Advertisement

ಲೋಕಸಮರ ನಾಲ್ಕನೇ ಹಂತ: 928ರಲ್ಲಿ 210 ಅಭ್ಯರ್ಥಿಗಳ ಮೇಲೆ ಕ್ರಿಮಿನಲ್‌ ಪ್ರಕರಣ

10:00 AM Apr 26, 2019 | Hari Prasad |

ನವದೆಹಲಿ: ದೇಶದಲ್ಲಿ ಲೋಕಸಭಾ ಚುನಾವಣೆಯ ನಾಲ್ಕನೇ ಹಂತದ ಮತದಾನ ಇದೇ ತಿಂಗಳ 29ರಂದು ನಡೆಯಲಿದೆ. ನಾಲ್ಕನೇ ಹಂತದ ಚುನಾವಣೆಯಲ್ಲಿ 928 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದು ಅವರಲ್ಲಿ 210 ಅಭ್ಯರ್ಥಿಗಳ ಮೇಲೆ ವಿವಿಧ ಕ್ರಿಮಿನಲ್‌ ಪ್ರಕರಣಗಳಿರುವುದು ‘ಪ್ರಜಾಸತ್ತಾತ್ಮಕ ಸುಧಾರಣಾ ಸಂಘ (ಎಡಿಆರ್‌)) ಬುಧವಾರದಂದು ಬಿಡುಗಡೆಗೊಳಿಸಿರುವ ಸಮೀಕ್ಷೆಯೊಂದರಿಂದ ಬಯಲಾಗಿದೆ. ಅಭ್ಯರ್ಥಿಗಳು ತಮ್ಮ ನಾಮಪತ್ರಗಳ ಸಲ್ಲಿಕೆ ವೇಳೆ ಸಲ್ಲಿಸಿರುವ ಮಾಹಿತಿಗಳ ಆಧಾರದಲ್ಲಿ ಈ ಸಮೀಕ್ಷೆಯನ್ನು ನಡೆಸಲಾಗಿದೆ.

Advertisement

ಇವರಲ್ಲಿ 158 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್‌ ಪ್ರಕರಣಗಳಿವೆ. 12 ಅಭ್ಯರ್ಥಿಗಳು ತಮ್ಮ ಮೇಲೆ ಕ್ರಿಮಿನಲ್‌ ಪ್ರಕರಣ ಆರೋಪ ಇರುವುದನ್ನು ಘೋಷಿಸಿಕೊಂಡಿದ್ದಾರೆ. ಐವರು ಅಭ್ಯರ್ಥಿಗಳು ತಮ್ಮ ಮೇಲೆ ಕೊಲೆ ಪ್ರಕರಣದ ಆರೋಪ ಇರುವುದನ್ನು ಘೋಷಿಸಿಕೊಂಡಿದ್ದರೆ, 24 ಅಭ್ಯರ್ಥಿಗಳ ಮೇಲೆ ಕೊಲೆ ಪ್ರಯತ್ನದ ಪ್ರಕರಣ ದಾಖಲಾಗಿವೆ. ನಾಲ್ವರು ಅಭ್ಯರ್ಥಿಗಳ ಮೇಲೆ ಅಪಹರಣ ಸಂಬಂಧಿ ಪ್ರಕರಣ ದಾಖಲಾಗಿದೆ. 21 ಅಭ್ಯರ್ಥಿಗಳ ಮೇಲೆ ಮಹಿಳೆಯರ ವಿರುದ್ಧದ ವಿವಿಧ ಪ್ರಕರಣಗಳು ದಾಖಲಾಗಿವೆ. ಇನ್ನು 16 ಅಭ್ಯರ್ಥಿಗಳ ಮೇಲೆ ದ್ವೇಷದ ಭಾಷಣ ಮಾಡಿರುವ ಕಾರಣಕ್ಕಾಗಿ ಪ್ರಕರಣ ದಾಖಲಾಗಿದೆ.

ಇನ್ನು ಪಕ್ಷಗಳ ವಿಚಾರಕ್ಕೆ ಬರುವುದಾದರೆ, ನಾಲ್ಕನೇ ಹಂತದ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಸ್ಪರ್ಧಿಸುತ್ತಿರುವ 57 ಸ್ಪರ್ಧಿಗಳಲ್ಲಿ 20 ಅಭ್ಯರ್ಥಿಗಳ ವಿರುದ್ಧ ವಿವಿಧ ಕ್ರಿಮಿನಲ್‌ ಪ್ರಕರಣಗಳಿವೆ. ಕಾಂಗ್ರೆಸ್‌ ನ ಒಟ್ಟು 54 ಅಭ್ಯರ್ಥಿಗಳಲ್ಲಿ 9 ಅಭ್ಯರ್ಥಿಗಳ ವಿರುದ್ಧ ಕ್ರಿಮಿನಲ್‌ ಪ್ರಕರಣಗಳಿರುವುದು ಜಾಹೀರಾಗಿದೆ. ಬಿ.ಎಸ್‌.ಪಿ.ಯ ಒಟ್ಟು 54 ಅಭ್ಯರ್ಥಿಗಳಲ್ಲಿ 10 ಅಭ್ಯರ್ಥಿಗಳು ಕ್ರಿಮಿನಲ್‌ ಹಿನ್ನಲೆಯನ್ನು ಹೊಂದಿದವರಾಗಿದ್ದಾರೆ. ಶಿವಸೇನೆಯ 21 ಅಭ್ಯರ್ಥಿಗಳ ಪೈಕಿ 9 ಜನರ ಮೇಲೆ ವಿವಿಧ ರೀತಿಯ ಪ್ರಕರಣಗಳಿವೆ. ಮತ್ತು 345 ಸ್ವತಂತ್ರ ಅಭ್ಯರ್ಥಿಗಳ ಪೈಕಿ 45 ಅಭ್ಯರ್ಥಿಗಳ ಮೇಲೆ ಗಂಭೀರ ಸ್ವರೂಪದ ಕ್ರಿಮಿನಲ್‌ ಆರೋಪಗಳಿರುವುದಾಗಿ ತಮ್ಮ ನಾಮಪತ್ರ ಸಲ್ಲಿಕೆ ವೇಳೆ ಘೋಷಿಸಿಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next