Advertisement

4 ಸಾವಿರ ಪ್ರಕರಣಕ್ಕೆ ಇವೆ ತಬ್ಲಿಘಿ ಲಿಂಕ್‌: ಕೇಂದ್ರ ಸರಕಾರದ ಮಾಹಿತಿ ಪ್ರಕಟ

02:26 PM Apr 19, 2020 | Hari Prasad |

ನವದೆಹಲಿ: ಕೋವಿಡ್ 19 ವೈರಸ್  ಲಾಕ್‌ ಡೌನ್‌ ಆರಂಭವಾಗಿ 25 ದಿನ ಪೂರೈಸುತ್ತಿರುವಂತೆಯೇ, ಒಂದೇ ದಿನದಲ್ಲಿ ದೇಶವು 43 ಸಾವುಗಳನ್ನು ಕಂಡಿದೆ ಮತ್ತು 24 ಗಂಟೆಗಳಲ್ಲಿ 991 ಮಂದಿಗೆ ಸೋಂಕು ದೃಢಪಟ್ಟಿದೆ.

Advertisement

ವಿಶೇಷವೆಂದರೆ, ದೇಶಾದ್ಯಂತ ಪತ್ತೆಯಾದ ಒಟ್ಟಾರೆ 14,777 ಪ್ರಕರಣಗಳ ಪೈಕಿ 4,291 ಪ್ರಕರಣಗಳು ತಬ್ಲಿಘಿ ಜಮಾತ್‌ ಗೆ ಸಂಬಂಧಿಸಿದ್ದು ಎಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಶನಿವಾರ ಸುದ್ದಿಗೋಷ್ಠಿಯಲ್ಲಿ ಕೋವಿಡ್ 19 ವೈರಸ್  ಸೋಂಕಿಗೆ ಸಂಬಂಧಿಸಿ ಮಾತನಾಡಿದ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರ್ವಾಲ್, ನಮ್ಮ ದೇಶದಲ್ಲಿ ಕೋವಿಡ್ 19 ವೈರಸ್  ಗೆ ಬಲಿಯಾದವರ ಪೈಕಿ ಶೇ. 75.3ರಷ್ಟು ಮಂದಿ 60 ವರ್ಷ ಮೇಲ್ಪಟ್ಟವರು ಮತ್ತು ಇವರಲ್ಲಿ ಶೇ. 83ರಷ್ಟು ಮಂದಿ ಈ ಹಿಂದೆಯೇ ಹಲವು ಕಾಯಿಲೆಗಳಿಂದ ಬಳಲುತ್ತಿದ್ದವರು ಎಂದೂ ಹೇಳಿದ್ದಾರೆ.

ಒಟ್ಟು 1,992 ರೋಗಿಗಳು ಗುಣಮುಖರಾಗಿದ್ದು, ಇವರ ಪ್ರಮಾಣ ಶೇ.13.85ರಷ್ಟಿದೆ ಎಂದೂ ತಿಳಿಸಿದ್ದಾರೆ. ಇದೇ ವೇಳೆ, ಉತ್ತಮ ಬೆಳವಣಿಗೆ ಎಂಬಂತೆ 23 ರಾಜ್ಯಗಳ 47 ಜಿಲ್ಲೆಗಳಲ್ಲಿ ಯಾವುದೇ ಹೊಸ ಸೋಂಕಿನ ಪ್ರಕರಣ ಪತ್ತೆಯಾಗಿಲ್ಲ.

ಕರ್ನಾಟಕದ ಕೊಡಗು ಹಾಗೂ ಪುದುಚೇರಿಯ ಮಾಹೆಯಲ್ಲಿ ಕಳೆದ 28 ದಿನಗಳಲ್ಲಿ ಯಾವುದೇ ವ್ಯಕ್ತಿಗೂ ಸೋಂಕು ತಗುಲಿಲ್ಲ. ಉಳಿದ 45 ಜಿಲ್ಲೆಗಳಲ್ಲಿ ಕಳೆದ 14 ದಿನಗಳಿಂದ ಸೋಂಕು ಪತ್ತೆಯಾಗಿಲ್ಲ ಎಂದು ಅಗರ್ವಾಲ್‌ ಹೇಳಿದ್ದಾರೆ.

