ನಾಶಿಕ್, ಮಹಾರಾಷ್ಟ್ರ : ಇಲ್ಲಿನ ಚಾಂದ್‌ಗಿರಿ ಪ್ರದೇಶದಲ್ಲಿ 4 ವರ್ಷ ಪ್ರಾಯದ ಹುಡುಗಿ 10 ರೂ ನಾಣ್ಯವನ್ನು ಆಕಸ್ಮಿಕವಾಗಿ ನುಂಗಿ ಮೃತಪಟ್ಟ ಹೃದಯ ವಿದ್ರಾವಕ ಘಟನೆ ಇಂದು ನಡೆದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಮೃತ ಪಟ್ಟ ಬಾಲಕಿಯ ಹೆಸರು ಶಾಲಿನಿ ಹಂಡಗೆ. “ನನಗೆ ಹಸಿವಾಗುತ್ತಿದೆ; ತಿನ್ನಲು ಏನಾದರೂ ಕೊಡು’ ಎಂದು ಬಾಲಕಿಯು ತಾಯಿಯನ್ನು ಹಠಹಿಡಿದಾಗ, ತಾಯಿ 10 ರೂ. ನಾಣ್ಯ ಕೊಟ್ಟು ಹೊರಗೆ ಏನಾದರೂ ತಿಂಡಿ ತೆಗೆದುಕೊಂಡು ತಿನ್ನು’ ಎಂದು ಹೇಳಿದಳು.
ಆದರೆ ಹೊರಗೆ ನಾಣ್ಯದೊಂದಿಗೆ ಆಡುತ್ತಿದ್ದ ಬಾಲಕಿಯು ಆಕಸ್ಮಿಕವಾಗಿ ನಾಣ್ಯವನ್ನು ನುಂಗಿದಳು.
ಒಡನೆಯೇ ಹೆತ್ತವರು ಆಕೆಯನ್ನು ಸ್ಥಳೀಯ ಆಸ್ಪತ್ರೆ ಒಯ್ದರು. ಬಳಿಕ ಅಲ್ಲಿಂದ ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗೆ ಒಯ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಮೃತಪಟ್ಟಳು.
ಪೊಲೀಸರು ಆಕಸ್ಮಿಕ ಸಾವಿನ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ ಎಂದು ನಾಶಿಕ್ ರಸ್ತೆ ಪೊಲೀಸ್ ಠಾಣಾಧಿಕಾರಿ ಪಿ ಆರ್ ಧೋಕಣೆ ತಿಳಿಸಿದ್ದಾರೆ.