Advertisement

ನೈಜ ಪ್ರೀತಿಯ ನಾಲ್ಕು ಕತೆಗಳು

02:15 PM Feb 14, 2018 | Harsha Rao |

ಪ್ರೀತಿ ಎಂದರೆ ವಿಶ್‌, ಚಾಟಿಂಗ್‌, ಡೇಟಿಂಗ್‌ ಶಾಪಿಂಗ್‌, ಕ್ಯಾಂಡಲ್‌ಲೈಟ್‌ ಡಿನ್ನರ್‌, ಸೆಕ್ಸ್‌, ಲಿವಿಂಗ್‌ ಟುಗೆದರ್‌ ಇಷ್ಟಕ್ಕೆ ಸೀಮಿತವಾಗಿಬಿಟ್ಟಿದೆ. ನಿಜವಾದ ಪ್ರೀತಿ ಇದನ್ನೆಲ್ಲ ಮೀರಿದ್ದು ಮತ್ತು ಅದು ಹೃದಯ ಮತ್ತು ಮನಸ್ಸಿಗೆ ಸಂಬಂಧಿಸಿದ್ದು ಎನ್ನುವುದನ್ನು ತಿಳಿಸುವ ನಾಲ್ಕು ನೈಜ ಪ್ರೀತಿಯ ಕತೆಗಳು ಪ್ರೇಮಿಗಳ ದಿನದ ನಿಮಿತ್ತ ನಿಮಗಾಗಿ…

Advertisement

ಪ್ರೀತಿ-ಪ್ರೇಮ ಎಂದರೆ ಕೇವಲ ಆಕರ್ಷಣೆ ಮಾತ್ರವಲ್ಲ. ಅಲ್ಲಿ ಭಾವನೆಗಳ ಸಂಗಮ, ಹೊಂದಾಣಿಕೆ, ಹೃದಯಗಳ ಸಮ್ಮಿಲನ, ಬಾಂಧವ್ಯಗಳಿರುತ್ತವೆ. 

ಪ್ರೀತಿಯೆಂಬುದು ಓರ್ವ ವ್ಯಕ್ತಿಯ ಸೌಂದರ್ಯ ನೋಡಿ ಮೂಡುವುದಲ್ಲ. ಎರಡು ಮನಸ್ಸುಗಳೊಂದಿಗೆ ಬೆಸೆದು ಕೊಳ್ಳು ವಂತಹದ್ದು. ಅದು ಸಮಯ, ವರ್ಷಗಳು ಕಳೆದಂತೆ ಬದಲಾಗು ವುದಿಲ್ಲ. ಸಂಗಾತಿ ಕಷ್ಟದಲ್ಲಿದ್ದಾರೆ ಎಂದಾದರೆ ಪ್ರೀತಿಯಿಂದ ಬಂದು ಅವರ ಕೈಹಿಡಿದು ಸಂತೈಸಿ, ಸಹಾಯ ಮಾಡಬೇಕು ಮತ್ತು ಮಾರ್ಗದರ್ಶಿಯಾಗಿರಬೇಕೇ ಹೊರತು ಕೈ ಬಿಡುವುದಲ್ಲ. ಕಷ್ಟ- ಸುಖ ಏನೇ ಬಂದರೂ ಜತೆಯಾಗಿ ಎದುರಿಸುವ ಸುಮಧುರ ಬಾಂಧವ್ಯವೇ ನಿಜವಾದ ಪ್ರೀತಿ. 

ಇಲ್ಲಿ ನೋಟ, ನಗು, ಮೌನ, ಕಂಗಳು, ಸ್ಪರ್ಶ ಇವು ಮನದಾಳದ ಇಂಗಿತ, ಭಾವನೆ, ಇಚ್ಛೆ ಎಲ್ಲವನ್ನೂ ರವಾನಿಸುವ, ಅರ್ಥೈಸುವ ಸಂವಹನ ಸಂಪರ್ಕ ಸೇತುವೆಗಳಾಗಿರುತ್ತವೆ. 

