ಹೊನ್ನಾವರ: ಚತುಷ್ಪಥ ಕಾಮಗಾರಿ ನಡೆಯುವ ಮೊದಲೇ ಹೊನ್ನಾವರ ನಗರದ ಶರಾವತಿ ಸರ್ಕಲ್‌ನಿಂದ ಕಾಲೇಜು
ಸರ್ಕಲ್‌ವರೆಗೆ 920 ಮೀಟರ್ ಹೆದ್ದಾರಿಯಲ್ಲಿ ಸದಾ ಸಂಚಾರ ಗಿಜಿಗುಡುತ್ತಿತ್ತು. ಚತುಷ್ಪಥ ಕಾಮಗಾರಿಯಲ್ಲಿ ಇಲ್ಲಿ ಮೇಲ್ಸೇತುವೆ ನಿರ್ಮಾಣವಾಗಲಿದೆ ಎಂಬುದು ಅಧಿಕೃತವಾಗಿ ಪ್ರಕಟವಾಗಿ ಸರ್ವೇ ಕಾರ್ಯ ನಡೆದಾಗ ಈಗಲಾದರೂ ಜನದಟ್ಟಣೆ ತಪ್ಪಲಿದೆ ಎಂದು ಜನ ಖುಷಿಪಟ್ಟಿದ್ದರು.
ಕೆಲವರಿಗಾಗಿ ಕೆಲವರು ಹಲವರ ಜೀವವನ್ನು ಅಪಾಯಕೊಡ್ಡಿ 45 ಮೀ. ರಸ್ತೆಯನ್ನು 30ಮೀ.ಗೆ ಇಳಿಸಿದ್ದು ಗೊತ್ತಾಗುವಾಗ ಶಾಕ್ ಆಗಿತ್ತು. ಸಾರ್ವಜನಿಕರು ಮನವಿ ಸಲ್ಲಿಸಿದರು, ಕೇಳುವವರೇ ಇರಲಿಲ್ಲ, ಹೋರಾಟಕ್ಕಿಳಿದರು. ಸಮಿತಿ ರಚಿಸಿಕೊಂಡರು, ಅರ್ಧದಿನ ಬಂದ್ ಮಾಡಿ ಪ್ರತಿಭಟನೆ ನಡೆಸಿದರು. ಮತದಾರ ಪ್ರಭುಗಳ ಸಿಟ್ಟು ಕಂಡು ರಾಜಕಾರಣಿಗಳು ಪುನಃ ಪರಿಶೀಲನೆಯ ಭರವಸೆ ನೀಡಿದರು.
ಆದರೆ ಈವರೆಗೆ ಯಾವುದೇ ಕೆಲಸ ಆಗಲಿಲ್ಲ. ಮೇಲ್ಸೇತುವೆಗಾಗಿ ಮತ್ತೆ ಹೋರಾಟ ಆರಂಭಿಸಬೇಕೇ ಎಂದು ಸಮಿತಿ ಸಂಚಾಲಕ ಲೋಕೇಶ ಮೇಸ್ತ, ಕಾರ್ಯದರ್ಶಿ ರಘು ಪೈ, ಪಪಂ ಸದಸ್ಯ ಮಹೇಶ ಮೇಸ್ತ ಪ್ರಶ್ನಿಸಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊನ್ನಾವರ, ಭಟ್ಕಳ ಮತ್ತು ಅವರ್ಸಾದಲ್ಲಿ ಮೇಲ್ಸೇತುವೆ ತೀರ್ಮಾನ ಕೈಗೊಂಡಿತ್ತು. ಜನಗಳ ಒತ್ತಡದಿಂದ ಭಟ್ಕಳದಲ್ಲಿ ಮತ್ತೆ 45 ಮೀ. ಅಗಲೀಕರಣ ಮಾಡಿ ಮೇಲ್ಸೇತುವೆ ಮಾಡಲು ಒಪ್ಪಿಕೊಂಡ ಭೂ ಸಾರಿಗೆ ಮಂತ್ರಾಲಯ ಹೊನ್ನಾವರಕ್ಕೆ ಮಾತ್ರ ಯಾಕೆ
ಅನ್ಯಾಯ ಮಾಡುತ್ತಿದೆ, ನಕ್ಷೆ ಬದಲಿಸಿದೆ ಎಂಬುದಕ್ಕೆ ಉತ್ತರ ಸಿಗುತ್ತಿಲ್ಲ. ಜನ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನಂತರ ಭಾರೀ ಪ್ರತಿಭಟನೆ ನಡೆದಿತ್ತು. ಇಷ್ಟಾದರೂ ಗಮನಿಸದ ಇಲಾಖೆ ರಾಜಕಾರಣಿಗಳು ಹೊಸ ನಕ್ಷೆ ಸಿದ್ಧಪಡಿಸಿ ಕೇವಲ 30ಮೀ. ಭೂಮಿ ವಶಮಾಡಿಕೊಂಡು ಪರಿಹಾರ ನೀಡಿ ಕೆಲಸ ಆರಂಭಿಸಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ:ಯಾವುದೇ ರಾಜಕೀಯ ಪಕ್ಷಕ್ಕೂ ಸೇರ್ಪಡೆಯಾಗಬಹುದು: ಸದಸ್ಯರಿಗೆ ರಜನಿ ಅಭಿಮಾನಿಗಳ ಸಂಘ!
