ಕಾಪು: ಪೆಟ್ರೋಲ್ ಬಂಕ್ ಮಾಲಕನಿಗೆ ಮ್ಯಾನೇಜರ್ 18 ಲಕ್ಷ ರೂಪಾಯಿ ನಗದು ವಂಚಿಸಿರುವ ಘಟನೆ ಮೂಳೂರಿನಲ್ಲಿ ನಡೆದಿದೆ.
ರಾಷ್ಟ್ರೀಯ ಹೆದ್ದಾರಿ 66ರ ಮೂಳೂರಿನಲ್ಲಿ ಕೆ. ದೀಪಕ್‌ರಾಜ್ ಶೆಟ್ಟಿ ನಡೆಸುತ್ತಿದ್ದ ಭಾರತ್ ಪೆಟ್ರೋಲ್ ಬಂಕ್‌ನಲ್ಲಿ ಮ್ಯಾನೇಜರ್ ಆಗಿ ದುಡಿಯುತ್ತಿದ್ದ ಸುಖೇಶ್ ಶೆಟ್ಟಿ ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ.
ಪೆಟ್ರೋಲ್ ಬಂಕ್‌ಗೆ ಸಂಬಂಧಿಸಿದ ಹಣಕಾಸಿನ ವ್ಯವಹಾರವನ್ನು ಸುಖೇಶ್ ಶೆಟ್ಟಿ ನೋಡಿಕೊಂಡಿದ್ದು ಪೆಟ್ರೋಲ್ ಬಂಕ್‌ನ ಹಣವನ್ನು ಕಾರ್ಡ್ ಮೂಲಕ ಮತ್ತು ನಗದು ರೀತಿಯಲ್ಲಿ ಸುಖೇಶ್ ಶೆಟ್ಟಿ ಬ್ಯಾಂಕ್‌ಗೆ ಜಮಾ ಮಾಡಿಕೊಂಡು ಬರುತ್ತಿದ್ದನು. ಹೀಗೆ ಜಮಾ ಮಾಡಿದ ಹಣದಲ್ಲಿ ವ್ಯತ್ಯಾಸ ಕಂಡು ಬಂದ ಪರಿಣಾಮ ಕಂಪೆನಿಯ ಪ್ರತಿನಿಧಿಗಳು ಮಾಲಕರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.
ಸುಖೇಶ್ ಶೆಟ್ಟಿ ಮೇ 27ರಂದು ಸಂಜೆಯ ಬಳಿಕ ತನ್ನ ಮೊಬೈಲ್ ಅನ್ನು ಸ್ವಿಚ್ ಆಫ್ ಮಾಡಿ ತೆರಳಿದ್ದನು.
ಬಳಿಕ ಮೇ 28ರಂದು ಪೆಟ್ರೋಲ್ ಬಂಕ್‌ಗೆ ಬಂದು ನೋಡುವಾಗ ಬ್ಯಾಂಕ್ ಸ್ಟೇಟ್‌ಮೆಂಟ್, ಸೇಲ್ಸ್ ರಿಪೋರ್ಟ್, ಕಾರ್ಡ್‌ನ ಸ್ಟೇಟ್‌ಮೆಂಟ್ ಹಾಗೂ ಸೇಲ್ಸ್ ರಿಪೋರ್ಟ್ ನಲ್ಲಿ 18 ಲಕ್ಷ ರೂ. ವರೆಗೆ ರೂ. ವ್ಯತ್ಯಾಸ ಕಂಡುಬಂದಿತ್ತು.
ಆರೋಪಿತ ಸುಖೇಶ್ ಪೆಟ್ರೋಲ್ ಬಂಕ್‌ನ ಹಣವನ್ನು ಬ್ಯಾಂಕ್‌ಗೆ ಜಮಾ ಮಾಡದೆ ಮೋಸ ಮಾಡಿ ಪೆಟ್ರೋಲ್ ಬಂಕ್‌ನ ವ್ಯವಹಾರದಲ್ಲಿ 18 ಲಕ್ಷ ರೂಪಾಯಿಯನ್ನು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡು ಮೋಸ ಮಾಡಿರುವುದಾಗಿ ಬಂಕ್‌ನ ಮಾಲಕ ದೀಪಕ್‌ರಾಜ್ ಶೆಟ್ಟಿ ನೀಡಿದ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.