ದುರದೃಷ್ಟವಶಾತ್‌ ಈಗಿನ ಕಾಲದಲ್ಲಿ “ಪ್ರೀತಿ’ ಎನ್ನುವುದು ಯಾವುದೇ ಕಿಮ್ಮತ್ತಿಲ್ಲದ ಒಂದು ಸಾಮಾನ್ಯ ಪದವಾಗಿ ಬಿಟ್ಟಿದೆ. ಯುವಜನರಿಗೆ ಪ್ರೀತಿಗೂ ಕಾಮಕ್ಕೂ ಇರುವ ವ್ಯತ್ಯಾಸ ಗೊತ್ತಿಲ್ಲ. ಹಾಗಾಗಿ ಇಂದು ಪ್ರೀತಿ-ಪ್ರೇಮ ಎಂಬ ವಿಷಯದಲ್ಲಿ ವ್ಯಕ್ತಿಯ ಬಾಹ್ಯ ಸೌಂದರ್ಯಕ್ಕೆ ಆದ್ಯತೆ ನೀಡಲಾಗುತ್ತದೆ. ತತ್‌ಪರಿಣಾಮ ವಾಗಿ ಇಂದು ಮೊದಲ ನೋಟದ ಪ್ರೇಮ (ಲವ್‌ ಎಟ್‌ ಫ‌ಸ್ಟ್‌ ಸೈಟ್‌) ಕಥೆಗಳೇ ಹೆಚ್ಚಾಗಿ ಕಾಣಸಿಗುತ್ತವೆ. ಇಲ್ಲಿ ಆಕರ್ಷಣೆ 
ಅಥವಾ ಸೆಳೆತವಷ್ಟೇ ಇರುತ್ತದೆ. ವ್ಯಕ್ತಿತ್ವ, ಸ್ವಭಾವ, ಹೊಂದಾಣಿಕೆ ಗುಣ, ಮನೋಭಾವ ಇತ್ಯಾದಿಗಳಿಗೆ ಮಹತ್ವ ನೀಡುವುದಿಲ್ಲ. ಬದಲಾಗಿ ಪ್ರೀತಿ ಎಂದರೆ ವಿಶ್‌, ಚಾಟಿಂಗ್‌, ಡೇಟಿಂಗ್‌ ಶಾಪಿಂಗ್‌, ಕ್ಯಾಂಡಲ್‌ಲೈಟ್‌ ಡಿನ್ನರ್‌, ಸೆಕ್ಸ್‌, ಲಿವಿಂಗ್‌ ಟುಗೆದರ್‌ ಇಷ್ಟಕ್ಕೆ ಸೀಮಿತವಾಗಿ ಬಿಟ್ಟಿದೆ. 

Advertisement

ನಿಜವಾದ ಪ್ರೀತಿಯ ಬಗ್ಗೆ ತಿಳಿಯದ ಯುವ ಜನಾಂಗ ಇಂದು ಸಿನೆಮಾಗಳಲ್ಲಿ ಕಾಣುವ ಮೋಜು ಮಸ್ತಿಗಳ ಮೋಹದ ಆಕರ್ಷಣೆ ಯನ್ನೇ ಪ್ರೀತಿ ಎಂದು ತಿಳಿದು ವಿದ್ಯಾಭ್ಯಾಸ, ವೃತ್ತಿ, ಕುಟುಂಬದ ವರನ್ನೂ ಬಿಟ್ಟು ಅವುಗಳಲ್ಲೇ ಕಾಲ ಕಳೆಯುತ್ತಿದೆ. ಇದರಿಂದ ನೈಜ ಪ್ರೀತಿ ಮರೆಯಾಗುತ್ತಿದೆ. 

ಓದಿದ ಅನಂತರ ಬಹಳ ದಿನಗಳ ಕಾಲ ಮನಸ್ಸಿನಲ್ಲಿ ಉಳಿದು ಬಿಡುವ ಪ್ರೇಮ ಕಥೆಗಳಿವೆ. ಕೆಲವೊಂದು ನಮ್ಮ ಜೀವನಕ್ಕೆ ಸ್ಫೂರ್ತಿದಾಯಕವಾಗಬಲ್ಲವು. ಆದರೆ ನಮ್ಮ ಸಮಾಜದಲ್ಲೇ ನಡೆದ ನೈಜ ಪ್ರೇಮ ಕಥೆಗಳು ಕೆಲವು ಹೃದಯದ ಅಂತರಾಳದ ಕದ ತಟ್ಟುವುದು. ಇಂತಹ ವಿಭಿನ್ನ ಮತ್ತು ಮನಸ್ಪರ್ಶಿ ಘಟನೆಗಳಿಗೆ ಕಾರಣರಾದ ಪ್ರೇಮಿಗಳಿಂದಾಗಿಯೇ ಇಂದು ನಿಜವಾದ ಪ್ರೀತಿ ಉಳಿದುಕೊಂಡಿದೆ.

