ನೆಲಮಂಗಲ: ಬಡಜನರಿಗೆ ಸರ್ಕಾರ ಉಚಿತವಾಗಿ ನಿವೇಶನ ನೀಡಲು ಮುಂದಾದರೆ ಗ್ರಾಪಂ ಅಭಿವೃದ್ಧಿ ಅಧಿಕಾರಿಯ ನಕಲಿ ಸಹಿ ಮಾಡಿ ನಿವೇಶನ ಹಂಚಿಕೆ ಮಾಡಿದ್ದಾರೆಂದು ಆರೋಪಿಸಿ ಮನೆ ನಿರ್ಮಾಣ ಸ್ಥಳದಲ್ಲಿ ಗ್ರಾಮಸ್ಥರು ಗಲಾಟೆ ಮಾಡಿದ ಘಟನೆ ತಾಲೂಕಿನ ವಡೇರಹಳ್ಳಿ ಹಾಗೂ ಪಿಳ್ಳಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪಟ್ಟಣದ ಬಳಿಯ ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ವಡೇರಹಳ್ಳಿ ಹಾಗೂ ಪಿಳ್ಳಹಳ್ಳಿ ಗ್ರಾಮದಲ್ಲಿ ಸರ್ವೆ ನಂಬರ್ 53ರಲ್ಲಿರುವ ಸುಮಾರು 12ಎಕರೆ ಜಾಗದಲ್ಲಿ ಕಡುಬಡವರಿಗೆ ಹಂಚಿಕೆ ಮಾಡಬೇಕಾದ ನಿವೇಶನಗಳಲ್ಲಿ ಅಕ್ರಮ ನಡೆದಿದೆ ಎಂದು ಗ್ರಾಮಸ್ಥರು ಆರೋಪ ಮಾಡಿದರು.
ಏನಿದು ಘಟನೆ: ಪಟ್ಟಣ ಸಮೀಪದಲ್ಲಿರುವ ಬೆಂಗಳೂರು ಉತ್ತರ ತಾಲೂಕಿಗೆ ಸೇರಿದೆ ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಪಿಳ್ಳಳ್ಳಿ ಸರ್ವೆ ನಂಬರ್ 53ರಲ್ಲಿರುವ ಸರ್ಕಾರಿ ಜಾಗದಲ್ಲಿ ಉಚಿತ ನಿವೇಶನ ಹಂಚಿಕೆ ಮಾಡಿದ್ದು, ರಾತ್ರೋರಾತ್ರಿ ಮನೆಗಳು ಹಾಗೂ ತಾತ್ಕಾಲಿಕ ಗುಡಿಸಲುಗಳು ನಿರ್ಮಾಣವಾಗಿವೆ. ಶಾಸಕರ ಬೆಂಬಲಿಗರು, ಸ್ಥಿತಿವಂತರು ಹಾಗೂ ಹೊರಗಿನವರಿಗೆ ನಿವೇಶನಗಳ ಹಂಚಿಕೆಯಾಗಿದ್ದು, ತಮ್ಮ ಹೆಸರಿಗೆ ಬಂದಿರುವ ನಿವೇಶನಗಳನ್ನು ಈಗಾಗಲೇ ಮಾರಾಟಕ್ಕೆ ಮಾತುಕತೆ ಮಾಡಿದ್ದಾರೆ.
ಹುಸ್ಕೂರು ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ದಾಖಲೆಗಳನ್ನೇ ನಕಲಿ ಮಾಡಿ, ಅಧಿಕಾರಿಗಳ ಮೊಹರು ಮತ್ತು ಸಹಿ ನಕಲಿ ಮಾಡಿ ಸ್ಥಳೀಯ ನಿರ್ಗತಿಕರಿಗೆ ನಿವೇಶನ ನೀಡದೇ ಶಾಸಕರ ಬೆಂಬಲಿಗರಿಗೆ ಹಾಗೂ ಸ್ಥಿತಿವಂತರಿಗೆ ನಿವೇಶನ ನೀಡಿರುವುದರಿಂದ ಸ್ಥಳೀಯ ಗ್ರಾಮಗಳ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ ಎಂದು ಹುಸ್ಕೂರು ಗ್ರಾಮ ಪಂಚಾಯತಿ ಅಧ್ಯಕ್ಷ ಸೋಮಶೇಖರ್ ತಿಳಿಸಿದರು.
