ಬೆಂಗಳೂರು: ಬಿಸಿಲ ಧಗೆಯಿಂದ ಕಾದು ಹೆಂಚಾಗಿದ್ದ ಕಲಬುರಗಿ, ಬೀದರ್, ಚಿಕ್ಕಮಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಸೋಮವಾರದ ಮಳೆ ತಂಪೆರೆದಿದ್ದು, ಸಿಡಿಲಬ್ಬರದ ಮಳೆಗೆ ಮೂವರು ಮೃತಪಟ್ಟಿದ್ದಾರೆ. ಇದೇ ವೇಳೆ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ಎರಡು ದಿನಗಳು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಚಿಕ್ಕಮಗಳೂರು ಸುತ್ತಮುತ್ತ ಸಂಜೆ 4 ಗಂಟೆ ವೇಳೆಗೆ ಮಳೆಯಾಗಿದ್ದು, ತೇಗೂರು ಗ್ರಾಮದ ಕೆರೆ ಏರಿಯ ಮೇಲೆ ಬರುತ್ತಿದ್ದ ಗ್ರಾಮದ ಮಂಜುನಾಥ ಆಚಾರಿ (45) ಹಾಗೂ ಅವರ ಪತ್ನಿ ಭಾರತಿ (40) ಎಂಬುವರಿಗೆ ಸಿಡಿಲು ಬಡಿಯಿತು. ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಿತ್ರದುರ್ಗ ತಾಲೂಕಿನ ಭರಮಸಾಗರ ಸಮೀಪದ ಹೆಗ್ಗೆರೆ ಗ್ರಾಮದ ಶಾರದಮ್ಮ (45) ಎಂಬುವರು ಗುಡುಗು ಸಹಿತ ಮಳೆ ಬರುವಾಗ ಮನೆಯ ಹೊರ ಭಾಗದಲ್ಲಿ ನಿಂತಿದ್ದ ಸಂದರ್ಭದಲ್ಲಿ ಸಿಡಿಲು ಬಡಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಲ್ಲದೆ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಕಲಬುಗರಿ, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಹಾಸನ, ಮಂಡ್ಯ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಯಾದಗಿರಿ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ ಹಾಗೂ ನಗರ ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಈ ಮಧ್ಯೆ, ಪೋನಿ ಚಂಡಮಾರುತ ಬಂಗಾಳಕೊಲ್ಲಿಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದು, ರಾಜ್ಯದ ಮೇಲೆ ಹೆಚ್ಚಿನ ಪ್ರಭಾವ ಬೀರುವುದಿಲ್ಲ. ಆದರೆ, ಮಲೆನಾಡು ಭಾಗದಲ್ಲಿ ಕಡಿಮೆ ಒತ್ತಡದ ತಗ್ಗು (ಟ್ರಫ್) ನಿರ್ಮಾಣವಾಗಿದ್ದು, ಅರಬ್ಬಿ ಸಮುದ್ರ ಭಾಗದಿಂದ ತೇವಾಂಶಭರಿತ ಮೋಡ ಬರುತ್ತಿರುವುದರಿಂದ ಕರಾವಳಿ, ಮಲೆನಾಡು ಸೇರಿದಂತೆ ಉತ್ತರ ಒಳನಾಡಿನ ಹಲವೆಡೆ ಉತ್ತಮ ಮಳೆಯಾಗುವ ಸಾಧ್ಯತೆಯಿದೆ ಎಂದು ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಶ್ರೀನಿವಾಸರೆಡ್ಡಿ ತಿಳಿಸಿದ್ದಾರೆ.
ಪೋನಿ ಚಂಡಮಾರುತವು ಇನ್ನೂ ಸಮುದ್ರ ಭಾಗದಲ್ಲಿಯೇ ಬಲಗೊಳ್ಳುತ್ತಿದ್ದು, ಚೆನ್ನೈನಿಂದ 800 ಕಿ.ಮೀ.ದೂರದಲ್ಲಿದೆ. ಹೀಗಾಗಿ, ಅದರ ಪರಿಣಾಮ ಭೂಭಾಗದ ಮೇಲೆ ಹೆಚ್ಚಾಗಿಲ್ಲ. ಆದರೆ, ಮಲೆನಾಡು ಭಾಗದಲ್ಲಿ ಟ್ರಫ್ ನಿರ್ಮಾಣವಾಗಿದ್ದು, ಅರಬ್ಬಿ ಸಮುದ್ರದಿಂದ ತೇವಾಂಶ ಭರಿತ ಮೋಡಲು ಈ ಕಡೆಗೆ ಚಲಿಸುತ್ತಿರುವುದರಿಂದ ಮಳೆಯಾಗುತ್ತಿದೆ.