20 ವರ್ಷಗಳ ಬಳಿಕ ಸುಖಾಂತ್ಯ ಕಂಡ ಪ್ರೇಮಕಥೆ
ರಾಮದಾಸ್‌ ಮತ್ತು ರಜನಿ ಕೇರಳದ ತಿರುವನಂತಪುರದ ಜಿಲ್ಲಾಧಿಕಾರಿ ಕಚೇರಿಯ ಅಕೌಂಟ್ಸ್‌ ವಿಭಾಗದಲ್ಲಿ ಸಹಾಯಕ ಅಧಿಕಾರಿಗಳು. 1996ರಲ್ಲಿ ಉದ್ಯೋಗಕ್ಕೆ ಸೇರಿದ ವೇಳೆ ಪರಸ್ಪರ ಪ್ರೀತಿಸಲಾರಂಭಸಿದರು. ಅವರ ಪ್ರೇಮಕ್ಕೆ ಸಹೋದ್ಯೋಗಿಗಳು, ಸ್ನೇಹಿತರು ಬೆಂಬಲಿಸಿದರೂ ಇಬ್ಬರ ಮನೆಯವರೂ ಸಹಮತ ವ್ಯಕ್ತಪಡಿಸದಿದ್ದರಿಂದ ಮದುವೆಯಾಗಲಾರದೆ ಹಾಗೇ ಇದ್ದರು. ಸುಮಾರು 20 ವರ್ಷಗಳು ಕಳೆದರೂ ಅವರ ಪ್ರೀತಿ ಅಖಂಡವಾಗಿ ಉಳಿಯಿತು. ಈ ಪ್ರೇಮ ಕಥೆ ಬಗ್ಗೆ ತಿಳಿದ ಕೇರಳದ ವಿಧಾನ ಸಭೆ ಸ್ಪೀಕರ್‌ ಪಿ. ರಾಮಕೃಷ್ಣನ್‌ ಪ್ರೇಮಿಗಳ ಹೆತ್ತವರು ಮತ್ತು ಸಂಬಂಧಿಕರೊಂದಿಗೆ ಮಾತುಕತೆ ನಡೆಸಿ ಮದುವೆ ನೆರವೇರಿಸಿದರು. ಕೊನೆಗೂ ಸ್ಪೀಕರ್‌ ಪೌರೋಹಿತ್ಯದಿಂದಾಗಿ ಈ ಜೋಡಿ ಜತೆಯಾಗಿ ಜೀವನ ಸಾಗಿಸುವಂತಾಯಿತು. ಕುಟುಂಬದವ
ರೆಲ್ಲರ ಒಪ್ಪಿಗೆ ಪಡೆದು, ಅವರ ಸಮ್ಮುಖದಲ್ಲಿ ಹಸೆಮಣೆಯೇರುವ ಅವರ ಕನಸು ಈಡೇರಿತು. ಇಲ್ಲಿ ಗೆದ್ದದ್ದು ನೈಜ ಪ್ರೀತಿ.

