Advertisement

Fraud Case ಬಿಟ್‌ ಕಾಯಿನ್‌ ಹೂಡಿಕೆ ಮಾಡಿಸಿ ಲಕ್ಷಾಂತರ ವಂಚನೆ; ದೂರು

12:11 AM Jul 03, 2024 | Team Udayavani |

ಮಂಗಳೂರು: ಫೇಸ್‌ಬುಕ್‌ ಮೂಲಕ ಪರಿಚಯವಾದ ವ್ಯಕ್ತಿಯೊಬ್ಬ ಬಿಟ್‌ ಕಾಯಿನ್‌ ಹೂಡಿಕೆ ಮಾಡುವಂತೆ ನೀಡಿದ ಸಲಹೆಯಂತೆ ಹೂಡಿಕೆ ಮಾಡಿ ಲಕ್ಷಾಂತರ ರೂ. ಕಳೆದುಕೊಂಡಿರುವ ಕುರಿತಂತೆ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಫೇಸ್‌ಬುಕ್‌ನಲ್ಲಿ ಪರಿಚಯವಾದ ವ್ಯಕ್ತಿ ವಿಯಕಾ ವೆಬ್‌ಸೈಟ್‌ನಲ್ಲಿ ಸೇರಲು ದೂರುದಾರರಿಗೆ ಸೂಚಿಸಿದ್ದು, ಅದರಂತೆ 75 ಜನರಿದ್ದ ಗ್ರೂಪ್‌ನಲ್ಲಿ ಒಟ್ಟು 3 ಲಕ್ಷ ರೂ. ಹೂಡಿಕೆ ಮಾಡಿದ್ದರು. ಇದರಿಂದ 20 ಲಕ್ಷ ರೂ. ವರೆಗೆ ಲಾಭವಾಗಿತ್ತು. ಮತ್ತೆ ಆತನ ಶಿಫಾರಸಿನಂತೆ ವ್ಯವಹಾರ ಮಾಡಿ ಎಲ್ಲವನ್ನು ಕಳೆದುಕೊಂಡಿದ್ದರು. ಈ ಬಗ್ಗೆ ಆತನಲ್ಲಿ ಕೇಳಿದಾಗ ಎಕ್ಸ್‌ಚೇಂಜ್‌ನಲ್ಲಿ ಹೊಸ ಕಾಯಿನ್‌ (ಶೇರ್‌ ತರಹ) ಬಿಡುಗಡೆ ಆಗುತ್ತಿದೆ ಅದಕ್ಕೆ ಅಪ್ಲೈ ಮಾಡಿದರೆ ತುಂಬ ಲಾಭ ಬರುತ್ತದೆ ಎಂದು ನಂಬಿಸಿದ್ದ.

ಕಳೆದುಕೊಂಡಿರುವ ಹಣವನ್ನು ಮತ್ತೆ ಗಳಿಸುವ ಉದ್ದೇಶದಿಂದ ಬ್ಯಾಂಕ್‌ನಲ್ಲಿ ಚಿನ್ನವನ್ನು ಅಡವಿಟ್ಟು ಸಾಲ ಮಾಡಿದ್ದರು. ವಿಯಕಾ ಕಸ್ಟಮರ್‌ ಕೇರ್‌ ಎಂದು ಪರಿಚಯಿಸಿಕೊಂಡಿದ್ದ ರವಿ ಕುಮಾರ್‌ನ ಸೂಚನೆಯಂತೆ ಅವರ ಅಕೌಂಟ್‌ನಿಂದ 16,29,410 ರೂ. ವನ್ನು ಹೂಡಿಕೆ ಮಾಡಿದ್ದರು. ಇದರಲ್ಲಿ ತುಂಬಾ ಲಾಭ ಕಂಡು ಬಂದಿದ್ದು, ಅದನ್ನು ತೆಗೆಯಲು ಹೋದಾಗ ಜೂ.23ರ ವರೆಗೆ ಡೆಪಾಸಿಟ್‌ ಮೊಬಿಲೈಸೇಶನ್‌ ಅವಧಿ ಆಗಿರುವುದರಿಂದ ತೆಗೆಯಲು ಆಗುವುದಿಲ್ಲ ಎಂದು ಬಂದಿದೆ.

ಜೂ. 24ರಂದು ಮತ್ತೆ ತೆಗೆಯಲು ಹೋದಾಗ ಭಾರತದಲ್ಲಿ ಕಪ್ಪು ಹಣದ ಹಾವಳಿ ಇದೆ. ನಿನ್ನಲ್ಲಿ ಇರುವ ಎಲ್ಲ ಕಾಯಿನ್‌ಗಳನ್ನು ಮಾರಿ ಬಿಡು ಎಂದು ಆತ ಹೇಳಿದ್ದಾನೆ. ಹಾಗೆ ಮಾಡಿದ ಬಳಿಕ ವೆರಿಫಿಕೇಶನ್‌ ಆಗಿ ಪ್ರೊಸೆಸ್‌ ಆಗಬೇಕು. ಅದಕ್ಕೆ ಶೇ.10ರಷ್ಟು ದುಡ್ಡು ಕಟ್ಟಬೇಕು ಎಂದೂ ತಿಳಿಸಿದ್ದಾನೆ. ದೂರುದಾರರು ನನ್ನಲ್ಲಿ ಅಷ್ಟು ಮೊತ್ತ ಇಲ್ಲ ಎಂದು ಹೇಳಿದಾಗ, ಹಾಗಾದರೆ ನಿನ್ನ ಎಲ್ಲ ಬ್ಯಾಲೆನ್ಸ್‌ ಮುಟ್ಟುಗೋಲು ಹಾಕುತ್ತಾರೆ ಎಂದು ಹೆದರಿಸಿದ್ದಾನೆ. ಹೂಡಿಕೆ ಮಾಡಿದ ಹಣವನ್ನು ಮರಳಿ ನೀಡದೆ ಮೋಸ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next