Advertisement

Shirva ಸ್ವ-ಸಹಾಯ ಸಂಘ ಪ್ರಾರಂಭಿಸಿ ವಂಚನೆ; ದೂರು ದಾಖಲು

11:42 PM Aug 30, 2023 | Team Udayavani |

ಶಿರ್ವ: ನಿರುದ್ಯೋಗಿ ಮಹಿಳೆಯರಿಗೆ ಸ್ವಉದ್ಯೋಗ ಕಲ್ಪಿಸುವ ಸಲುವಾಗಿ ಬ್ಯಾಂಕಿನಿಂದ ಸಬ್ಸಿಡಿ ಸಾಲ ಸೌಲಭ್ಯ ಒದಗಿಸುವುದಾಗಿ ನಂಬಿಸಿ ಸ್ವ-ಸಹಾಯ ಸಂಘ ಪ್ರಾರಂಭಿಸಿ, ಸಾಲ ಮಾಡಿ ಬ್ಯಾಂಕಿಗೆ ಪಾವತಿಸದೆ ಸಂಘದ ಸದಸ್ಯರಿಗೆ ವಂಚಿಸಿದ ಬಗ್ಗೆ ಮೂವರು ಮಹಿಳೆಯರ ವಿರುದ್ಧ ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಹೆಜಮಾಡಿಯ ರೋಹಿತಾ ಪುತ್ರನ್‌, ಸಂಘದ ಅಧ್ಯಕ್ಷೆ ಸವಿತಾ ಮತ್ತು ಕಾರ್ಯದರ್ಶಿ ಉಷಾ ಆರೋಪಿತರು.

ಘಟನೆಯ ವಿವರ
ಹೆಜಮಾಡಿಯ ರೋಹಿತಾ ಪುತ್ರನ್‌ ನೇತೃತ್ವದಲ್ಲಿ 2020ರ ನ. 22ರಂದು ಆರಂಭಗೊಂಡ ಶ್ರೀ ದುರ್ಗಾ PMEEGP SHG ಎಂಬ ಹೆಸರಿನ ಸ್ವಸಹಾಯ ಸಂಘ ಹೋಮ್‌ ಫುಡ್‌ ಪ್ರಾಡಕ್ಟ್ ತಯಾರು ಮಾಡಿ ಮಾರಾಟ ಮಾಡುವ ಮೂಲಕ ಗ್ರಾಮೀಣ ನಿರುದ್ಯೋಗಿ ಮಹಿಳೆಯರ ಜೀವನೋಪಾಯಕ್ಕಾಗಿ ಸ್ವ ಉದ್ಯೋಗ ಕಲ್ಪಿಸುವುದಾಗಿ ತಿಳಿಸಿತ್ತು. ಬ್ಯಾಂಕಿನಿಂದ ಸಬ್ಸಿಡಿ ಸಾಲ ಸೌಲಭ್ಯ ಕಲ್ಪಿಸುವುದಾಗಿ ನಂಬಿಸಿ ಸ‌ಂಘಕ್ಕೆ 20 ಸದಸ್ಯರನ್ನು ನೇಮಕ ಮಾಡಿ ಸಾಲ ಸೌಲಭ್ಯ ಪಡೆಯಲು ಸದಸ್ಯರ ಸಹಿ ಪಡೆಯಲಾಗಿತ್ತು.

ಬ್ಯಾಂಕ್‌ ಸಾಲ ತೆಗೆಸಿಕೊಡುವುದಾಗಿ ಭರವಸೆ ನೀಡಿ, ಸದಸ್ಯರಿಗೆ ಸಿಕ್ಕಿದ 30 ಸಾವಿರ ರೂ. ಸಾಲದಲ್ಲಿ ಸಂಘದ ಖರ್ಚುವೆಚ್ಚಗಳ ಬಗ್ಗೆ ಸದಸ್ಯರು ತಲಾ 5 ಸಾವಿರದಂತೆ 3 ಜನರಿಗೆ ನೀಡಬೇಕೆಂದು ತಿಳಿಸಿದಂತೆ ಹಣವನ್ನು ಆರೋಪಿತರಿಗೆ ನೀಡಲಾಗಿತ್ತು. ಸಾಲವನ್ನು ವರ್ಷದೊಳಗೆ ಮರು ಪಾವತಿಸಿದಲ್ಲಿ 25 ಲಕ್ಷ ರೂ. ಸಬ್ಸಿಡಿ ಸಾಲವನ್ನು ಸರಕಾರದಿಂದ ತೆಗೆಸಿಕೊಡುವುದಾಗಿ ನಂಬಿಸಲಾಗಿದ್ದರಿಂದ ಸದಸ್ಯರು ಸಾಲವನ್ನು ವರ್ಷದೊಳಗೆ ಆಪಾದಿತರಿಗೆ ಮರುಪಾವತಿಸಿದ್ದರು. ಇದರಿಂದ ತಮ್ಮ ಸಾಲ ಮುಗಿದಿದೆ ಎಂದೇ ಸದಸ್ಯರು ನಂಬಿದ್ದರು.

ಕೆಲವು ದಿನಗಳ ಬಳಿಕ ಸಂಘದ ಸದಸ್ಯರಿಗೆ ರೂ. 6,25,000 ರೂ. ಸಾಲ ಮರುಪಾವತಿಸುವಂತೆ ಬ್ಯಾಂಕ್‌ನಿಂದ ನೋಟಿಸ್‌ ಬಂದಿತ್ತು. ಈ ಬಗ್ಗೆ ತುರ್ತು ಸಭೆ ನಡೆಸಿದ ಸದಸ್ಯರು ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ರೋಹಿತಾ ಪುತ್ರನ್‌ ಮೋಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.

Advertisement

ಗ್ರಾಮೀಣ ಮಹಿಳೆಯರಿಗೆ ಮೋಸ ಮಾಡುವ ಉದ್ದೇಶದಿಂದ ಸ್ವ-ಉದ್ಯೋಗದ ಭರವಸೆ ನೀಡಿ ಸಂಘವನ್ನು ದುರ್ಬಳಕೆ ಮಾಡಿಕೊಂಡು ನಂಬಿಕೆ ದ್ರೋಹ, ಮೋಸ ವಂಚನೆ ನಡೆಸಿದ್ದಾರೆಂದು ಮೂವರು ಮಹಿಳೆಯರ ವಿರುದ್ಧ ಸಂಘದ ಸದಸ್ಯೆ ಕಳತ್ತೂರು ಮುಕ್ರಗುಟ್ಟು ನಿವಾಸಿ ಜಯಾ ಆಚಾರ್ಯ ಶಿರ್ವ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next