ಸಪ್ತ ಸಾಗರ ದಾಟಿ ಬಂದ ಪ್ರೀತಿ
41 ವರ್ಷದ ಅಮೆರಿಕದ ಮಹಿಳೆ ಅಡ್ರಿಯನಾ ಪರೇಲ್‌ ಬೆಳೆದದ್ದು ಪಾಶ್ಚಿಮಾತ್ಯ ಜೀವನ ಶೈಲಿಯಲ್ಲಿ. ಪ್ರೀತಿಸಿದ್ದು 
ತನ್ನಿಂದ ವಯಸ್ಸಿನಲ್ಲಿ ಚಿಕ್ಕವರಾದ 25 ವರ್ಷದ ಭಾರತದ ಗ್ರಾಮೀಣ ಸಂಸ್ಕೃತಿಯಲ್ಲಿ ಬೆಳೆದ ಮುಕೇಶ್‌ ಕುಮಾರ್‌ ಅವರನ್ನು. ಫೇಸ್‌ಬುಕ್‌ನಲ್ಲಿ ಪರಿಚಿತರಾದ ಅವರಿಬ್ಬರೂ ಆತ್ಮೀಯ ಸ್ನೇಹಿತರಾದರು. ಕಾಲ ಕಳೆದಂತೆ ಒಬ್ಬರನ್ನೊಬ್ಬರು ಪ್ರೀತಿಸ ಲಾರಂಭಿಸಿದರು. ಆತನ ಪ್ರೀತಿಯನ್ನು ಪಡೆಯಲು, ವಿವಾಹವಾಗಿ ಆತನೊಂದಿಗೆ ಜೀವನ ಸಾಗಿಸುವ ಸಲುವಾಗಿ ಅಡ್ರಿಯನಾ ತನ್ನ ಬಂಧುಗಳೆಲ್ಲರನ್ನೂ ತೊರೆದು ಉತ್ತರ ಭಾರತಕ್ಕೆ ಬಂದರು. ಬಳಿಕ ಮುಕೇಶ್‌ ಕುಟುಂಬ ದವರ ಒಪ್ಪಿಗೆ ಪಡೆದು ಆತನನ್ನು ವಿವಾಹವಾಗಿ ಗ್ರಾಮೀಣ ಜೀವನ ಪ್ರಾರಂಭಿಸಿದಳು. ಮೊದ ಮೊದಲು ಗ್ರಾಮೀಣ ಸಂಸ್ಕೃತಿ, ಸಂಪ್ರದಾ ಯಗಳಿಗೆ ಹೊಂದಿ ಕೊಳ್ಳಲು ಕಷ್ಟಪಟ್ಟರೂ ಬಳಿಕ ಒಗ್ಗಿಕೊಂಡು ಪ್ರೀತಿಯ ಮಹತ್ವ ಸಾರಿದ್ದಾಳೆ. ಇದೀಗ ಅಪ್ಪಟ ಭಾರತೀಯ ನಾರಿ ಯಂತೆ ಜೀವನ ಸಾಗಿಸುತ್ತಾ ಗಂಡನೊಂದಿಗೆ ಎತ್ತಿನ ಗಾಡಿಯಲ್ಲಿ ತೆರಳಿ ಕೃಷಿ ಕಾರ್ಯಗಳಲ್ಲೂ ಪಾಲ್ಗೊಳ್ಳುತ್ತಿದ್ದಾಳೆ.

ಇಂದು ಮದುವೆಯಾಗಿ ನಾಳೆ ವಿಚ್ಛೇದನ ಕೊಡುವ ಸಂಸ್ಕೃತಿ ಯಿರುವ ಎಲ್ಲಿಯ ಅಮೆರಿಕದ ಅಡ್ರಿಯನಾ ಎಲ್ಲಿಯ ಹಳ್ಳಿಯ ಯುವಕ ಮುಕೇಶ್‌. ಸಪ್ತ ಸಾಗರ ದಾಟಿ ಬಂದ ಇವರ ಪ್ರೀತಿಗೆ ವಯಸ್ಸು, ದೇಶ, ಸಂಸ್ಕೃತಿ, ಜೀವನ ಕ್ರಮ, ಅಂತಸ್ತು ಅಡ್ಡಿ ಬರಲಿಲ್ಲ. ಪ್ರೀತಿಗೆ ಅರಿತು ನಡೆಯುವ ಮನಸ್ಸು ಮತ್ತು ಹೊಂದಾ ಣಿಕೆಯೇ ಮುಖ್ಯ ಎನ್ನುವುದಕ್ಕೆ ಈ ಪ್ರೇಮಕಥೆಯೇ ಸಾಕ್ಷಿ. 

