ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಮೊಗೇರ ಸಮಾಜದವರು ನಡೆಸುತ್ತಿರುವ ಪ್ರತಿಭಟನೆಯು ಇಂದು ನಾಲ್ಕನೆಯ ದಿನ ತಲುಪಿದ್ದು ಪ್ರತಿ ದಿನವೂ ಕೂಡಾ ನೂರಾರು ಜನರು ಭಾಗಹಿಸುವ ಮೂಲಕ ತಮ್ಮ ಸಮಾಜದ ಸಂಕಷ್ಟವನ್ನು ತೋಡಿಕೊಳ್ಳುತ್ತಿದ್ದಾರೆ.
ಕಳೆದ ಬುಧವಾರದಂದು ವೆಂಕಟಾಪುರದ ಶ್ರೀನಿವಾಸ ಸಭಾಗ್ರಹದಿಂದ ಸಾವಿರಾರು ಜನರು ಮೆರವಣಿಗೆಯಲ್ಲಿ ಬಂದು ಒಂದು ದಿನದ ಧರಣಿ ನಡೆಸಿದ್ದು ತಮ್ಮ ಬೇಡಿಕೆ ಈಡೇರುವ ತನಕ ಧರಣಿ ಮುಂದುವರಿಯುವುದಾಗಿ ಘೋಷಣೆ ಮಾಡಿದ್ದು ಪ್ರತಿ ದಿನವೂ ಧರಣಿ ಸತ್ಯಾಗ್ರಹ ಮುಂದುವರಿದಿದೆ.
ಧರಣಿ ನಿರತರನ್ನು ಭೇಟಿಯಾದ ಶಾಸಕ ಸುನಿಲ್ ನಾಯ್ಕ ಅವರು ಈಗಾಗಲೇ ನಾನು ಸರಕಾರಕ್ಕೆ ಮನವಿಯನ್ನು ಮಾಡಿದ್ದು ಮೊಗೇರ ಸಮಾಜಕ್ಕೆ ನ್ಯಾಯ ದೊರಕಿಸಿಕೊಂಡುವಂತೆ ಮನವಿ ಮಾಡಿದ್ದೇನೆ. ವಿಧಾನ ಸಭಾ ಅಧಿವೇಶನ ನಡೆಯುತ್ತಿರುವುದರಿಂದ ಮಂಗಳವಾರ ನನಗೆ ಈ ವಿಷಯದ ಮೇಲೆ ಮಾತನಾಡಲು ಅವಕಾಶವನ್ನು ನೀಡಿದ್ದಾರೆ. ಮೀನುಗಾರರ ಸಮಾಜದ ಸಂಕಷ್ಟದೊಂದಿಗೆ ನಾನು ಯಾವಾಗಲೂ ಇದ್ದು ಸರಕಾರದ ಗಮನ ಸೆಳೆಯುವ ಕಾರ್ಯವನ್ನು ಮಾಡುವುದಾಗಿ ಭರವಸೆಯನ್ನು ನೀಡಿದರು. ಕಳೆದ ಎರಡು ವರ್ಷಗಳ ಕೋವಿಡ್ ಸಂಕಷ್ಟದಿಂದಾಗಿ ಮೀನುಗಾರರು ಯಾವ ರೀತಿಯ ಸಂಕಷ್ಟವನ್ನು ಅನುಭವಿಸಿದ್ದಾರೆ ಎನ್ನುವುದರ ಕುರಿತು ಅರಿವಿದ್ದ ನಾನು ತಮ್ಮ ಸಂಕಷ್ಟಕ್ಕೆ ಸದಾ ಸ್ಫಂಧಿಸುತ್ತೇನೆ ಎನ್ನುವ ಭರವಸೆಯನ್ನು ನೀಡಿದ್ದಾರೆ. ಶಾಸಕನಾದ ನಂತರ ನಾನು ಹಲವಾರು ಬಾರಿ ರಾಜ್ಯ ಮುಖ್ಯ ಮಂತ್ರಿಗಳನ್ನು ಈ ವಿಷಯವಾಗಿ ಭೇಟಿ ಮಾಡಿದ್ದೇನೆ. ಈಗಾಗಲೇ ಮುಖ್ಯ ಮಂತ್ರಿಗಳು ಕಾನೂನು ಸಚಿವರಿಗೆ ಟಿಪ್ಪಣಿಯನ್ನು ಹಾಕಿದ್ದು ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಮುಂದುವರಿಸುವಂತೆ ಕೋರಿದ್ದಾರೆ. ಈ ಕುರಿತು ನಿರಂತರ ಪ್ರಯತ್ನ ಸಾಗಿದ್ದು ಸಮಾಜಕ್ಕೆ ನ್ಯಾಯ ಕೊಡಿಸುವ ಕೆಲಸವನ್ನು ಮಾಡುತ್ತೇನೆ ಎನ್ನುವ ಭರವಸೆಯನ್ನು ನೀಡಿದರು.
ಇದನ್ನೂ ಓದಿ : ಉತ್ತರ ಕರ್ನಾಟಕದ ವಿಶೇಷ ಸಿಹಿ ಪದಾರ್ಥ ಬನಹಟ್ಟಿಯ ಕಡ್ಲಿ ಸಂಗಪ್ಪನವರ ಮುಂಬೈ ಮಾದ್ಲಿ
ಈ ಸಂದರ್ಭದಲ್ಲಿ ಮಾತನಾಡಿದ ಮೊಗೇರ ಸಮಾಜದ ಅಧ್ಯಕ್ಷ ಅಣ್ಣಪ್ಪ ಮೊಗೇರ ಅವರು ಪರಿಶಿಷ್ಟ ಜಾತಿ ಪ್ರಮಾಣ ಪತ್ರ ದೊರಕಿಸಿಕೊಡುವ ಕುರಿತು ಈಗಾಗಲೇ ಜಿಲ್ಲಾಧಿಕಾರಿಗಳೊಂದಿಗೆ ಮಾತನಾಡಿದ್ದೇವೆ, ಎರಡು ದಿನಗಳ ಕಾಲಾವಕಾಶ ಕೋರಿದ್ದು ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದೇವೆ. ನಮ್ಮ ಹಕ್ಕು ದೊರೆಯುವ ತನಕ ನಮ್ಮ ಧರಣಿ ಸತ್ಯಾಗ್ರಹ ಮುಂದುವರಿಯಲಿದೆ ಎಂದರು.