ಬೆಂಗಳೂರು: ಬಹುಕೋಟಿ ಡ್ರೀಮ್ಸ್ ಇನ್ಪ್ರಾ ಇಂಡಿಯಾ ಲಿಮಿಟೆಡ್ ವಂಚನೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ದಿಶಾ ಚೌಧರಿಯನ್ನು ಸಿಐಡಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ಮುಂಬೈನಲ್ಲಿ ಬಂಧಿಸಿದ್ದಾರೆ.
ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳು ಪ್ರಮುಖ ಆರೋಪಿ ಸಚಿನ್ ನಾಯಕ್, ದಿಶಾ ಚೌಧರಿ, ಮನದೀಪ್ ಕೌರ್ ಹಾಗೂ ಇತರೆ ಎಂಟು ಮಂದಿ ಆರೋಪಿಗಳ ವಿರುದ್ಧ ತನಿಖೆ ನಡೆಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಆದರೆ, ದಿಶಾ ಚೌಧರಿ ತನ್ನ ವಿಳಾಸವನ್ನು ಪದೇ ಪದೆ ಬದಲಿಸುತ್ತ ನ್ಯಾಯಾಲಯದ ವಿಚಾರಣೆಗೆ ಗೈರಾಗುತ್ತಿದ್ದರು. ಹೀಗಾಗಿ ನ್ಯಾಯಾಲಯ ಆರೋಪಿ ಜಾಮೀನು ರದ್ದುಗೊಳಿಸಿ, 35ಕ್ಕೂ ಹೆಚ್ಚು ವಾರೆಂಟ್ ಮತ್ತು 10ಕ್ಕೂ ಹೆಚ್ಚು ಸಮನ್ಸ್ ಜಾರಿ ಮಾಡಿತ್ತು. ಈ ಸಂಬಂಧ ಆರೋಪಿ ಪತ್ತೆಗಾಗಿ ಆರ್ಥಿಕ ಅಪರಾಧಗಳ ವಿಭಾಗದ ಅಧೀಕ್ಷಕ ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ಗಳಾದ ನವೀನ್‌ಕುಮಾರ್, ಶ್ರೀಧರ್ ಮತ್ತು ಅಮರೇಗೌಡ ಹಾಗೂ ಸಿಬ್ಬಂದಿಯನ್ನೊಳಗೊಂಡ ತಂಡ ರಚಿಸಲಾಗಿತ್ತು. ಈ ತಂಡ ಕಳೆದೊಂದು ತಿಂಗಳಿಂದ ಆರೋಪಿ ಚಲನವಲನಗಳ ಮೇಲೆ ನಿಗಾವಹಿಸಿದ್ದು, ಆಕೆ ಮಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಾಗಿರುವ ಮಾಹಿತಿ ಸಂಗ್ರಹಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ 15 ದಿನಗಳಿಂದ ಮುಂಬೈನಲ್ಲಿ ತಂಗಿದ್ದ ತಂಡ ಇದೀಗ ಆಕೆಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಆಕೆಯನ್ನು ಒಂದನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರು ಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದರು.
ಸ್ನೇಹಿತರ ಹಣದಲ್ಲಿ ಜೀವನ:
ಆರೋಪಿ ದಿಶಾ ಚೌಧರಿ ವಂಚಕ ಕಂಪನಿ ಮುಖ್ಯಸ್ಥ ಹಾಗೂ ಆರೋಪಿ ಸಚಿನ್ ನಾರಾಯಣ್ ಜತೆ ಸೇರಿಕೊಂಡು ಕಡಿಮೆ ಮೊತ್ತಕ್ಕೆ ನಿವೇಶನ ಹಾಗೂ ಅಪಾರ್ಟ್‌ಮೆಂಟ್ ಕೊಡುವುದಾಗಿ ನಂಬಿಸಿ, ಸಾವಿರಾರು ಮಂದಿಯಿಂದ ಸಾವಿರಾರು ಕೋಟಿ ರೂ. ಸಂಗ್ರಹ ಮಾಡಿದ್ದರು. ಈ ಹಣದಲ್ಲಿ ಬಾಲಿವುಡ್‌ನಲ್ಲಿ ಸಿನಿಮಾ ಕೂಡ ನಿರ್ಮಾಣ ಮಾಡಿದ್ದ ದಿಶಾ ಚೌಧರಿ, ತನ್ನ ಸ್ನೇಹಿತರಿಗೆ ಹತ್ತಾರು ಕೋಟಿ ರೂ. ಕೊಟ್ಟಿದ್ದರು. ಇದೀಗ ಆ ಹಣ ವಾಪಸ್ ಪಡೆದುಕೊಂಡು ಮುಂಬೈನ ಅಪಾರ್ಟ್‌ಮೆಂಟ್‌ವೊಂದರಲ್ಲಿ ಜೀವನ ನಡೆಸುತ್ತಿದ್ದರು ಎಂಬುದು ಗೊತ್ತಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.