ಬೆಂಗಳೂರು: ಸಾಫ್ಟ್ವೇರ್ ಕಂಪನಿಯ ಲೋಗೋ ಹಾಗೂ ವ್ಯವಸ್ಥಾಪಕ ನಿರ್ದೇಶಕರ ಡಿ.ಪಿ ಬಳಸಿಕೊಂಡು ಲಕ್ಷಾಂತರ ರೂ. ಸುಲಿಗೆ ಮಾಡಿದ್ದ ಆಂಧ್ರಪ್ರದೇಶ ಮೂಲದ ಯುವತಿ ಸೇರಿ ಆರು ಮಂದಿಯನ್ನು ಆಗ್ನೇಯ ವಿಭಾಗದ ಸೆನ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಹೈದರಾಬಾದ್ ಮೂಲದ ಗ್ರೀಷ್ಮಾ ರೆಡ್ಡಿ (23), ದಿನೇಶ್ ಕುಮಾರ್ (24), ಹಾರತ್(23), ಪವನ್ ಕುಮಾರ್(24), ಸಾಯಿ ಕುಮಾರ್(23) ಹಾಗೂ ರವಿ ತೇಜಾ (32) ಬಂಧಿತರು. ಆರೋಪಿಗಳಿಂದ 58,600 ರೂ. ನಗದು, 1 ಆಡಿ ಕಾರು ಹಾಗೂ ಆರೋಪಿಗಳ ಖಾತೆ ಜಪ್ತಿ ಮಾಡಿ, ಅದರಲ್ಲಿದ್ದ 5 ಲಕ್ಷ ರೂ. ಅನ್ನು ದೂರುದಾರ ಖಾತೆಗೆ ವಾಪಸ್ ಹಾಕಲಾಗಿದೆ. ಆರೋಪಿ ಗಳು ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿರುವ ಸಾಫ್ r ವೇರ್ ಕಂಪನಿ ಮಾಲಿಕರೊಬ್ಬರಿಗೆ ವಂಚಿಸಿದ್ದರು.
ನಿರಂತರ ಸಂದೇಶ: ಬಿಟಿಎಂ ಲೇಔಟ್‌ನ 2ನೇ ಹಂತದಲ್ಲಿರುವ ಕಂಪನಿಯ ಎಂ.ಡಿಯ ಡಿಪಿ ಹಾಗೂ ಲೋಗೋ ಬಳಸಿಕೊಂಡಿದ್ದ ಆರೋಪಿಗಳು, ವಾಟ್ಸ್ ಆ್ಯಪ್ ಮೂಲಕ ಕಂಪನಿಯ ಪ್ರಾಜೆಕ್ಟ್ ಅಡ್ವಾನ್ಸ್ ಸೆಕ್ಯುರಿಟಿ ಡೆಪಾಸಿಟ್‌ಗಾಗಿ 56 ಲಕ್ಷ ರೂ. ವರ್ಗಾವಣೆ ಮಾಡಬೇಕಿದೆ ಎಂದು ಸಂದೇಶ ಕಳುಹಿಸಿದ್ದಾರೆ. ಅದನ್ನು ನಂಬಿದ ಕಂಪನಿಯ ಅಕೌಂಟೆಂಟ್ ಸಂದೇಶದಲ್ಲಿದ್ದ ಬಂದಿದ್ದ ಬ್ಯಾಂಕ್ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಬಳಿಕ ವಂಚನೆಗೊಳಗಾಗಿರುವುದು ಗೊತ್ತಾಗಿ ಕೂಡಲೇ ಠಾಣೆಗೆ ದೂರು ನೀಡಿದ್ದಾರೆ.
