Advertisement
ಉಡುಪಿಯ ಶಿರ್ವದಲ್ಲಿ ಇತ್ತೀಚೆಗೆ ಸಹಕಾರಿ ಬ್ಯಾಂಕ್ ಒಂದರಲ್ಲಿ ಶಂಕರ ಆಚಾರ್ಯ ನಕಲಿ ಚಿನ್ನ ವಿಟ್ಟು 65 ಲಕ್ಷ ರೂ. ಸಾಲ ಪಡೆದು ವಂಚನೆಗೈದ ಪ್ರಕರಣ ಬಹಿರಂಗಗೊಂಡಿತ್ತು. ಈ ಘಟನೆಯಿಂದ ಎಚ್ಚೆತ್ತುಕೊಂಡ ಕ್ಯಾಥೋಲಿಕ್ ಸಿರಿಯನ್ ಬ್ಯಾಂಕಿನ ಸಿಬಂದಿ ತಮ್ಮ ಬ್ಯಾಂಕ್‌ನಲ್ಲಿ ಸಾಲಕ್ಕಾಗಿ ಅಡವಿಟ್ಟ ಚಿನ್ನಾಭರಣಗಳ ಪರಿಶೀಲನೆ ನಡೆಸುತ್ತಿದ್ದಾಗ ಈ ಪ್ರಕರಣ ಬೆಳಕಿಗೆ ಬಂದಿದೆ.
ಆರೋಪಿ ವಿದ್ಯಾನಂದ ರಾವ್ ಕಂಚಿನ ಆಭರಣ ತಯಾರಿಸಿ ಅದಕ್ಕೆ ಗೊತ್ತಾಗದಂತೆ ಸಂಪೂರ್ಣ ಚಿನ್ನದ ಲೇಪನ ಹಾಕುತ್ತಿದ್ದ. ಈ ಕೃತ್ಯ ಬ್ಯಾಂಕಿನ ಚಿನ್ನ ಪರೀಕ್ಷಕ ಮಂಜುನಾಥ್ ಅವರ ಗಮನಕ್ಕೂ ಬಾರದಂತೆ ಚಾಣಾಕ್ಷತನ ತೋರ್ಪಡಿಸಿದ್ದ ಎನ್ನಲಾಗಿದೆ. ಮೇಲ್ನೋಟಕ್ಕೆ ಇದು ಚಿನ್ನದ ಆಭರಣಗಳಂತೆ ಭಾಸವಾಗುತ್ತಿತ್ತು. ಇದನ್ನು ಅಡವಿಟ್ಟು ಬ್ಯಾಂಕಿನಿಂದ ಸಾಲವನ್ನು ಪಡೆಯುತ್ತಿದ್ದ. ಪರಿಶೀಲನೆ ವೇಳೆ ಅಡವಿಟ್ಟ ಚಿನ್ನಾಭರಣಗಳು ನಕಲಿ ಎಂದು ಗೊತ್ತಾದ ತತ್‌ಕ್ಷಣ ಜು.25ರಂದು ಬ್ಯಾಂಕ್ ಆಡಳಿತ ಮಂಡಳಿ ಬಂದರು ಠಾಣೆಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಅಡವಿಟ್ಟಿರುವ ಚಿನ್ನದ ಕುರಿತಂತೆ ತನಿಖೆ ನಡೆಯುತ್ತಿದ್ದು, ವಂಚನೆಯ ಸಂಪೂರ್ಣ ಲೆಕ್ಕಾಚಾರ ಇನ್ನೂ ನಡೆದಿಲ್ಲ ಎಂದು ಮೂಲಗಳು ತಿಳಿಸಿವೆ. ಕಾರ್ಯಾಚರಣೆಯಲ್ಲಿ ಬಂದರು ಇನ್‌ಸ್ಪೆಕ್ಟರ್ ಶಾಂತರಾಮ್, ಸಬ್‌ಇನ್‌ಸ್ಪೆಕ್ಟರ್ ಮದನ್ ಸೇರಿದಂತೆ ಸಿಬಂದಿ ಭಾಗವಹಿಸಿದ್ದಾರೆ. ಬಂದರು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.