Advertisement

ಕೋವಿಡ್ 19;ಫ್ರಾನ್ಸ್ ನಲ್ಲಿ ಮೇ 11ರವರೆಗೆ ಲಾಕ್ ಡೌನ್,ಜುಲೈವರೆಗೆ ಸಾರ್ವಜನಿಕ ಸಮಾರಂಭ ರದ್ದು

09:06 AM Apr 15, 2020 | Nagendra Trasi |

ಫ್ರಾನ್ಸ್: ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಬಹುತೇಕ ದೇಶಗಳು ಲಾಕ್ ಡೌನ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ತಂತ್ರಕ್ಕೆ ಮೊರೆ ಹೋಗಿದ್ದು, ಫ್ರಾನ್ಸ್ ಮತ್ತೊಂದು ತಿಂಗಳು ಲಾಕ್ ಡೌನ್ ಮುಂದುವರಿಸುವುದಾಗಿ ಘೋಷಿಸಿದೆ. ಕೋವಿಡ್ 19 ವೈರಸ್ ತಡೆಯುವ ನಿಟ್ಟಿನಲ್ಲಿ ಮೇ 11ರವರೆಗೆ ಲಾಕ್ ಡೌನ್ ಮುಂದುವರಿಯಲಿದ್ದು, ಜುಲೈವರೆಗೆ ಯಾವುದೇ ಸಾರ್ವಜನಿಕ ಸಭೆ, ಸಮಾರಂಭಕ್ಕೆ ಅವಕಾಶ ಇಲ್ಲ ಎಂದು ತಿಳಿಸಿದೆ.

Advertisement

ಮಾರಣಾಂತಿಕ ಕೋವಿಡ್ 19 ವೈರಸ್ ನಿಂದಾಗಿ ಜಗತ್ತಿನ ಅರ್ಧದಷ್ಟು ಜನಸಂಖ್ಯೆ ಲಾಕ್ ಡೌನ್ ಬಂಧನದಲ್ಲಿ ಇರುವಂತಾಗಿದೆ. ಅಲ್ಲದೇ ವಿಶ್ವಾದ್ಯಂತ ಕೋವಿಡ್ ಗೆ 1,19,000 ಜನರು ಬಲಿಯಾಗಿದ್ದಾರೆ. ಸುಮಾರು 20 ಲಕ್ಷ ಮಂದಿ ಸೋಂಕು ಪೀಡಿತರಾಗಿದ್ದಾರೆ ಎಂದು ವರದಿ ವಿವರಿಸಿದೆ.

ಯುರೋಪ್ ನಲ್ಲಿ ಅತೀ ಹೆಚ್ಚು ಸಾವು ಸಂಭವಿಸಿದೆ. ಆದರೆ ಅಮೆರಿಕದಲ್ಲಿಯೂ ಕೋವಿಡ್ 19 ಸೋಂಕು ದೊಡ್ಡ ಹೊಡೆತ ನೀಡಿದ್ದು ಅದರಲ್ಲಿ ಮುಖ್ಯವಾಗಿ ನ್ಯೂಯಾರ್ಕ್ ನಲ್ಲಿಯೇ ಹತ್ತು ಸಾವಿರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದಾರೆ. ಕೋವಿಡ್ ನಿಂದಾಗಿ ಸತತ ಲಾಕ್ ಡೌನ್ ಘೋಷಿಸಿದ್ದರಿಂದ ವಿಶ್ವ ಇದೀಗ ಆರ್ಥಿಕ ಹಿಂಜರಿತದ ಭೀತಿಗೆ ಒಳಗಾಗಿದೆ. ಅಲ್ಲದೇ ಮಾರಕ ಕೋವಿಡ್ 19 ವೈರಸ್ ಎರಡನೇ ಬಾರಿ ದಾಳಿ ನಡೆಸದಿರುವಂತೆ ಪ್ರಯತ್ನಿಸುತ್ತಿದ್ದಾರೆ ಎಂದು ವರದಿ ಹೇಳಿದೆ.

ಮಾರ್ಚ್ 17ರಿಂದ ಫ್ರಾನ್ಸ್ ಲಾಕ್ ಡೌನ್ ಘೋಷಿಸಿದ್ದು, ಇದೀಗ ಮೇ 11ರವರೆಗೆ ಮುಂದುವರಿಸಿದೆ. ಆ ಬಳಿಕ ಶಾಲಾ, ಕಾಲೇಜು ಹಾಗೂ ವ್ಯವಹಾರಗಳು ಎಂದಿನಂತೆ ನಡೆಯಲಿದೆ ಎಂದು ತಿಳಿಸಿದೆ. ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವಲ್ ಮ್ಯಾಕ್ರೊನ್, ಲಾಕ್ ಡೌನ್ ಬಳಿಕ ಎಲ್ಲವೂ ಪುನರಾರಂಭವಾಗಲಿದೆ ಎಂದು ಟೆಲಿವಿಷನ್ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next