ಬೆಂಗಳೂರು: ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್‌ನಿಂದ ಸಾಲ ಪಡೆಯಲು ಏಜೆಂಟ್‌ಗಳಿಗೆ ಸಹಕಾರ ನೀಡುತ್ತಿದ್ದ ಆರೋಪದಡಿ ವಿವಿಧ ಬ್ಯಾಂಕ್‌ಗಳ ನಾಲ್ವರು ವ್ಯವಸ್ಥಾಪಕರನ್ನು ಸಿಸಿಬಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ವಿವಿಧ ಬ್ಯಾಂಕ್‌ಗಳ ವ್ಯವಸ್ಥಾಪಕರಾದ ಮಲ್ಲಿಕಾರ್ಜುನ್, ಮುರಳೀಧರ್, ಶಶಿಕಾಂತ್, ರಾಕೇಶ್ ಬಂಧಿತರು.
ನಕಲಿ ದಾಖಲಾತಿ ಸೃಷ್ಟಿಸಿ ಬ್ಯಾಂಕ್‌ನಿಂದ ಸಾಲ ಪಡೆಯುತ್ತಿದ್ದ ಏಜೆಂಟ್‌ಗಳ ವಿರುದ್ಧ ಪುಟ್ಟೇನಹಳ್ಳಿ ಹಾಗೂ ಹುಳಿಮಾವು ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆಯು ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿಸಿಬಿಗೆ ವರ್ಗಾಯಿಸಿತ್ತು. ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಐವರು ಏಜೆಂಟರುಗಳನ್ನು ವಿಚಾರಣೆ ನಡೆಸಿದಾಗ ಏಜೆಂಟರಿಗೆ ಸಾಲ ಪಡೆಯಲು ನೆರವಾಗುತ್ತಿದ್ದ ನಾಲ್ವರು ಬ್ಯಾಂಕ್ ಅಧಿಕಾರಿಗಳ ಸುಳಿವು ಸಿಕ್ಕಿತ್ತು. ಈ ಆಧಾರದ ಮೇಲೆ ನಾಲ್ವರು ಬ್ಯಾಂಕ್ ಅಧಿಕಾರಿಗಳನ್ನು ಬಂಧಿಸಿ ವಿಚಾರಣೆ ಮಾಡಿ ಇದುವರೆಗೆ ಎಷ್ಟು ಪ್ರಮಾಣದಲ್ಲಿ ಅವ್ಯವಹಾರ ನಡೆಸಲಾಗಿದೆ ಎಂಬ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಏಜೆಂಟರಿಗೆ ವೃದ್ಧರ ನಿವೇಶನ, ಮನೆಯೇ ಟಾರ್ಗೆಟ್: ಒಂಟಿ ವೃದ್ಧರ ಹೆಸರಿನಲ್ಲಿರುವ ನಿವೇಶನ ಅಥವಾ ಮನೆ ಖರೀದಿಸುವ ನೆಪ ಮಾಡಿಕೊಂಡು ಬಂಧಿತ ಏಜೆಂಟರುಗಳು ನಕಲಿ ದಾಖಲೆ ಸೃಷ್ಟಿಸುತ್ತಿದ್ದರು. ನಂತರ ಬ್ಯಾಂಕ್ ಅಧಿಕಾರಿಗಳ ಮುಂದೆ ಅಸಲಿ ದಾಖಲೆಯೆಂದು ನಂಬಿಸಿ ಲಕ್ಷಾಂತರ ರೂ. ಸಾಲ ಪಡೆಯುತ್ತಿದ್ದರು. ಬ್ಯಾಂಕ್ ಅಧಿಕಾರಿಗಳು ದಾಖಲಾತಿಗಳನ್ನು ಸೂಕ್ತ ರೀತಿಯಲ್ಲಿ ಪರಿಶೀಲಿಸದೇ ಸಾಲ ನೀಡುತ್ತಿದ್ದರು. ಏಜೆಂಟರ ಆಮೀಷಕ್ಕೊಳಗಾಗಿ ಬ್ಯಾಂಕ್ ಅಧಿಕಾರಿಗಳೂ ಅವರಿಗೆ ಸಾಲ ನೀಡಲು ಸಹಕರಿಸುತ್ತಿದ್ದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? : ಹುಳಿಮಾವಿನಲ್ಲಿ ವೃದ್ಧೆಯೊಬ್ಬರ ಮನೆಯ ದಾಖಲೆ ಬಳಸಿಕೊಂಡು ಆರೋಪಿ ಏಜೆಂಟ್ ಗಳು ಬ್ಯಾಂಕ್‌ಗಳಿಂದ 1.50 ಕೋಟಿ ರೂ. ಸಾಲ ಪಡೆದಿದ್ದರು. ಮತ್ತೂಂದು ಪ್ರಕರಣದಲ್ಲಿ ಪುಟ್ಟೇನಹಳ್ಳಿಯಲ್ಲಿ ವೃದ್ಧೆಯೊಬ್ಬರ ಮನೆಗೆ ಸಂಬಂಧಿಸಿದ ನಕಲಿ ದಾಖಲೆ ಸೃಷ್ಟಿಸಿ 3.85 ಕೋಟಿ ರೂ. ಸಾಲ ಪಡೆದಿದ್ದರು. ಹುಳಿಮಾವು ನಿವಾಸಿ ಅಂಡಾಳ್ ಕುಪ್ಪಣ್ಣ (85) ಎಂಬುವವರ ಮನೆ ಖರೀದಿಸುವ ನೆಪದಲ್ಲಿ ದಾಖಲೆ ಪಡೆದು ಬ್ಯಾಂಕ್‌ಗೆ ಸಲ್ಲಿಸಿ ಸಾಲ ಮಂಜೂರು ಮಾಡಿಸಿಕೊಂಡಿದ್ದರು. 2023ರ ಡಿಸೆಂಬರ್‌ನಲ್ಲಿ ಏಜೆಂಟರುಗಳ ಕಳ್ಳಾಟದ ಬಗ್ಗೆ ಪೊಲೀಸರಿಗೆ ಸುಳಿವು ಸಿಕ್ಕಿತ್ತು. ಈ ಪ್ರಕರಣವು ಪೊಲೀಸ್ ಠಾಣೆ ಮೆಟ್ಟಿಲೇರಿದ ಬಳಿಕ ಏಜೆಂಟರಾದ ಭಾಸ್ಕರ್ ಕೃಷ್ಣ, ಮಹೇಶ್, ಅರುಣ್, ದಿವಾಕರ್ ಅವರನ್ನು ಬಂಧಿಸಿದ್ದರು.