ಸಾವು ಗೆದ್ದ ಪ್ರೇಮ
ದೂರದ ಸಂಬಂಧಿಕರಾಗಿದ್ದು, ಕುಟುಂಬಗಳಲ್ಲಿ ನಡೆಯುವ ಸಮಾರಂಭಗಳಲ್ಲಿ ಪರಸ್ಪರ ಭೇಟಿಯಾಗುತ್ತಿದ್ದ ಪ್ರಜ್ವಲ್‌ ಮತ್ತು ಛಾಯಾ ತುಂಬಾ ಆತ್ಮೀಯರಾಗಿದ್ದರು. ಈ ಆತ್ಮೀಯತೆ ಪ್ರೇಮಕ್ಕೆ ತಿರುಗಿತು. ಬೆಂಗಳೂರು ನಿವಾಸಿಗಳಾದ ಇಬ್ಬರು ತಮ್ಮ ಹೆತ್ತವರಿಗೆ ವಿಷಯ ತಿಳಿಸಿದರು. ಎರಡೂ ಕುಟುಂಬಗಳ ನಡುವೆ ಮಾತುಕತೆ ನಡೆದು ನಿಶ್ಚಿತಾರ್ಥ ನೆರವೇರಿತು. ಅವರು ಪ್ರೀತಿಸಿ ಒಂದಾದ ಖುಷಿ ಮತ್ತು ಹೊಸ ಬಾಳಿನ ಕನಸುಗಳ ಸಂಭ್ರಮದಲ್ಲಿ ತೇಲಾಡು ತ್ತಿದ್ದರು. ನಿಶ್ಚಿತಾರ್ಥ ಕಳೆದು ಕೆಲವೇ ದಿನಗಳಲ್ಲಿ ಇದ್ದಕ್ಕಿದ್ದಂತೆ ಅಸೌಖ್ಯ ದಿಂದ ಆಸ್ಪತ್ರೆ ಸೇರಿದರು ಛಾಯಾ. ಬ್ರೈನ್‌ ಟ್ಯೂಮರ್‌ ಆಕ್ರಮಿಸಿ 3ನೇ ಹಂತ ತಲುಪಿತ್ತು. ಎರಡೂ ಕುಟುಂಬಗಳು ಆಘಾತ ದಿಂದ ತತ್ತರಿಸಿದವು. ಆದರೆ ಪ್ರಜ್ವಲ್‌ ವಿಚಲಿತರಾಗದೇ ಭಾವೀ ಪತ್ನಿಯನ್ನು ಪ್ರೀತಿಯಿಂದ ಆರೈಕೆ ಮಾಡಿದರು. ಆಕೆಯ ಕಷ್ಟ ನೋವುಗಳಿಗೆ ಸ್ಪಂದಿಸಿ ಧೈರ್ಯ ತುಂಬಿ ಚೇತರಿಸುವಂತೆ ಮಾಡಿದರು. 

