ಬೆಂಗಳೂರು: ಅಗ್ನಿಶಾಮಕ ಅಧಿಕಾರಿ ಹಾಗೂ ಕಂದಾಯ ನಿರೀಕ್ಷಕ ಕೆಲಸ ಕೊಡಿಸುವುದಾಗಿ ನಂಬಿಸಿ ಉದ್ಯೋಗಕಾಂಕ್ಷಿಯೊಬ್ಬರಿಗೆ 47 ಲಕ್ಷ ರೂ.ಪಡೆದು ವಂಚಿಸಿದ್ದ ಪ್ರಕರಣ ಬೆಳಕಿಗೆ ಬಂದಿದೆ.
ಈ ಸಂಬಂಧ ಕೆಂಗೇರಿಯ ಹರೀಶ್ ಎಂಬುವರು ಎಚ್. ಆರ್.ವೀರಭದ್ರ ಅಲಿಯಾಸ್ ಭದ್ರ ಹಾಗೂ ತೇಜಸ್ ಎಂಬವರ ವಿರುದ್ಧ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ದೂರುದಾರ ಹರೀಶ್‌ಗೆ ಸ್ನೇಹಿತರೊಬ್ಬರ ಮೂಲಕ ಆರೋಪಿ ವೀರಭದ್ರ ಪರಿಚಯವಾಗಿದ್ದು, ಈತ ತೇಜಸ್ ನನ್ನು ಪರಿಚಯಿಸಿ, ಈತನ ಮೂಲಕ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿದ್ದ. ಹರೀಶ್ ಸಂಬಂಧಿಕರಿಬ್ಬರು ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅವರಿಬ್ಬರಿಗೆ ಕೆಲಸ ಕೊಡಿಸುವುದಕ್ಕಾಗಿ ವೀರಭದ್ರ ಜತೆ ಚರ್ಚಿಸಲಾಗಿತ್ತು.
ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯಲ್ಲಿ ಅಗ್ನಿಶಾಮಕ ದಳದ ಅಧಿಕಾರಿ ಹಾಗೂ ಪೌರಾಡಳಿತ ನಿರ್ದೇಶನಾಲಯದಲ್ಲಿ ಕಂದಾಯ ನಿರೀಕ್ಷಕ (ಆರ್.ಐ) ಹುದ್ದೆಗಳು ಖಾಲಿ ಇವೆ. ಹಿರಿಯ ಅಧಿಕಾರಿಗಳು ಹಾಗೂ ರಾಜಕೀಯ ಪ್ರಭಾವಿಗಳು ಪರಿಚಯವಿದ್ದು, ಹಣ ನೀಡಿದರೆ ಸರ್ಕಾರಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ ಎಂದು ಪೊಲೀಸರು ತಿಳಿಸಿದರು.
ಆರೋಪಿ ಮಾತು ನಂಬಿದ್ದ ಹರೀಶ್, ಹಂತ- ಹಂತವಾಗಿ 47 ಲಕ್ಷ ರೂ. ಅನ್ನು ವೀರಭದ್ರ ಮತ್ತು ತೇಜಸ್‌ಗೆ ನೀಡಿದ್ದಾನೆ. ಆದರೆ, ಆರೋಪಿಗಳು ಯಾವುದೇ ಕೆಲಸ ಕೊಡಿಸಿಲ್ಲ. ಹೀಗಾಗಿ ಇಬ್ಬರ ವಿರುದ್ಧ ಕಾನೂನು ಕ್ರಮಕೈಗೊಳ್ಳಬೇಕು ಎಂದು ಹರೀಶ್ ದೂರಿನಲ್ಲಿ ಉಲ್ಲೇಖೀಸದ್ದಾರೆ.