Advertisement
ಊರೆಲ್ಲ ಮದುವೆಯಾಗಿದ್ದದಿನೇಶ್ಗೆ ಹುಟ್ಟೂರಿನಲ್ಲಿ ಮೊದಲ ಮದುವೆಯಾಗಿತ್ತು. ಬಳಿಕ ಪತ್ನಿ, ಮಗುವನ್ನು ಬಿಟ್ಟು, ತನ್ನ ಜಾಗ ಮಾರಾಟ ಮಾಡಿ ಕೇರಳಕ್ಕೆ ಹೋಗಿ ನೆಲೆಸಿದ್ದ. ಮಂಗಳೂರು, ಬಂಟ್ವಾಳ, ಪುತ್ತೂರು, ಕೇರಳ ಹೀಗೆ ವಿವಿಧೆಡೆ ಮದುವೆಯಾಗಿದ್ದಾಗಿ ಹೇಳಲಾಗಿದೆ.
ಹತ್ತು ವರ್ಷಗಳ ಹಿಂದೆ ಕುಟುಂಬದ ದೈವಸ್ಥಾನವೊಂದರ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ದಿನೇಶ್ ಬಂದಿದ್ದ. ಆಗ ಕಾರಿನಲ್ಲೇ ಓಡಾಡುತ್ತಿದ್ದ. ಕೆಲವೊಮ್ಮೆ ಮಂಡೆಕೋಲಿಗೆ ಬರುತ್ತಿದ್ದ ಎನ್ನಲಾಗಿದೆ. ಈತನ ಹಿಂದಿನ ಕಥೆಗಳು ಮನೆ ಮಂದಿಗೂ ಗೊತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ಮಂಗಳೂರಿನಿಂದ ಕೆಲವರು ಹುಡುಕಿಕೊಂಡು ಬಂದಿದ್ದರು. ಆಗ ಅವರಿಂದ ತಪ್ಪಿಸಿಕೊಂಡು ಪರಾರಿಯಾದವ ಮರಳಿ ಬಂದಿಲ್ಲ. ಬಂದವರು ಯಾರು, ಈತ ತಪ್ಪಿಸಿಕೊಂಡದ್ದು ಏಕೆ ಎಂಬುದು ಮನೆ ಮಂದಿಗೂ ತಿಳಿದಿಲ್ಲ ಎನ್ನಲಾಗಿದೆ. ಹುಡುಕುತ್ತಾ ಬಂದಿದ್ದ ಮಹಿಳೆ
ಆರೋಪಿ ದಿನೇಶ್ ಮಂಡೆಕೋಲಿನ ಮನೆಯೊಂದಕ್ಕೆ ಬರುತ್ತಿದ್ದ ಮಾಹಿತಿ ಪಡೆದ ಬೆನ್ನಲ್ಲೇ ವಂಚನೆಗೊಳಗಾಗಿದ್ದಾರೆನ್ನಲಾದ ಮಹಿಳೆ ಮತ್ತು ಆಕೆಯ ಬಳಗದವರು ಆತ ಬಂದಿದ್ದ ಮನೆಗೆ 10 ದಿನಗಳ ಹಿಂದೆ ಆಗಮಿಸಿದ್ದಾರೆ, ಜತೆಗೆ ಆತ ಮದುವೆಯಾಗಿ ವಂಚಿಸಿದ ಬಗ್ಗೆ ಹೇಳಿಕೊಂಡಿದ್ದಾಳೆ. ಮನೆಯವರ ಜತೆ ಜಗಳವಾಡಿದ್ದಾಳೆ. ಮನೆಮಂದಿಗೆ ಮತ್ತು ದಿನೇಶ್ ಗೆ ಯಾವುದೇ ಸಂಪರ್ಕ ಸಂಬಂಧ ಇಲ್ಲ ಎಂದು ಊರವರು ಹೇಳಿದ್ದರೂ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಊರವರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ.
Related Articles
ದಿನೇಶ್ ಹಣದ ಆಸೆಗಾಗಿಯೇ ಹಲವರನ್ನು ಮದುವೆಯಾಗುತ್ತಿದ್ದುದಾಗಿ ಹೇಳಲಾಗಿದೆ. ಇದಕ್ಕಾಗಿ ಆತ ಬಡ ಯುವತಿಯರು ಮತ್ತು ವಿಧವೆಯರನ್ನೇ ಟಾರ್ಗೆಟ್ ಮಾಡುತ್ತಿದ್ದ. ವಿಧವೆಯರಿಗೆ ಆಸರೆಯಾಗುವ ಆಮಿಷವೊಡ್ಡಿ ಅವರನ್ನು ವಂಚಿಸುತ್ತಿದ್ದ. ಈತನಲ್ಲಿ ಹಲವು ದೂರವಾಣಿ ಸಂಖ್ಯೆಗಳಿದ್ದು, ಬೇರೆ-ಬೇರೆಯವರೊಂದಿಗೆ ವ್ಯವಹರಿಸುತ್ತಿದ್ದ. ತನ್ನ ಮಾತಿನ ಚಾತುರ್ಯ ಮತ್ತು ಸೌಂದರ್ಯದ ಮೂಲಕ ಮಹಿಳೆಯರನ್ನು ಖೆಡ್ಡಾಕ್ಕೆ ಬೀಳಿಸಿ, ವಿವಾಹದ ನಾಟಕವಾಡಿ ಕೊನೆಗೆ ಅವರ ಆಸ್ತಿ, ಚಿನ್ನಾಭರಣ ಲಪಟಾಯಿಸುತ್ತಿದ್ದ. ಪುತ್ತೂರಿನ ಮಹಿಳೆಗೆ 7 ಲಕ್ಷ ರೂ. ವಂಚಿಸಿದ್ದ ಎಂಬ ಮಾಹಿತಿ ಹಬ್ಬಿದೆ.
Advertisement
ತನ್ನ ಹೆಂಡತಿಯನ್ನೇ ಮಾರಲು ಯತ್ನಿಸಿದ್ದ!ಆರೋಪಿ ದಿನೇಶ್ ತನ್ನ ಹೆಂಡತಿಯ ಮಾರಾಟಕ್ಕೆ ಯತ್ನಿಸಿದ್ದ. ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಆಕೆ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಲಾಡ್ಜ್ ಕೋಣೆಯ ಬಾಗಿಲು ಹಾಕಿ ಖರೀದಿದಾರರನ್ನು ಕರೆತರಲು ಹೋಗಿದ್ದ. ಆಕೆ ಅದು ಹೇಗೋ ಆ ವಿಷವರ್ತುಲದಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ. ಒಟ್ಟು ಪ್ರಕರಣ ಸಂಬಂಧ ದೂರು ಕೊಟ್ಟರೆ ಸ್ವೀಕರಿಸಿ ತನಿಖೆ ಮಾಡುವುದಾಗಿ ಎಸ್ಪಿ ರವಿಕಾಂತೇಗೌಡ ಹಾಗೂ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ‘ಉದಯವಾಣಿ’ಗೆ ತಿಳಿಸಿದ್ದಾರೆ.