ಛಾಯಾಗೆ ಬ್ರೈನ್‌ ಟ್ಯೂಮರ್‌ ಇರುವ ವಿಷಯ ತಿಳಿದ ಕೂಡಲೇ ಪ್ರಜ್ವಲ್‌ ಮನೆಯವರು ಈ ವಿವಾಹ ಬೇಡ ಎಂದು ತೀರ್ಮಾನಿಸಿದರು. ಆದರೆ ಆಕೆಯ ಕಾಯಿಲೆ ಗುಣವಾಗುತ್ತದೆ. ಸರಿಯಾಗಿ ಔಷಧ ಮಾಡಬೇಕು ಅಷ್ಟೇ ಎಂದು ಹೆತ್ತವರ ಮನವೊಲಿಸಿದ ಪ್ರಜ್ವಲ್‌, ತಾನು ಆಕೆಯನ್ನೇ ವಿವಾಹವಾಗುವು ದಾಗಿ ತಿಳಿಸಿದರು. ಬಳಿಕ ಛಾಯಾ ಅವರಿಗೆ ಆತ್ಮಸ್ಥೈರ್ಯ ತುಂಬುವ ಕಾರ್ಯದಲ್ಲಿ ನಿರತರಾದ ಪ್ರಜ್ವಲ್‌ ಪ್ರತಿ ಹಂತದಲ್ಲೂ ಆಕೆಯೊಂದಿಗಿದ್ದು, ಧನಾತ್ಮಕ ಭಾವನೆ ಮೂಡಿಸಿದರು. ಕ್ಯಾನ್ಸ್‌ರ್‌ನಿಂದ ಗುಣಮುಖರಾದ ಹಲವರ ಮಾಹಿತಿ ಕಲೆ ಹಾಕಿ ಛಾಯಾಗೆ ತಿಳಿಸಿದ ಪ್ರಜ್ವಲ್‌ ಆಕೆಯಲ್ಲಿ ಆತ್ಮಸ್ಥೆರ್ಯ ಹೆಚ್ಚಿಸಿ ಬೇಗನೆ ಚಿಕಿತ್ಸೆಗೆ ಸ್ಪಂದಿಸುವಂತೆ ಮಾಡಿದರು. ಇದೀಗ ಬೆಂಗಳೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆಯ ಅನಂತರ ಚೇತರಿಸಿಕೊಳ್ಳುತ್ತಿದ್ದಾರೆ. ಇನ್ನು ಕೆಲವೇ ಸಮಯದಲ್ಲಿ ಸಂಪೂರ್ಣ ಗುಣಮುಖರಾಗಿ ಛಾಯಾ-ಪ್ರಜ್ವಲ್‌ ಕೈ ಹಿಡಿದು ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಪ್ರೀತಿಯಿಂದ ಕಾಳಜಿವಹಿಸಿ ಆತ್ಮಸ್ಥೈರ್ಯ ತುಂಬುವ ಮೂಲಕ ಸಾವನ್ನ ಕೂಡ ಗೆಲ್ಲಬಹುದೆಂದು ಈ ಘಟನೆಯಿಂದ ತಿಳಿಯುತ್ತದೆ. 

ಅವರ ಪ್ರೀತಿಗೆ ಅಂಗವೈಕಲ್ಯ ಅಡ್ಡಿಯಾಗಲಿಲ್ಲ
ರಮೇಶ ಹುಟ್ಟು ಅಂಗವಿಕಲ. ಚಿಕ್ಕಂದಿನಲ್ಲೇ ತಂದೆಯನ್ನು ಕಳೆದುಕೊಂಡಿದ್ದರು. ತಾಯಿಯ ಆಸರೆಯಲ್ಲಿ ಬೆಳೆದರೂ ಕಾಲಿನ ವೈಕಲ್ಯದಿಂದಾಗಿ ದೂರ ನಡೆಯಲಾಗದೆ ಕೇವಲ ನಾಲ್ಕನೇ ತರಗತಿ ಮಾತ್ರ ಓದಿದ್ದ. ಆದರೆ ದುಡಿದು ತಿನ್ನಬೇಕು, ಏನಾದರೂ ಕೆಲಸ ಮಾಡಬೇಕು ಎನ್ನುವ ಹಂಬಲ ಆತನಲ್ಲಿ ಚಿಕ್ಕಂದಿನಲ್ಲೇ ಇತ್ತು. ಆತನ ತಾಯಿ ಮನೆಯಲ್ಲೇ ಹೊಲಿಗೆ ವೃತ್ತಿ ಮಾಡಿ ಅದರಿಂದ ಬಂದ ಹಣದಲ್ಲಿ ಜೀವನ ಸಾಗಿಸುತ್ತಿದ್ದಳು. ರಮೇಶ ತನ್ನ ಸರಿ ಇರುವ ಒಂದು ಕಾಲಿನ ಸಹಾಯದಿಂದಲೇ ಕಷ್ಟಪಟ್ಟು ಹೊಲಿಗೆ ಕಲಿತು. ಉತ್ತಮ ದರ್ಜಿಯಾಗಿ ಹೆಸರು ಪಡೆದ. ವೈಕಲ್ಯ ಮೆಟ್ಟಿನಿಂತು ಶ್ರಮವಹಿಸಿ ದುಡಿಯುವ ಆತನ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾದ ವರದಿ ನೋಡಿದ ಅದೇ ಊರಿನ ರಶ್ಮಿತಾ ಆತನನ್ನು ಭೇಟಿಯಾಗಿ ಕೆಲಸ ಕಾರ್ಯಗಳನ್ನು ನೋಡಿ, ಪರಿಚಯ ಮಾಡಿಕೊಂಡು ಸ್ನೇಹಿತರಾದರು. ಆಕೆ ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದು, ಅವರ ನಡುವೆ ಆಗಾಗ್ಗೆ ಭೇಟಿ ಮಾಡುವುದು, ಹರಟೆ ಹೊಡೆಯುವುದು ನಡೆಯುತ್ತಿತ್ತು.