ಕೆಂಡವಾದ ಗ್ರಾಮಸ್ಥರು: ಉಚಿತ ನಿವೇಶನಗಳನ್ನು ಉಳ್ಳವರಿಗೆ ನೀಡಿದ್ದಾರೆ ಎಂದು ಹುಸ್ಕೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಾಮಗಳ ನೂರಾರು ಜನರು ಪ್ರಶ್ನೆ ಮಾಡುತ್ತಿದ್ದಂತೆ, ಈಗಾಗಲೇ ನಿವೇಶನ ಪಡೆದು ಮನೆ ನಿರ್ಮಾಣ ಮಾಡುತ್ತಿರುವ ಜನರು ಗಲಾಟೆಗೆ ಮುಂದಾದರು. ಆ ಸಂದರ್ಭದಲ್ಲಿ ಪೊಲೀಸರಿಲ್ಲದ ಕಾರಣ ನಿವೇಶನ ಪಡೆದಿರುವ ಜನರು ಹಾಗೂ ನಿವೇಶನ ವಂಚಿತರಾದ ಜನರು ಕೆಂಡಾಮಂಡಲವಾಗಿ ಮಾತಿನ ಚಕಮಕಿ ನಡೆದು, ಭಾರೀ ಗಲಾಟೆಗೆ ಕಾರಣವಾಯಿತು. ಸ್ಥಳೀಯ ಮುಖಂಡರು ಗಲಾಟೆಯನ್ನು ತಡೆಯುವಲ್ಲಿ ಯಶಸ್ವಿಯಾದರು. ಎರಡು ಗುಂಪುಗಳ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಾಗಿದೆ.
ನಕಲಿ ಸಹಿ: ಕಡುಬಡವರಿಗೆ ಉಚಿತ ನಿವೇಶನ ನೀಡಲು 12 ಎಕರೆ ಜಾಗವನ್ನು ಗುರುತಿಸಿದ್ದು, ಮನೆಗಳ ನಿರ್ಮಾಣಕ್ಕೆ ಹಾಗೂ ನಿವೇಶನ ಹಂಚಿಕೆಗೆ ಅಧಿಕಾರಿಗಳು ಮುಂದಾಗಿಲ್ಲ. ಪ್ರಭಾವಿಗಳ ಮೋಸದಿಂದ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಯ ಸಹಿಯನ್ನು ನಕಲಿ ಮಾಡಿ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಹುಸ್ಕೂರು ಗ್ರಾಪಂ ಪಿಡಿಒ ಅಧ್ಯಕ್ಷರಿಗೆ ದಾಖಲೆ ನೀಡಿದ್ದಾರೆ. ಈ ಅಕ್ರಮದಲ್ಲಿ ಪಾಲುದಾರರಾಗಿರುವ ಪ್ರತಿಯೊಬ್ಬರಿಗೂ ಕಾನೂನು ರೀತಿ ಶಿಕ್ಷೆಯಾಗಿ, ಬಡಜನರಿಗೆ ನಿವೇಶನ ಸಿಗಬೇಕೆಂದು ಗ್ರಾಪಂ ಅಧ್ಯಕ್ಷ ಸೋಮಶೇಖರ್ ದಾಖಲೆಗಳನ್ನು ಪ್ರದರ್ಶಿಸಿದರು.
ಈ ಸಂದರ್ಭದಲ್ಲಿ ಹುಸ್ಕೂರು ಗ್ರಾಮ ಪಂಚಾಯತಿ ಉಪಾಧ್ಯಕ್ಷೆ ಪದ್ಮಾ ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಡೇರಹಳ್ಳಿ ಜಯರಾಮ್, ತಾಲೂಕು ಪಂಚಾಯತಿ ಸದಸ್ಯ ರವಿ, ತಾಪಂ ಮಾಜಿ ಸದಸ್ಯ ಹನುಮೇಗೌಡ್ರು ಹಾಗೂ ಗ್ರಾಮ ಪಂಚಾಯತಿ ಕೆಲ ಸದಸ್ಯರು ಹಾಗೂ ವಿವಿಧ ಗ್ರಾಮಗಳ ಮುಖಂಡರು ಮತ್ತು ನಿವೇಶನ ಆಕಾಂಕ್ಷಿಗಳು ಹಾಜರಿದ್ದರು.