ಬೆಂಗಳೂರು: ಟೆಕ್ಸ್‌ಟೈಲ್ಸ್ ಉತ್ಪನ್ನಗಳಲ್ಲಿ ಮ್ಯಾಗ್ನೆಟಿಕ್ ಅಂಶವಿದೆ ಎಂದು ಸುಳ್ಳು ಪ್ರಚಾರ ಮಾಡಿ, ಸಾವಿರಾರು ಮಂದಿಯಿಂದ ನಗದು ಠೇವಣಿ ಸಂಗ್ರಹಿಸಿ ವಂಚಿಸುತ್ತಿದ್ದ ಇ-ಬಯೋಟೋರಿಯಂ ನೆಟ್‌ವರ್ಕ್ ಪ್ರೈವೇಟ್.ಲಿ.ನ ನಾಲ್ವರು ಆರೋಪಿಗಳನ್ನು ಹೈಗ್ರೌಂಡ್ಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮಧ್ಯ ಪ್ರದೇಶದ ಇಂದೋರ್ ನಗರ ನಿವಾಸಿ ಹಾಗೂ ವಂಚಕ ಕಂಪನಿಯ ಮಾಲೀಕ ಸುನೀಲ್ ಜೋಶಿ(57), ಬೆಂಗಳೂರು ಶಾಖೆಯ ಮುಖ್ಯಸ್ಥ, ಸುಭಾಷನಗರ ನಿವಾಸಿ ಸಾದಿಕ್ ಸಲಿ (33), ಸುಬ್ರಹ್ಮಣ್ಯಪುರ ನಿವಾಸಿ ಯೋಗೀಶ್(44) ಮತ್ತು ಸಂಸ್ಥೆ ಪರಿಚಯಿಸುವ ಉತ್ಪನ್ನಗಳ ಬಗ್ಗೆ ಸಾರ್ವಜನಿಕ ಮಾಹಿತಿ ನೀಡುವ ಗೋವಾ ಮೂಲದ ಪ್ರಮೋದ್ ಗೋಪಿನಾಥ್ ನಾಯಕ್(52) ಬಂಧಿತರು.
ಆರೋಪಿಗಳಿಂದ ಕೆಲ ಉತ್ಪನ್ನಗಳು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು.
ಆರೋಪಿಗಳು ಇತ್ತೀಚೆಗೆ ಅಂಬೇಡ್ಕರ್‌ಭವನದಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದರು. ಅದರಲ್ಲಿ ಮಾನವನ ಆರೋಗ್ಯಕ್ಕೆ ಸಂಬಂಧಿಸಿದ ಮ್ಯಾಗ್ನೆಟಿಕ್ ಉತ್ಪನ್ನಗಳ ಮಾರಾಟ ಮಾಡಿ ಲಾಭ ಪಡೆಯುವ ಉದ್ದೇಶದಿಂದ, ಬಿ.ಪಿ. ಆಕ್ಸಿಜನ ಲೆವಲ್ ಹಾಗೂ ಇನ್ನು ಇತರೆ ಆರೋಗ್ಯ ಸಮಸ್ಯೆಗಳನ್ನು ಸಮತೋಲನದಲ್ಲಿ ಇಟ್ಟುಕೊಳ್ಳುವ ಉಪಕರಣಗಳನ್ನು ಪರಿಚಯಿಸುತ್ತಿದ್ದರು. ಈ ವಸ್ತುಗಳನ್ನು ವಿವಿಧ ಮಾದರಿಯಲ್ಲಿ ಮಾರಾಟ ಮಾಡಬಹುದೆಂದು ಪ್ರಚೋದನೆ ನೀಡುತ್ತಿದ್ದರು. ಅಲ್ಲದೆ, ಇದೇ ವೇಳೆ ಈ ರೀತಿ ವಸ್ತುಗಳ ಮಾರಾಟ ಮಾಡಿ ಕಂಪನಿಗೆ ಹಾಗೂ ವೈಯಕ್ತಿಕವಾಗಿಒಂದೂವರೆ ಲಕ್ಷ ರೂ.ನಿಂದ 10 ಲಕ್ಷ ರೂ.ವರೆಗೆ ಹಣ ಗಳಿಸಿರುವ ವ್ಯಕ್ತಿಗಳಿಗೆ ಸನ್ಮಾನ ಮಾಡಲಾಗಿತ್ತು.
ಹೀಗೆ ಸಾವಿರಾರು ಮಂದಿಯನ್ನು ಕಾರ್ಯಕ್ರಮಕ್ಕೆ ಕರೆಸಿಕೊಂಡು, ಚೈನ್‌ಲಿಂಕ್ ಮಾದರಿಯಲ್ಲಿ ವ್ಯವಹಾರ ನಡೆಸಿದರೆ ಭಾರೀ ಲಾಭ ಬರುತ್ತದೆ ಎಂದು ನಂಬಿಸಿ ವಂಚಿಸುತ್ತಿದ್ದರು.ಈ ಮಾಹಿತಿ ಪಡೆದು ಹೈಗ್ರೌಂಡ್ಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸಗೌಡ ಹೇಳಿದರು.
ಸಾವಿರಾರು ಮಂದಿಯನ್ನು ಕರೆಸಿಕೊಂಡು, ಚೈನ್‌ಲಿಂಕ್ ಮಾದರಿಯಲ್ಲಿ ಕಂಪನಿ ಹೆಸರಿನಲ್ಲಿ ವ್ಯವಹಾರ ನಡೆಸಬೇಕು. ಅದಕ್ಕೆ ಮುಂಗಡವಾಗಿ ಠೇವಣಿ ಇರಿಸಬೇಕು. ಹೆಚ್ಚಿನ ಜನ ಸೇರಿಸಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಆಮಿಷವೊಡ್ಡಿ ಕಾರ್ಯಕ್ರಮ ಆಯೋಜಿಸುತ್ತಿದ್ದರು. ಮೊದಲೇ ಅನೇಕ ಮಂದಿಯನ್ನು ಕಂಪನಿಗೆ ಸೇರಿಸಿಕೊಂಡು, ಅವರನ್ನು ಸಾಧಕರೆಂದು ತೋರಿಸಿ ಸನ್ಮಾನ ಮಾಡಿ ಚೈನ್‌ಲಿಂಕ್ ವ್ಯವಹಾರ ನಡೆಸುತ್ತಿದ್ದರು ಎಂದು ಹೇಳಿದರು.