ಇದುವೇ ಕ್ರಮೇಣ ಪ್ರೀತಿಗೆ ತಿರುಗಿತು. ಮೊದಲಿಗೆ ರಶ್ಮಿತಾ ಮನೆಯಲ್ಲಿ ಇವರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದರೂ ರಮೇಶನ ವ್ಯಕ್ತಿತ್ವ, ಕೆಲಸದ ಬಗೆಗಿನ ಕಾಳಜಿ, ಸ್ವತಂತ್ರವಾಗಿ ದುಡಿದು ಬಾಳಬೇಕು ಎಂಬ ಹಂಬಲ, ಊರಿನವರಿಗೆ ಆತನ ಕುರಿತಾಗಿದ್ದ ಗೌರವ, ರಶ್ಮಿತಾ ಬಗ್ಗೆ ಆತನಿಗಿರುವ ಪ್ರೀತಿಯನ್ನು ಕಂಡು ಅವರಿಬ್ಬರ ವಿವಾಹ ನೆರವೇರಿಸಿದರು. ಇದು ನೈಜ ಪ್ರೀತಿಗೆ ದೊರೆತ ಜಯ. 

ಪರಸ್ಪರ ವಿಶ್ವಾಸ ಅಗತ್ಯ: ಸ್ನೇಹಿತರಾಗಿ, ಭಾವನೆಗಳು, ಮನಸ್ಸು ಹೊಂದಾಣಿಕೆಯಾಗಿ ಎರಡು ದೇಹ, ಒಂದೇ ಮನಸ್ಸು ಎಂಬ ಬಾಂಧವ್ಯದಿಂದ ಗೌರವ, ಮಾರ್ಗದರ್ಶನ, ಸಹಕಾರ, ಮೆಚ್ಚುಗೆ, ಒಲವು, ಪ್ರತಿ ಹಂತದಲ್ಲೂ ಒಬ್ಬರನೊಬ್ಬರು ಕೈಹಿಡಿದು ಬಾಳ ಬಂಡಿಯಲ್ಲಿ ಸಾಗುವುದೇ ನಿಜವಾದ ಪ್ರೇಮ. ಇಂತಹ ಪ್ರೇಮ ಉಳಿಯಲು ಪರಸ್ಪರ ವಿಶ್ವಾಸ, ನಂಬಿಕೆ, ಕಷ್ಟ-ನೋವುಗಳನ್ನು ಎದುರಿಸುವ ಧೈರ್ಯ ಅತೀ ಅಗತ್ಯ. 

ಪ್ರೀತಿ ಎಂದ ಮೇಲೆ ಹಲವಾರು ಸವಾಲುಗಳನ್ನು ಎದುರಿಸಬೇಕಾದ್ದು ಅನಿವಾರ್ಯ. ಅದಕ್ಕೆ ಕೌಶಲ, ತಾಳ್ಮೆ ಮುಖ್ಯ. ಕಪಟವಿಲ್ಲದ ನಿರ್ಮಲ ಮನಸ್ಸಿನ ಪ್ರೇಮ ಶಾಶ್ವತ. ಪ್ರೀತಿ-ಪ್ರೇಮವು ಶಾಂತವಾಗಿ ಹರಿಯುವ ನದಿ ಇದ್ದಂತೆ. ಅಲ್ಲಿ ಬಿರುಗಾಳಿ ಬೀಸದಂತೆ, ತೆರೆಗಳು ಏಳದಂತೆ ಎಚ್ಚರಿಕೆ ವಹಿಸುವುದು ಪ್ರೇಮಿಗಳ ಜವಾಬ್ದಾರಿ ಕೂಡ ಹೌದು. ಹಾಗೇ ