ನವದೆಹಲಿ:ಭಾರತದಲ್ಲಿ ದಿಢೀರ್ ಕೋವಿಡ್ 19 ಸೋಂಕು ಪ್ರಕರಣಗಳ ಸಂಖ್ಯೆ ಹೆಚ್ಚಳ ಕಂಡ ನಂತರ ಕಳೆದ 24 ಗಂಟೆಯಲ್ಲಿ 1,247 ಕೋವಿಡ್ ಪ್ರಕರಣ ವರದಿಯಾಗಿದ್ದು, ಒಂದು ಸಾವು ಸಂಭವಿಸಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಮಂಗಳವಾರ (ಏಪ್ರಿಲ್ 19) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.
ಇದನ್ನೂ ಓದಿ:ಕನ್ನಡ ಚಿತ್ರರಂಗದಿಂದ ಬ್ಯಾಕ್ ಟು ಬ್ಯಾಕ್ ‘ಪ್ಯಾನ್ ಇಂಡಿಯಾ’ ಸಿನಿಮಾ
ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 11,860ಕ್ಕೆ ತಲುಪಿದೆ. ಕಳೆದ 24ಗಂಟೆಯಲ್ಲಿ 318 ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಒಂದೇ ದಿನದಲ್ಲಿ 928 ಮಂದಿ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಭಾರತದಲ್ಲಿ ಈವರೆಗೆ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರ ಒಟ್ಟು ಸಂಖ್ಯೆ 4,25,11,701ಕ್ಕೆ ಏರಿಕೆಯಾಗಿದೆ. ದೇಶದ ಕೋವಿಡ್ 19 ಚೇತರಿಕೆ ಪ್ರಮಾಣ ಶೇ.98.76ರಷ್ಟಿದೆ ಎಂದು ಸಚಿವಾಲಯ ತಿಳಿಸಿದೆ.
ದೇಶಾದ್ಯಂತದ ಕೋವಿಡ್ 19 ಲಸಿಕೆ ಅಭಿಯಾನದಡಿ ಈವರೆಗೆ 186.72 ಕೋಟಿ ಡೋಸ್ ಲಸಿಕೆ ನೀಡಲಾಗಿದೆ. ಕಳೆದ 24ಗಂಟೆಯಲ್ಲಿ ಸುಮಾರು 4,01,909 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದೆ ಎಂದು ಅಂಕಿಅಂಶ ವಿವರಿಸಿದೆ.
ಸೋಮವಾರ ದೇಶದಲ್ಲಿ 2,183 ಕೋವಿಡ್ ಪ್ರಕರಣ ಪತ್ತೆಯಾಗಿತ್ತು. 24 ಗಂಟೆಯಲ್ಲಿ ಸುಮಾರು ಶೇ.90ರಷ್ಟು ಪ್ರಕರಣ ಏರಿಕೆಯಾಗಿತ್ತು. ಇದಕ್ಕೆ ಕಾರಣ ಕೇರಳ ರಾಜ್ಯದ ಬ್ಯಾಕ್ ಲಾಗ್ ಪ್ರಕರಣಗಳ (ನಾಲ್ಕು ದಿನಗಳ ಬಾಕಿ ಉಳಿದ ಪ್ರಕರಣ) ಸಂಖ್ಯೆ ಸೇರ್ಪಡೆಯಾಗಿರುವುದು.