ಎಚ್.ಡಿ.ಕೋಟೆ: ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಬ್ಯಾಂಕ್‌ನಿಂದ ಸಾಲಕೊಡಿಸಿ ಮರುಪಾವತಿಗೆ ಸಂಬಂಧಿಸಿದಂತೆ ಮಹಿಳೆಯೊಬ್ಬರು ಸಹಸ್ರಾರು ರೂ. ವಂಚಿ ಸಿದ್ದಾರೆ ಎಂದು ಆಪಾದಿಸಿ ಪೊಲೀಸ್ ಠಾಣೆಗೆ ದೂರು ದಾಖಲಿಸಲಾಗಿದೆ.
ತಾಲೂಕಿನ ಜಕ್ಕಹಳ್ಳಿ ಸಾವಿತ್ರಿಬಾಫುಲೆ ಸ್ತ್ರೀ ಶಕ್ತಿ ಮಹಿಳಾ ಸಂಘದ ಸದಸ್ಯರು ಪಟ್ಟಣದ ನಿವಾಸಿ ಗಾಯತ್ರಿ ಎಂಬಾಕೆ ವಿರುದ್ಧ ದೂರು ನೀಡಿದ್ದಾರೆ. ಈಕೆ ಸಂಘಗಳಿಗೆ ಸಾಲ ಕೊಡಿಸಲು ಮಧ್ಯವರ್ತಿಯಾಗಿದ್ದು, ಕಳೆದ ಎರಡು ವರ್ಷಗಳ ಹಿಂದೆ ಐಸಿಐಸಿಐ ಬ್ಯಾಂಕ್‌ನಿಂದ 13 ಮಂದಿ ಸದಸ್ಯರಿದ್ದ ಈ ಮಹಿಳಾ ಸಂಘಕ್ಕೆ 46 ಸಾವಿರ ರೂ. ಸಾಲ ಮಂಜೂರು ಮಾಡಿಸಿಕೊಟ್ಟಿದ್ದರು.
ಈ ಪೈಕಿ 40 ಸಾವಿರ ರೂ.ಗಳನ್ನು ಮಾತ್ರ ಸಂಘಕ್ಕೆ ನೀಡಿದ್ದರು. ಉಳಿದ ಆರು ಸಾವಿರ ರೂ. ಗಳನ್ನು ಕೊಟ್ಟಿರಲಿಲ್ಲ. ಈ ಮಧ್ಯೆ, ಮರು ಪಾವತಿಗೆ ಸಂಬಂಧಿಸಿದಂತೆ ಮಾಸಿಕ ಕಂತು 2,097 ರೂ.ಗಳನ್ನು ಸಂಘದ ಸದಸ್ಯರು ಈ ಮಹಿಳೆಗೆ ನೀಡುತ್ತಿದ್ದರು. ನಿಗದಿಯಂತೆ 24 ಕಂತುಗಳ ಹಣವನ್ನು ಈಕೆ ನೀಡಿದ್ದರು. ಇಷ್ಟು ಕಂತುಗಳಿಗೆ ಸಾಲ ತೀರಬೇಕಿತ್ತು. ಈ ನಡುವೆ, ಬ್ಯಾಂಕ್‌ನಿಂದ ಎನ್‌ಒಸಿ(ನೋ ಒವರ್ ಡ್ಯೂ ಸರ್ಟಿಫಿಕೇಟ್) ಪಡೆಯಲು ಸದಸ್ಯರು ಮುಂದಾದಾಗ ಬ್ಯಾಂಕ್ ನವರು, “ಸಾಲ ತೀರಿಲ್ಲ. ಇನ್ನು 10 ತಿಂಗಳು ಹಂತನ್ನು ಪಾವತಿಸಬೇಕಿದೆ’ ಎಂದು ತಿಳಿಸಿದ್ದಾರೆ.
ಇದರಿಂದ ಆತಂಕಗೊಂಡ ಸದಸ್ಯರು ಗಾಯತ್ರಿಯನ್ನು ಪ್ರಶ್ನಿಸಿದಾಗ, “ಆಕೆ ಅಸಭ್ಯವಾಗಿ ವರ್ತಿಸುವುದರ ಜೊತೆಗೆ ದೂರು ನೀಡಿದರೆ ಆತ್ಮಹತ್ಯೆ ಮಾಡಿಕೊಳ್ಳುವ ಬೆದರಿಕೆ ಹಾಕಿದ್ದಾರೆ. ನಮಗೆ ನ್ಯಾಯ ದೊರಕಿಸಬೇಕು’ ಎಂದು ಸಂಘದ ಸದಸ್ಯರಾದ ನೇತ್ರಾವತಿ, ರೋಜ, ವಿಜಯ, ಎನ್.ಪಾರ್ವತಿ, ಛಾಯಾಕುಮಾರಿ, ಮಂಜುಳಾ ಮತ್ತಿತರರು ಎಚ್. ಡಿ.ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಗಾಯತ್ರಿ ಅವರನ್ನು ಠಾಣೆಗೆ ಕರೆಸಿವಿಚಾರಣೆ ನಡೆಸಿದಾಗ, ಸಬೂಬು ಹೇಳಿ,ಬಳಿಕ ಹಣ ಮರುಪಾವತಿ ಮಾಡುವುದಾಗಿ ಆಕೆ ಒಪ್ಪಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.