ಜನ ಹೇಳುವುದರಲ್ಲಿ ನ್ಯಾಯವಿದೆ. ನೆರೆಯ ಮಂಗಳೂರು, ಹುಬ್ಬಳ್ಳಿ, ಪಣಜಿ, ಶಿವಮೊಗ್ಗಾ ಜಿಲ್ಲೆಗಳಿಗೆ ಹೊನ್ನಾವರದಿಂದ 180 ಕಿಲೋ ಮೀಟರ್ ಅಂತರವಿದೆ. ಕೇರಳದಿಂದ ಉತ್ತರಭಾರತವನ್ನು ಸಂಪರ್ಕ ಸಾಧಿಸುವ ಚತುಷ್ಪಥದಲ್ಲಿ ಈಗಾಗಲೇ ಜನ, ವಾಹನ ದಟ್ಟಣೆ ಇದೆ.
ಹೊನ್ನಾವರ ನಗರದ ಅರ್ಧ ಜನ ಹೆದ್ದಾರಿಯಿಂದ ಪೂರ್ವದಲ್ಲೂ, ಅರ್ಧ ಜನ ಪಶ್ಚಿಮದಲ್ಲೂ ನೆಲೆಸಿದ್ದಾರೆ. ಎರಡೂ ಕಡೆ ಹತ್ತಾರು ಶಿಕ್ಷಣ ಸಂಸ್ಥೆಗಳಿವೆ, ಹಳ್ಳಿಗಳ ಸಂಪರ್ಕವೂ ಇಲ್ಲಿಂದಲೇ ಹಾದು ಹೋಗುತ್ತದೆ. ನಗರದೊಳಗಿನ ಭಾಗಗಳಿಗೂ ಇದೇ ಹೆದ್ದಾರಿಯನ್ನು ದಾಟಬೇಕು. ಹೀಗಿರುವಾಗ ಮೇಲ್ಸೇತುವೆ ಮತ್ತು ಸರ್ವಿಸ್ ರಸ್ತೆ ಇಲ್ಲದಿದ್ದರೆ ಪ್ರತಿಕ್ಷಣವೂ ಗಂಡಾಂತರವಿದೆ ಎಂಬುದು ಜನರ ಅಭಿಪ್ರಾಯ.
ಈ ವಿಷಯ ಶಾಸಕರಿಗೆ, ಸಂಸದರಿಗೆ, ಆಡಳಿತದವರಿಗೆ, ಜಿಲ್ಲಾ ಮಂತ್ರಿಗಳಿಗೆ ಎಲ್ಲರಿಗೂ ಗೊತ್ತಿದೆ. ಆದರೂ ಸೂಕ್ತ ನಿರ್ಣಯ ಬರುತ್ತಿಲ್ಲ. ಮತ್ತೆ ಹೋರಾಟ ಮಾಡಬೇಕೇ? ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಸರ್ಕಾರವಿದೆ, ಅದೇ ಪಕ್ಷದವರನ್ನು ಗೆಲ್ಲಿಸಿದ್ದೇವೆ. ತಾಲೂಕಿನ ಒಂದುಕಾಲು ಲಕ್ಷ ಜನರ ಹಿತ ಮುಖ್ಯವೇ ವಿನಃ ಕೆಲವರ ಹಿತ ಮುಖ್ಯವಲ್ಲ ಎಂಬುದನ್ನು ನಾಯಕರು ಮನಗಾಣಲಿ. ಮೇಲ್ಸೇತುವೆ ಮಾಡಿಕೊಡಲಿ ಎಂದು ರಾಷ್ಟ್ರೀಯ ಹೆದ್ದಾರಿ ಮೇಲ್ಸೇತುವೆ ಹೋರಾಟ ಸಮಿತಿ ಮತ್ತೆ ವಿನಂತಿಸಿದೆ, ಇಲ್ಲವಾದರೆ
ಹೋರಾಟದ ಎಚ್ಚರಿಕೆ ನೀಡಿದೆ.