ಉಳ್ಳಾಲ : ಲೇಔಟ್ ಅಬಿವೃದ್ಧಿಗೆಂದು ಬಿಲ್ಡರ್ ಓರ್ವರಿಂದ ರೂ. 86 ಲಕ್ಷ ಹಣವನ್ನು ಪಡೆದು ಕಳಪೆ ಕಾಮಗಾರಿ ನಡೆಸಿದ್ದಲ್ಲದೆ ಲೇಔಟ್ ವ್ಯವಹಾರಕ್ಕೆ ಅಡ್ಡಿಪಡಿಸಿ, ಜೀವ ಬೆದರಿಕೆಯೊಡ್ಡಿದ್ದ ಘಟನೆಗೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕೊಂದರ ಮ್ಯಾನೇಜರ್ ಸಹಿತ ನಾಲ್ವರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಯಾಂಕ್ ಮೆನೇಜರ್ ಪವನ್ ಕುಮಾರ್, ಬ್ರೋಕರ್ ಆಗಿರುವ ಅತ್ತಾವರದ ಗುರುರಾಜ್, ಸಿವಿಲ್ ಗುತ್ತಿಗೆದಾರ ಜಗದೀಶ್ ಹಾಗೂ ಅವರ ಸಹಚರ ಜಯಪ್ರಕಾಶ್ ಜೆ.ಪಿ ವಿರುದ್ಧ ಪ್ರಕರಣ ದಾಖಲಾಗಿದೆ.
ಘಟನೆಯ ವಿವರ: ಬೆಂಗಳೂರು ಮೂಲದ ಸಿ. ವೆಂಕಟೇಶ್ ಮತ್ತು ಮಹೇಶ್ ಅವರಿಗೆ ಪವನ್ ಕುಮಾರ್ ಉಳ್ಳಾಲದ ಸೂರ್ಯಕಂಡ ಎಂಬಲ್ಲಿ ಲೇಔಟ್ ನಿರ್ಮಿಸಿ ಸಾರ್ವಜನಿಕವಾಗಿ ಮಾರಾಟ ಮಾಡಲು ಜಮೀನು ಕ್ರಯಕ್ಕೆ ಕೊಡಿಸಿದ್ದು, ಲೇಔಟ್ ಡ್ರೈನೇಜ್ ವರ್ಕ್ ಇನ್ನಿತರ ದಾಖಲಾತಿಗಳ ಕೆಲಸವನ್ನು ಕ್ರಮಬದ್ಧವಾಗಿ ಮಾಡಿಕೊಡುವುದಾಗಿ ಭರವಸೆ ನೀಡಿ ಅವರಿಂದ 86 ಲಕ್ಷ ರೂ ನಗದು ಮತ್ತು ಆರ್‍ಟಿಜಿಎಸ್ ಮಾಡಿಸಿ 86 ಲಕ್ಷ ಹಣವನ್ನು ಪಡೆದಿದ್ದು, ಕಳಪೆ ಕಾಮಗಾರಿ ಮಾಡಿ, ದಾಖಲಾತಿಗಳನ್ನು ಸರಿಪಡಿಸದೆ ವಂಚನೆ ಎಸಗಿದ್ದಾರೆ. ಹಣವನ್ನು ವಾಪಾಸ್ ಕೇಳಿದಾಗ ಪವನ್ ಮಾಲಿಕರ ಸೈಟ್‍ಗಳನ್ನು ಮಾರಾಟವಾಗದಂತೆ ಸುಳ್ಳು ಅಪಪ್ರಚಾರ ಮಾಡಿದ್ದಾರೆ.
ಇದಲ್ಲದೆ ತನ್ನ ಸಹವರ್ತಿಗಳಾದ ಬ್ರೋಕರ್ ಗುರುರಾಜ್, ಸಿವಿಲ್ ಗುತ್ತಿಗೆದಾರ ಜಗದೀಶ್ ಹಾಗೂ ಅವರ ಸಹಚರ ಜಯಪ್ರಕಾಶ್ ಜೆ.ಪಿ ಅವರೊಂದಿಗೆ ಲೇಔಟ್‍ಗೆ ಆಗಮಿಸಿ ಲೇಔಟ್‍ನ ಕೆಲಸದ ಮೇಲಿದ್ದ ಪುಷ್ಪರಾಜ್, ದಕ್ಷರಾಜ್, ರಾಧಾಕೃಷ್ಣರವರಿಗೆ ಅವಾಚ್ಯ ಶಬ್ದಗಳಿಂದ ಬೈಯ್ದು ಕೆಲಸಕ್ಕೆ ತಡೆವೊಡ್ಡಿ ಹಿಡಿದು ಹಲ್ಲೆ ನಡೆಸಿ ಮಾರಕ ಆಯುಧಗಳಾದ ಪಿಕ್ಕಾಸು, ರಾಡು, ಹಾರೆಯನ್ನು ತೋರಿಸಿ ಹೆದರಿಸಿ ಜೆಸಿಬಿ ಮತ್ತು ಟ್ರಕ್ ನ್ನು ಹತ್ತಿಸಿ ಕೊಲೆಮಾಡುವುದಾಗಿ ಜೀವ ಬೆದರಿಕೆಯನ್ನು ಒಡ್ಡಿದ್ದಾರೆ ಎಂದು ಪುಷ್ಪರಾಜ್ ನೀಡಿದ ದೂರಿನಂತೆ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.