Advertisement

ಸೈಡ್‌ ಎಫೆಕ್ಟ್ ಬಗ್ಗೆ ಸಂಶೋಧನೆ: ಮಲೇರಿಯಾ ನಿಗ್ರಹ ಔಷಧವಾದ ಹೈಡ್ರಾಕ್ಸಿಕ್ಲೋರೋಕ್ವಿನ್‌ ಅನ್ನು ಕೊರೊನಾ ಸೋಂಕಿತರಿಗೆ ನೀಡುವುದರ ಕುರಿತು ಹಾಗೂ ಆ ಔಷಧದಿಂದಾಗುವ ಸೈಡ್‌ ಎಫೆಕ್ಟ್ ಗಳ ಕುರಿತು ಸಂಶೋಧನೆ ನಡೆಸಲಾಗುತ್ತಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್‌) ಹೇಳಿದೆ.

ಈ ಔಷಧವನ್ನು ರೋಗಿಗಳ ಮೇಲೆ ಬಳಸಬಾರದು ಮತ್ತು ಅದರಿಂದ ಸಾಕಷ್ಟು ದುಷ್ಪರಿಣಾಮಗಳು ಉಂಟಾಗುವ ಸಾಧ್ಯತೆಯಿದೆ ಎಂದು ಇತ್ತೀಚೆಗೆ ಕೆಲವು ವೈದ್ಯರ ಹೇಳಿಕೆಗಳನ್ನು ಉಲ್ಲೇಖೀಸಿ ಮಾಧ್ಯಮಗಳು ವರದಿ ಪ್ರಕಟಿಸಿದ್ದವು. ಈ ಹಿನ್ನೆಲೆಯಲ್ಲಿ ಐಸಿಎಂಆರ್‌ ಹೇಳಿಕೆ ಮಹತ್ವ ಪಡೆದಿದೆ.

ವಿದೇಶಿಯರ ಸ್ಕ್ರೀನಿಂಗ್‌ಗೆ ಸೂಚನೆ
ವಿವಿಧ ರಾಜ್ಯಗಳ ವಶ ಕೇಂದ್ರದಲ್ಲಿರುವ ವಿದೇಶಿ ಕೈದಿಗಳನ್ನು ಕೂಡ ಸ್ಕ್ರೀನಿಂಗ್‌ ಗೆ ಒಳಪಡಿಸಬೇಕು ಎಂದು ಕೇಂದ್ರ ಗೃಹ ಇಲಾಖೆ ಸೂಚಿಸಿದೆ. ಈ ಕುರಿತು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಗೃಹ ಕಾರ್ಯದರ್ಶಿಗಳು ಹಾಗೂ ಜೈಲುಗಳ ಡಿಜಿಗಳಿಗೆ ಪತ್ರ ಬರೆಯಲಾಗಿದೆ.

ಕೋವಿಡ್ ಸೋಂಕು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಯಾವ್ಯಾವ ರಾಜ್ಯಗಳ ವಶ ಕೇಂದ್ರಗಳಲ್ಲಿ ವಿದೇಶಿಯರಿದ್ದಾರೋ, ಅವರ ಮೇಲೆ ಹಾಗೂ ಅವರನ್ನು ಭೇಟಿಯಾಗಲು ಬರುವವರ ಮೇಲೆ ಗಮನವಿಡಬೇಕು ಹಾಗೂ ಅವರನ್ನು ಸ್ಕ್ರೀನಿಂಗ್‌ಗೆ ಒಳಪಡಿಸಬೇಕು ಎಂದು ಪತ್ರದಲ್ಲಿ ಸೂಚಿಸಲಾಗಿದೆ.

ಮೃತರ ಪ್ರಮಾಣ

ವಯಸ್ಸು — ಮರಣ ಪ್ರಮಾಣ

0-45          ಶೇ.14.4

45- 60        ಶೇ.10.3

60-75          ಶೇ.33.1

75 ವರ್ಷ ಮೇಲ್ಪಟ್ಟವರು: 42.2%

ದೇಶದಲ್ಲಿ ಒಟ್ಟಾರೆ ಮರಣ ಪ್ರಮಾಣ: 3.3%

Advertisement

Udayavani is now on Telegram. Click here to join our channel and stay updated with the latest news.

Next