ಬೆಂಗಳೂರು: ಕೋಟ್ಯಂತರ ರೂ. ಬೆಲೆ ಬಾಳುವ ಪಚ್ಚೆಕಲ್ಲು ಖರೀದಿಸಲು ಸಹಕರಿಸಿದರೆ ಮಾರಾಟ ಮಾಡಿ ಬಂದ ದುಡ್ಡಿನಲ್ಲಿ ಹೆಚ್ಚಿನ ಲಾಭಾಂಶ ನೀಡುವುದಾಗಿ ಉದ್ಯಮಿಯೊಬ್ಬರಿಗೆ ಬರೋಬ್ಬರಿ 51 ಲಕ್ಷ ರೂ. ಟೋಪಿ ಹಾಕಿದ್ದಾರೆ.
ಉದ್ಯಮಿ ರಿಚ್‌ಮಂಡ್ ಟೌನ್‌ನ ನಿವಾಸಿ ಶೌಕತ್ ಅಲಿ (50) ವಂಚನೆಗೊಳಗಾದವರು. ಇವರು ನೀಡಿದ ದೂರಿನ ಆಧಾರದ ಮೇಲೆ ಅಶೋಕ್ ನಗರ ಠಾಣೆಯಲ್ಲಿ ಅಶ್ವಕ್ ಬೇಗ್, ಶಾನವಾಜ್ ಮಿರ್ಜಾ, ಸಾಜೀದ್ ವಿರುದ್ಧ ಎಫ್ಐಆರ್ ದಾಖಲಾಗಿದೆ.
15 ವರ್ಷಗಳಿಂದ ಆರೋಪಿಗಳು ದೂರುದಾರ ಶೌಕತ್ ಅಲಿಗೆ ಪರಿಚಯವಿದ್ದರು. 2023 ಏಪ್ರಿಲ್‌ನಲ್ಲಿ ದೂರವಾಣಿ ಕರೆಮಾಡಿ ನನಗೆ ಗೊತ್ತಿರುವ ಒಬ್ಬರ ಬಳಿ ಪಚ್ಚೆಕಲ್ಲು ಇದ್ದು ಅದನ್ನು ಖರೀದಿಸಲು ಕೂಡ ಒಬ್ಬರು ತಯಾರಿದ್ದು, ಅದನ್ನು ಖರೀದಿ ಮಾಡಲು ನಮ್ಮ ಬಳಿ ಹಣವಿಲ್ಲ ಎಂದು ಆರೋಪಿಗಳು ದೂರುದಾರರಿಗೆ ತಿಳಿಸಿದ್ದರು. ನೀವು ಹಣ ನೀಡಿದರೆ ಅದನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ನೀಡುವುದಾಗಿ ಆಮೀಷವೊಡ್ಡಿದ್ದರು. ಈ ಬಗ್ಗೆ ದೂರುದಾರರು ವಿಚಾರಿಸಿದಾಗ 53 ಲಕ್ಷ ರೂ. ಎಂದಿದ್ದರು.
ಆದರೆ, ಇದನ್ನು 1 ಕೋಟಿ ರೂ.ಗೆ ಖರೀದಿಸುವವರು ನಮಗೆ ಗೊತ್ತಿದ್ದಾರೆ ಎಂದು ಆರೋಪಿಗಳು ಶೌಕತ್ ಅಲಿಯನ್ನು ನಂಬಿಸಿದ್ದರು. ನೀವು ಈಗ ಹಣ ಹಾಕಿದರೆ ನಿಮ್ಮ ಹಣವನ್ನು ಡಬಲ್ ಮಾಡಿಕೊಡುವುದಾಗಿ ಹೇಳಿದ್ದರು. ಆರೋಪಿಗಳ ಮಾತಿನ ಮೋಡಿಗೆ ಮರುಳಾದ ಶೌಕತ್ ಅಲಿ, ಹಂತವಾಗಿ ಆರೋಪಿಗಳಿಗೆ 51 ಲಕ್ಷ ರೂ. ನೀಡಿದ್ದರು.
ಅಸಲು ದುಡ್ಡು ನೀಡದೇ ವಂಚನೆ: ಇದಾದ ಬಳಿಕ ಪಚ್ಚೆ ಕಲ್ಲು ಎಂದು ಯಾವುದೋ ಕಲ್ಲನ್ನು ತೆಗೆದುಕೊಂಡು ಶೌಕತ್ ಅಲಿ ಮನೆಗೆ ಬಂದ ಆರೋಪಿಗಳು ಇವರನ್ನು ವೈಟ್‌ಫೀಲ್ಡ್ ನಲ್ಲಿರುವ ಸ್ವಾಮೀಜಿಯೊಬ್ಬರ ಬಳಿ ಕರೆದೊಯ್ದು ಪರಿಚಯಿಸಿ ಇವರೇ ನಿಮ್ಮ ಪಚ್ಚೆ ಕಲ್ಲನ್ನು ತೆಗೆದುಕೊಳ್ಳುವವರು ಎಂದು ಹೇಳಿದ್ದರು. ನಂತರ ಸ್ವಾಮೀಜಿಯವರು ಕೆಲದಿನಗಳ ನಂತರ ನನ್ನಿಂದ ಪಚ್ಚೆ ಕಲು ಮಾರಾಟ ಮಾಡಲು ಆಗುವುದಿಲ್ಲವೆಂದು ತಿಳಿಸಿದ್ದರು. ನಂತರ ಆಶ್ವಾಕ್ ಅವರು ಜೈಪುರದಲ್ಲಿ ಚೀನಾದಿಂದ ಬಂದಿರುವವರು ಇದನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದಾಗ ಶೌಕತ್ ಅವರೊಂದಿಗೆ ಜೈಪುರಕ್ಕೆ ಹೋಗಿ 1 ತಿಂಗಳು ತಂಗಿದ್ದರು. ಇಷ್ಟಕ್ಕೆ ಸುಮ್ಮನಾಗದ ಆರೋಪಿಗಳು ನಾವು ಮಾರಾಟ ಮಾಡಿ ಹಣ ನೀಡುತ್ತೇವೆ, ನೀವು ಬೆಂಗಳೂರಿಗೆ ಹೋಗಿ ಎಂದು ಹೇಳಿದ್ದರು.
ಇದಾದ ಬಳಿಕ ಹಲವು ತಿಂಗಳು ಕಳೆದರೂ ಆರೋಪಿಗಳು ಅಸಲು ದುಡ್ಡು ಕೊಡದೇ, ಲಾಭಾಂಶವೂ ನೀಡದೇ ವಂಚಿಸಿರುವುದು ಶೌಕತ್ ಅಲಿ ಗಮನಕ್ಕೆ ಬಂದಿದೆ.