ಮುಂಡರಗಿ: ಕೋವಿಡ್ ನಾಲ್ಕನೇ ಅಲೆ ಕುರಿತು ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸಂಸದ ಶಿವಕುಮಾರ ಉದಾಸಿ ಹೇಳಿದರು.
ಪಟ್ಟಣದ ತಾಲೂಕು ಆಸ್ಪತ್ರೆ, ಜಿಪಂ, ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಈಗಾಗಲೇ ಎರಡನೆಯ ಅಲೆಯಲ್ಲಿ ನಮ್ಮ ಹತ್ತಿರದ ಬಂಧುಗಳನ್ನು ಕಳೆದುಕೊಂಡಿದ್ದೇವೆ. ನಾಲ್ಕನೇ ಅಲೆಯ ಮುನ್ನೆಚ್ಚರಿಕೆಗಾಗಿ ಮಾಸ್ಕ್ ಧರಿಸಬೇಕು. ಅಂತರ ಕಾಪಾಡಿಕೊಳ್ಳಬೇಕು. ಸ್ಯಾನಿಟೈಸರ್ ಬಳಸಬೇಕು ಎಂದು ಹೇಳಿದರು.
ಬಡವರಿಗೆ ಆರೋಗ್ಯದ ಯೋಜನೆಗಳ ತಲುಪಿಸುವುದೇ ಆರೋಗ್ಯ ಮೇಳದ ಉದ್ದೇಶವಾಗಿದೆ. ದೇಶದ ಬಡ ಜನರು ಆರೋಗ್ಯಕ್ಕಾಗಿ ಮಾಡುತ್ತಿರುವ ಖರ್ಚು ತಗ್ಗಿಸುವುದೇ ಆರೋಗ್ಯ ಮೇಳಗಳ ಗುರಿಯಾಗಿದೆ. ಆರೋಗ್ಯ ಮೇಳದಲ್ಲಿ ಆಯುಷ್ಮಾನ್ ಕಾರ್ಡ್ ಮತ್ತು ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಆರೋಗ್ಯ ಕಾರ್ಡ್‌ನಿಂದ ಆರೋಗ್ಯ ಸಮಸ್ಯೆಯ ಸಂಪೂರ್ಣ ಮಾಹಿತಿ ಅದರಲ್ಲಿರಲಿದೆ. ಜತೆಗೆ ಆರೋಗ್ಯ ಕಾರ್ಡ್ ಹೊಂದಿರುವ ಬಿಪಿಎಲ್ ಕಾರ್ಡ್‌ದಾರರಿಗೆ ವಾರ್ಷಿಕವಾಗಿ 5 ಲಕ್ಷ ರೂ.ಗಳವರೆಗೂ ಆರೋಗ್ಯದ ಚಿಕಿತ್ಸೆಗಾಗಿ ಸರಕಾರ ಖರ್ಚು ಭರಿಸಲಿದೆ. ಗದಗ ಜಿಲ್ಲೆಯಲ್ಲಿ 16 ಸಾವಿರ ಆಯುಷ್ಮಾನ್ ಕಾರ್ಡ್ ವಿತರಿಸಬೇಕಿದೆ.ರಾಷ್ಟ್ರೀಯ ಆರೋಗ್ಯ ಮಿಷನ್‌ನಡಿ ಗದಗ ಜಿಲ್ಲೆಗೆ 38 ಕೋಟಿ ರೂ. ಅನುದಾನ ಬಂದಿದ್ದು, ಅದರಲ್ಲಿ 28.15 ಕೋಟಿ ರೂ.ಗಳ ಸದ್ಬಳಕೆ ಮಾಡಲಾಗಿದೆ. 20-23 ಬಜೆಟ್‌ನಲ್ಲಿ 83 ಸಾವಿರ ಕೋಟಿ ರೂ.ಗಳನ್ನು ಆರೋಗ್ಯಕ್ಕಾಗಿ ಬಳಸಲಾಗುತ್ತಿದೆ ಎಂದರು.
ಪೋಷಣಾ ಅಭಿಯಾನದಲ್ಲಿ ಮಕ್ಕಳ ಕ್ಯಾಂಪ್ ಆಯೋಜಿಸಿ, ಮಕ್ಕಳ ತೂಕವನ್ನು ನೋಡಿ ಪೋಷಕಾಂಶ ವಿತರಿಸಿ, ಆರೋಗ್ಯವಂತ ಮಕ್ಕಳಿಗೆ ಬಹುಮಾನ ವಿತರಿಸಬೇಕು ಎಂದು ಸಿಡಿಪಿಒ ಅವರನ್ನು ವೇದಿಕೆಗೆ ಕರೆಯಿಸಿ ಸೂಚಿಸಿದರು.
ಶ್ರೀ ಜ.ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾನಿಧ್ಯ ವಹಿಸಿ ಮಾತನಾಡಿ, ಆರೋಗ್ಯವೇ ಭಾಗ್ಯವಾಗಿದ್ದು, ಆರೋಗ್ಯ ಇದ್ದರೇ ಎಲ್ಲ ಭಾಗ್ಯಗಳು ಇದ್ದಂತೆ. ಆದ್ದರಿಂದ ಆರೋಗ್ಯ ಕಾಪಾಡಿಕೊಳ್ಳಲು ಎಲ್ಲರೂ ಮುಂದಾಗಬೇಕು ಎಂದರು.
ಶಾಸಕ ರಾಮಣ್ಣ ಲಮಾಣಿ, ಉಪವಿಭಾಗಾಧಿಕಾರಿ ರಾಯಪ್ಪ ಹುಣಸಗಿ, ತಹಶೀಲ್ದಾರ್ ಆಶಪ್ಪ ಪೂಜಾರ, ತಾಪಂ ಇಒ ಎಸ್. ಎಸ್.ಕಲ್ಮನಿ, ಪುರಸಭೆ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ, ಮುಖಂಡರಾದ ಹೇಮಗಿರೀಶ ಹಾವಿನಾಳ, ಕರಬಸಪ್ಪ ಹಂಚಿನಾಳ, ಭೀಮಸಿಂಗ್ ರಾಠೊಡ್, ಡಾ|ಕುಮಾರಸ್ವಾಮಿ ಹಿರೇಮಠ, ಬಸವರಾಜ ಬಿಳಿಮಗ್ಗದ ಮತ್ತಿತರರು ಇದ್ದರು. ಡಾ|ಜಿ.ಎಂ.ಗೊಜನೂರು ಪ್ರಾಸ್ತಾವಿಕ ಮಾತನಾಡಿದರು. ಡಾ|ರಾಜೇಶ ಸ್ವಾಗತಿಸಿದರು. ಮಂಜುಳಾ ಸಜ್ಜನರ ನಿರೂಪಿಸಿದರು. ಡಾ|ಕೀರ್ತಿಹಾಸ ವಂದಿಸಿದರು.