ಆರೋಪಿಗಳ ಪೈಕಿ ಗ್ರೀಷ್ಮಾ, ದಿನೇಶ್ ಕುಮಾರ್, ಪವನ್ ಕುಮಾರ್, ಹಾರತ್ ಲೆಕ್ಕಪರಿಶೋಧಕ(ಸಿಎ) ತರಬೇತಿ ಪಡೆಯುತ್ತಿದ್ದರು. ಇದರೊಂದಿಗೆ ಹೈದರಬಾದ್‌ನ ಕಂಪನಿಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ಜತೆಗೆ ಗ್ರೀಷ್ಮಾ ಮತ್ತು ರವಿತೇಜಾ ತೆಲುಗು ಸಿನಿಮಾಗಳ ಸಹಾಯಕ ನಿರ್ದೇಶಕರಾಗಿದ್ದು, ಸಿನಿಮಾಗೂ ಸ್ಕ್ರಿಪ್ಟ್ ಬರೆದುಕೊಡುತ್ತಿದ್ದರು.
ಈ ಮಧ್ಯೆ ಆನ್‌ಲೈನ್ ಮೂಲಕ ಗ್ರೀಷ್ಮಾಗೆ ವಿದೇಶದಲ್ಲಿರುವ ಸೈಬರ್ ವಂಚಕನ ಪರಿಚಯವಾಗಿದೆ. ಆತನ ಸೂಚನೆ ಮೇರೆಗೆ ಸಾಯಿ ಕುಮಾರ್ ಹಾಗೂ ಇತರರ ಸಹಾಯದಿಂದ ಅಮಾಯಕ ಜನರ ಬ್ಯಾಂಕ್ ಖಾತೆಗಳ ಮಾಹಿತಿ ಪಡೆದು, ವಿದೇಶಿಗನಿಗೆ ಮಾರಾಟ ಮಾಡುತ್ತಿದ್ದಳು. ಅದಕ್ಕೆ ಆತ ಕಮಿಷನ್ ನೀಡುತ್ತಿದ್ದ ಎಂದು ಪೊಲೀಸ್ ಆಯುಕ್ತರು ಹೇಳಿದರು. ಇನ್ನು ವಿದೇಶದಲ್ಲಿರುವ ವಂಚಕ, ಆನ್‌ಲೈನ್ ಮೂಲಕ ವಂಚಿಸಿದ ಹಣವನ್ನು ಗ್ರೀಷ್ಮಾ ನೀಡಿದ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸುತ್ತಿದ್ದ. ಕೆಲವೇ ನಿಮಿಷಗಳಲ್ಲಿ ಈ ಹಣವನ್ನು ವಿತ್‌ಡ್ರಾ ಮಾಡುತ್ತಿದ್ದ ಗ್ರೀಷ್ಮಾ ತಂಡ, ಯುಎಸ್‌ಡಿಟಿ(ಕ್ರಿಪ್ಟೋ) ಕರೆನ್ಸಿ ಖರೀದಿಸುತ್ತಿತ್ತು. ಬಳಿಕ ವಿದೇಶಿಗ ನೀಡಿದ ಯು-ಹೋಮ್‌ಇಎಕ್ಸ್ ಎಂಬ ಆ್ಯಪ್ ಮೂಲಕ ಅದನ್ನು, ಅದೇ ವಿದೇಶಿಗನಿಗೆ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಳು. ಹೀಗೆ 10 ಲಕ್ಷ ರೂ. ವರ್ಗಾವಣೆಗೆ ವಿದೇಶಿಗ ಗ್ರೀಷ್ಮಾಗೆ 1 ಲಕ್ಷ ರೂ. ಕಮಿ ಷನ್ ನೀಡುತ್ತಿದ್ದ. ಇನ್ನು ಬ್ಯಾಂಕ್ ಖಾತೆದಾರನಿಗೆ 10 ಸಾವಿರ ರೂ. ನೀಡುತ್ತಿದ್ದರು. ಹೀಗೆ ವಂಚನೆ ಮಾಡುತ್ತಿದ್ದ ಹಣದಲ್ಲಿ ಆರೋಪಿಗಳು ಒಂದು ಆಡಿ ಕಾರು ಖರೀದಿ ಸಿದ್ದರು ಎಂದು ಆಯುಕ್ತರು ಮಾಹಿತಿ ನೀಡಿದರು.