35 ಲಕ್ಷ ರೂ. ನಗದು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಹಲಸೂರು ಠಾಣಾ ವ್ಯಾಪ್ತಿಯ ಎಂ.ಜಿ ರಸ್ತೆಯಲ್ಲಿರುವ ಪಂಚತಾರ ಹೋಟೆಲ್‌ನಲ್ಲಿ ಬ್ಯುಸಿನೆಸ್ ಬೋರ್ಡ್‌ನಲ್ಲಿ ಗ್ರಾಹಕರನ್ನು ಕರೆಸಿಕೊಳ್ಳುತ್ತಿದ್ದರು. ಬಳಿಕ ತಮ್ಮ ಬಳಿ ಕೋಟ್ಯಂತರ ರೂ. ಮೌಲ್ಯದ ರೈಸ್ ಪುಲ್ಲಿಂಗ್ ಯಂತ್ರವಿದೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅದಕ್ಕೆ ಭಾರೀ ಬೆಲೆಯಿದೆ ಎಂದು ನಂಬಿಸುತ್ತಿದ್ದರು. ಗ್ರಾಹಕರು ನೋಡಲು ಬಯಸಿದರೆ ಅದೊಂದು ಶಕ್ತಿಶಾಲಿ ವಸ್ತುವಾಗಿದ್ದು, ಕಣ್ಣಿನ ದೃಷ್ಟಿ ಸಮಸ್ಯೆಯಾಗುತ್ತದೆ. ಆರೋಗ್ಯದ ಮೇಲೆ ದುಷ್ಪರಿಣಾಮ ಗಳಾಗುತ್ತವೆ ಎಂದು ನಂಬಿಸಿ ನೇರವಾಗಿ ಮಾರಾಟ ಮಾಡುವುದಾಗಿ ನಂಬಿಸುತ್ತಿದ್ದರು. ಅ ನಂತರ ಮುಂಗಡ ಹಣ ಪಡೆದುಕೊಂಡು ಏನನ್ನೂ ಕೊಡದೇ ವಂಚಿಸುತ್ತಿದ್ದರು. ಈ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಾಲು ಸಮೇತ ಆರೋಪಿಗಳನ್ನು ಬಂಧಿಸಿದ್ದಾರೆ.
ಏನಿದು ರೈಸ್ ಪುಲ್ಲಿಂಗ್? : ಅಕ್ಕಿಯನ್ನು ಆಯಸ್ಕಾಂತದಂತೆ ಆಕರ್ಷಿಸುವ ಪಂಚ ಲೋಹ ಅಥವಾ ಲೋಹದ ವಸ್ತುವನ್ನು ರೈಸ್ ಪುಲ್ಲಿಂಗ್ ಯಂತ್ರ ಎನ್ನಲಾಗುತ್ತದೆ. ಸಿಡಿಲು ಬಡಿದ ತಾಮ್ರದ ತಂಬಿಗೆಯು ಈ ಗುಣವನ್ನು ಹೊಂದಿರುತ್ತದೆ ಎಂದು ನಂಬಿಸುವ ವಂಚಕರು, ಅದನ್ನು ಮನೆಯಲ್ಲಿ ಇಟ್ಟರೆ ಅದೃಷ್ಟ ಬರುತ್ತದೆ ಎಂದು ಸಾರ್ವಜನಿಕರಿಗೆ ವಂಚಿಸುತ್ತಿದ್ದರು.