ಮಂಗಳೂರು: ಇತ್ತೀಚಿನ ದಿನಗಳಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು , ಅನೇಕ ಜನರು ಮೋಸಹೋಗುತ್ತಿದ್ದಾರೆ.
ಫೋನ್ ಕರೆ, ಮೊಬೈಲ್ ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್, ಇಂಟನ್‌ರೆಟ್ ಇತ್ಯಾದಿಗಳ ಮೂಲಕ ಸಂದೇಶ ಕಳುಹಿಸಿ ಮೋಸದ ಬಲೆಗೆ ಬೀಳಿಸುವ ಯತ್ನ ಈಗಲೂ ನಡೆಯುತ್ತಲೇ ಇದೆ.
ಎರಡು ದಿನಗಳ ಹಿಂದೆ ಕಾವೂರಿನಲ್ಲಿ ವ್ಯಕ್ತಿಯೊಬ್ಬರ ಮೊಬೈಲಿಗೆ
9717616353 ನಂಬರ್‌ನಿಂದ ಕರೆ ಬಂದಿದ್ದು, ಲೈಫ್ ಇನ್ಶೂರೆನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾದ ಕಾಲ್ ಸೆಂಟರ್‌ನಿಂದ ಕರೆ ಮಾಡುತ್ತಿರುವುದಾಗಿ ಹೇಳಿದರು.
“ಈ ಹಿಂದೆ ನಿಮ್ಮ ಹೆಸರಿನಲ್ಲಿ ಮಾಡಿಸಿದ್ದ ಪಾಲಿಸಿಯು ಅನೂರ್ಜಿತಗೊಂಡಿದೆ. ಇದುವರೆಗೆ ಕಟ್ಟಿದ ಹಣವನ್ನು ಹಿಂದಿರುಗಿ ಪಡೆಯುವ ಬಗ್ಗೆ ಏಜೆಂಟರನ್ನು ಸಂಪರ್ಕಿಸಲು ಪ್ರಯತ್ನಿಸಿ ವಿಫಲಗೊಂಡಿದ್ದೀರಿ. ಸಂಜೆಯೊಳಗೆ ಮತ್ತೆ ಕರೆ ಮಾಡುತ್ತೇವೆ. ಬ್ಯಾಂಕ್ ಖಾತೆ, ಪ್ಯಾನ್ ಕಾರ್ಡ್ ಸಂಖ್ಯೆ. ಎ.ಟಿ.ಎಂ ಕಾರ್ಡ್ ಸಂಖ್ಯೆ ಮುಂತಾದ ವಿವರಗಳನ್ನು ಒದಗಿಸಿದರೆ, ನಿಮಗೇ ಹಣವನ್ನು ನೀಡುತ್ತೇವೆ. ಇಲ್ಲದಿದ್ದರೆ ಆ ಹಣ ಎಲ್.ಐ.ಸಿ.ಯ ಪಾಲಾಗುತ್ತದೆ’ ಎಂದು ತಿಳಿಸಲಾಗಿತ್ತು.
ಈ ಕರೆಯ ಬಗ್ಗೆ ಸಂಶಯ ಬಂದು ಅವರು ತನ್ನ ಪಾಲಿಸಿ ಇರುವ ಮೂಲ್ಕಿಯ ಎಲ್.ಐ.ಸಿ. ಕಚೇರಿಗೆ ಹಾಗೂ ಹೆಚ್ಚಿನ ಮಾಹಿತಿ ಪಡೆಯಲು ಮಂಗಳೂರಿನ ಶರವು ಮಹಾಗಣಪತಿ ದೇವಸ್ಥಾನದ ಬಳಿಯಿರುವ ಎಲ್.ಐ.ಸಿ. ಮಾಹಿತಿ ಕೆಂದ್ರವನ್ನು ಸಂಪರ್ಕಿಸಿದಾಗ ಪಾಲಿಸಿ ಊರ್ಜಿತದಲ್ಲಿದೆ ಎಂಬ ಸಂಗತಿ ತಿಳಿಯಿತು. ಇಂತಹ ಅನಾಮಧೇಯ ಕರೆಗಳಿಗೆ ಸ್ಪಂದಿಸಿ ವಿವರಗಳನ್ನು ನೀಡಬಾರದು ಎಂದು ಎಲೈಸಿ ಅಧಿಕಾರಿಗಳು ತಿಳಿಸಿದರು.
ಬೆಳಗ್ಗೆ ಕರೆ ಮಾಡಿದ ಅನಾಮಧೇಯ ವ್ಯಕ್ತಿ ಸಂಜೆ ಹಲವು ಬಾರಿ ಕರೆ ಮಾಡಿದ್ದಾರೆ, ಆದರೆ ನಾವು ಈ ಕರೆಯನ್ನು ಸ್ವೀಕರಿಸಲಿಲ್ಲ ಎಂದು ಕಾವೂರಿನ ಈ ಮಹನೀಯರು ವಿವರಿಸಿದ್ದಾರೆ.
ಕೆಲವು ತಿಂಗಳುಗಳ ಹಿಂದೆ ಇದೇ ರೀತಿ ತಾವು ಬ್ಯಾಂಕಿನವರು ಎಂದು ಹೇಳಿ ಕರೆ ಮಾಡಿ ನಂಬಿಸಿದ್ದು, ಅದಕ್ಕೆ ಸ್ಪಂದಿಸಿ ಎ.ಟಿ.ಎಂ. ಪಿನ್ ನಂಬರನ್ನು ನೀಡಿ ಹಲವರು ಮೋಸ ಹೋದ ಉದಾಹರಣೆ ಇದೆ.
ಎಲೈಸಿ ಪಾಲಿಸಿಗೆ ಸಂಬಂಧಿಸಿದ ಈ ಕರೆ ಕೂಡ ಅಂತಹುದೇ ಮೋಸದ ಕೃತ್ಯವಾಗಿದೆ. ಇಂತಹ ಕರೆಗಳಿಗೆ ಸ್ಪಂಧಿದಿಸಿ ಯಾರೂ ಮೋಸ ಹೋಗಬಾರದು ಎಂದು ಕಾವೂರಿನ ಆ ವ್ಯಕ್ತಿ ವಿನಂತಿಸಿದ್ದಾರೆ.