ಬೆಂಗಳೂರು: ಬಿಬಿಎಂಪಿಯಲ್ಲಿ ಮಾರ್ಷಲ್ ಕೆಲಸ ಕೊಡಿಸುವುದಾಗಿ ನಂಬಿಸಿ ಅಮಾಯಕರಿಂದ ಹಣ ಪಡೆದು ನಕಲಿ ಪ್ರಮಾಣ ಪತ್ರ ನೀಡಿ ವಂಚಿಸಿದ್ದ ಆರೋಪಿಯನ್ನು ಹಲಸೂರು ಗೇಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಜೆ.ಪಿ.ನಗರ ನಿವಾಸಿ ಹರ್ಷ(23) ಬಂಧಿತ. ಆರೋಪಿಯಿಂದ ಬಿಬಿಎಂಪಿ ಗುರುತಿನ ಚೀಟಿ, ಪ್ಯಾನ್ ಕಾರ್ಡ್, ನಕಲಿ ನೇಮಕಾತಿ ಪತ್ರಗಳು, ಫೋನ್ ಪೇ ಮಾಡಿ ಹಣ ಪಡೆದಿರುವ ಬಗ್ಗೆ ಮೊಬೈಲ್ ಸ್ಕ್ರಿನ್ ಶಾಟ್ ಪ್ರತಿಗಳನ್ನು ಜಪ್ತಿ ಮಾಡಲಾಗಿದೆ.
ವಂಚನೆಗೊಳಗಾದ ಸಂದೀಪ್ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಲಾಗಿದೆ. ಎಸ್‌ಎಸ್‌ಎಲ್‌ಸಿ ವ್ಯಾಸಂಗ ಮಾಡಿರುವ ಆರೋಪಿ, ಕೊರೊನಾ ಸಂದರ್ಭದಲ್ಲಿ ಬಿಬಿಎಂಪಿ ಕೋವಿಡ್ ವಾರ್ ರೂಮ್‌ನಲ್ಲಿ ಡೇಟಾ ಎಂಟ್ರಿ ಕೆಲಸಕ್ಕೆ ಸೇರಿದ್ದ. ಈ ವೇಳೆ ಬಿಬಿಎಂಪಿಯಿಂದ ತಾತ್ಕಾಲಿಕ ಗುರುತಿನ ಚೀಟಿ ಕೊಡಲಾಗಿತ್ತು. ಕೋವಿಡ್ ಪರಿಸ್ಥಿತಿ ಸುಧಾರಿಸಿದಾಗ ಕೆಲಸ ಬಿಟ್ಟಿದ್ದ. ಆದರೆ, ಗುರುತಿನ ಚೀಟಿ ಕೊಟ್ಟಿರಲಿಲ್ಲ. ಬಿಬಿಎಂಪಿಯಲ್ಲಿ ಮಾರ್ಷಲ್ ಉದ್ಯೋಗಕ್ಕೆ ಬೇಡಿಕೆ ಇದ್ದ ವಿಚಾರ ತಿಳಿದ ಆರೋಪಿ ತಾನು ಬಿಬಿಎಂಪಿ ನೌಕರರ ಎಂದು ಹೇಳಿಕೊಂಡು ಮಾರ್ಷಲ್ ಉದ್ಯೋಗ ಕೊಡಿಸುವುದಾಗಿ ಆಕಾಂಕ್ಷಿಗಳಿಂದ ಹಣ ಪಡೆದು ವಂಚಿಸಿದ್ದಾನೆ ಎಂದು ಪೊಲೀಸರು ಹೇಳಿದರು.
3 ಸಾವಿರ ರೂ. ಗೆ ಮಾರ್ಷಲ್ ಕೆಲಸ ! ಉದ್ಯೋಗಕ್ಕಾಗಿ ಹುಡುಕಾಡುತ್ತಿರುವ ಯುವಕರನ್ನು ವಿವಿಧ ಮಾರ್ಗದಲ್ಲಿ ಪತ್ತೆ ಹಚ್ಚಿ ತಾನೇ ಸಂಪರ್ಕಿಸುತ್ತಿದ್ದ ಆರೋಪಿ, ತಾನು ಬಿಬಿಎಂಪಿ ನೌಕರ ಎಂದು ಗುರುತಿನ ಚೀಟಿ ತೋರಿಸಿ ಪರಿಚಯಿಸಿಕೊಳ್ಳುತ್ತಿದ್ದ. ಬಳಿಕ ಕೇವಲ 3 ಸಾವಿರ ರೂ. ಕೊಟ್ಟರೆ ಬಿಬಿಎಂಪಿಯಲ್ಲಿ ನೇರ ನೇಮಕಾತಿ ಮೂಲಕ ಮಾರ್ಷಲ್ ಕೆಲಸ ಕೊಡಿಸುತ್ತೇನೆ ಎಂದು ನಂಬಿಸಿದ್ದ. ಹೀಗೆ ಫೋನ್ ಪೇ ಮೂಲಕ 3 ಸಾವಿರ ರೂ. ನಂತೆ ಅಂದಾಜು 200 ಉದ್ಯೋಗಿಗಳಿಂದ ಆರು ಲಕ್ಷ ರೂ. ಪಡೆದಿದ್ದ. ಆ ನಂತರ ಆನ್‌ಲೈನ್‌ನಲ್ಲಿ ಬಿಬಿಎಂಪಿ ಲೋಗೋ ಡೌನ್‌ಲೋಡ್ ಮಾಡಿಕೊಂಡು ನಕಲಿ ನೇಮಕಾತಿ ಪ್ರತಿ ಸಿದ್ದಪಡಿಸಿ ಆಕಾಂಕ್ಷಿಗಳಿಗೆ ವಾಟ್ಸ್‌ಆ್ಯಪ್ ಮೂಲಕ ಕಳುಹಿಸುತ್ತಿದ್ದ. ಆರೋಪಿ ಕಳುಹಿಸಿದ್ದ ನೇಮಕಾತಿ ಪತ್ರ ಹಿಡಿದು ಕೆಲ ಯುವಕರು ಬಿಬಿಎಂಪಿ ಕಚೇರಿಗೆ ಹೋಗಿದ್ದರು. ಈ ವೇಳೆ ಇದು ನಕಲಿ ಎಂಬುದು ಗೊತ್ತಾಗಿದೆ. ಈತನಿಂದ ವಂಚನೆಗೆ ಒಳಗಾಗಿದ್ದವರ ಪೈಕಿ ಸಂದೀಪ್ ಎಂಬಾತ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಗರ್ಲ್ ಫ್ರೆಂಡ್ಸ್‌ಗೆ ವಂಚನೆ ಹಣ ವ್ಯಯ: ಉದ್ಯೋಗಾಂಕ್ಷಿಗಳಿಂದ ಪಡೆದುಕೊಂಡಿದ್ದ ಹಣವನ್ನು ಆರೋಪಿ ಹರ್ಷ ತನ್ನ ಪ್ರೇಯಸಿಗೆ
ವ್ಯಯಿಸಿದ್ದಾನೆ. ಆಕೆ ಜತೆ ಸುತ್ತಾಡಿ, ಐಫೋನ್, ಪ್ರತಿಷ್ಠಿತ ಕಂಪನಿಗಳ ಬಟ್ಟೆಗಳು ಸೇರಿ ದುಬಾರಿ ಮೌಲ್ಯದ ವಸ್ತುಗಳನ್ನು ಉಡುಗೊರೆಯಾಗಿ ನೀಡಿದ್ದಾನೆ ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.