ಬೆಂಗಳೂರು: ನಮ್ಮ ಕಂಪನಿಯ ವಸ್ತುವನ್ನು ಖರೀದಿಸಿದವರಿಗೆ ಉಚಿತ ಪ್ರವಾಸದ ಟಿಕೆಟ್ ನೀಡುತ್ತಿದ್ದೆವೆ. ದಂಪತಿಗಳು ಬಂದು ಗಿಫ್ಟ್ ಓಚರ್ ಪಡೆದುಕೊಳ್ಳಿ ಎಂದು ಕರೆದು ವಂಚಿಸಿರುವ ಬಗ್ಗೆ ಮಹಿಳೆಯೊಬ್ಬರು ಗ್ರಾಹಕ ನ್ಯಾಯಾಲಯದ ಮೆಟ್ಟಿಲೇರಿದ್ದು, ಬಡ್ಡಿ ಸಹಿತ ಪರಿಹಾರ ನೀಡಲು ಆದೇಶಿದೆ.
ಮಹಿಳೆಯೊಬ್ಬರಿಗೆ ನವದೆಹಲಿ ಮೂಲದ ಟೂರ್ ಆ್ಯಂಡ್ ಟ್ರಾವಲ್ ಸಂಸ್ಥೆಯು ಮೂರು ದಿನದ ದಂಪತಿಗಳ ಉಚಿತ ಪ್ರವಾಸದ ಟಿಕೆಟ್ ನೀಡುವುದಾಗಿ ಆಮಿಷವೊಡ್ಡಿ 2.50 ಲಕ್ಷ ರೂ. ಪಡೆದು ವಂಚಿಸಿತ್ತು. 2.50 ಲಕ್ಷ ರೂ.ಗೆ ಶೇ.12 ಬಡ್ಡಿ ಹಾಗೂ ಮಾನಸಿಕ ಕಿರುಕುಳಕ್ಕೆ 10,000 ರೂ. ಹಾಗೂ 5,000 ರೂ.ಪಾವತಿಸುವಂತೆ ತೀರ್ಪು ನೀಡಲಾಗಿದೆ.
ಎಲೆಕ್ಟ್ರಾನಿಕ್ ಸಿಟಿ ನಿವಾಸಿ ಶರಣ್ಯ ಹರಿಕೃಷ್ಣ ಅವರಿಗೆ ನವ ದೆಹಲಿ ಮೂಲದ ಟೂರ್ ಆ್ಯಂಡ್ ಟ್ರಾವಲ್ಸ್ ಕಂಪನಿಯೊಂದರ ಸಿಬ್ಬಂದಿ ಕರೆ ಮಾಡಿ, ಪ್ರವಾಸ ಸಂಬಂಧಿಸಿದ ಸಭೆಯೊಂದು ನಡೆಯಲಿದೆ. ಇದರಲ್ಲಿ ಭಾಗವಹಿಸಿದರೆ 10,000 ರೂ. ವೆಚ್ಚದ ಟೂರ್ ಗಿಫ್ಟ್ ಜತೆಗೆ ಜೋಡಿಗೆ ಉಚಿತ ಚಲನಚಿತ್ರದ ಟಿಕೆಟ್ ನೀಡಲಾಗುತ್ತದೆ. ಇದರಲ್ಲಿ ಯಾವುದೇ ಒಳ ಷರತ್ತುಗಳಿಲ್ಲ ಎನ್ನುವುದಾಗಿ ತಿಳಿಸಿ, ವಾಟ್ಸಾಪ್ ಮೂಲಕ ವಿಳಾಸ ನೀಡಿದ್ದರು.
ಇದನ್ನೂ ಓದಿ: ಕೊಡಗು, ಹಾಸನದ ಹಲವೆಡೆ ಭೂಕಂಪನ: ರಿಕ್ಟರ್ ಮಾಪಕದಲ್ಲಿ 3.4 ತೀವ್ರತೆ ದಾಖಲು
ಕಾರ್ಯಕ್ರಮದಲ್ಲಿ ಭಾಗವಹಿಸಿದ ಶರಣ್ಯ ಅವರಿಗೆ ಯಾವುದೇ ರೀತಿಯಾದ ಮಾಹಿತಿ ನೀಡದೆ, ದಾಖಲೆಯನ್ನು ಪರಿಶೀಲಿಸಲು ಅವಕಾಶ ನೀಡದೆ ಒತ್ತಾಯಪೂರ್ವಕವಾಗಿ ಸಹಿ ಪಡೆದುಕೊಂಡಿದ್ದರು. ಸದಸ್ಯತ್ವ ನೀಡುವುದಾಗಿ ಆಮಿಷವೊಡ್ಡಿ ದೂರುದಾರರಿಂದ ಟೂರ್ ಟ್ರಾವೆಲ್ಸ್ ಸಂಸ್ಥೆ 2.50 ಲಕ್ಷ ರೂ. ಪಡೆದುಕೊಂಡಿದೆ. ಸದಸ್ಯತ್ವದ ಹಣವನ್ನು ಮರುಪಾವತಿಸುವುದಾಗಿ ಭರವಸೆ ನೀಡುವುದರ ಜತೆಗೆ ಒಪ್ಪಂದ ಪ್ರತಿಯನ್ನು ಇ-ಮೇಲ್ ಮೂಲಕ ಕಳುಹಿಸುವುದಾಗಿ ತಿಳಿಸಿದ್ದರು. ಇದಾದ ಬಳಿಕ ಟೂರ್ ಟ್ರಾವಲ್ಸ್‌ನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯು ಗ್ರಾಹಕರ ನ್ಯಾಯಾಲಯದ ಮೆಟ್ಟಿಲೇರಿದ್ದು, ಪ್ರಕರಣವನ್ನು ಸ್ವತಃ ಮಂಡಿಸಿದ್ದಾರೆ. ವಾದ ವಿವಾದ ಆಲಿಸಿದ ಬೆಂಗಳೂರು ಗ್ರಾಮೀಣ ಹಾಗೂ ನಗರ ಹೆಚ್ಚುವರಿ ಒಂದೇ ನ್ಯಾಯಾಲಯವು ಈ ತೀರ್ಪು ನೀಡಿದೆ.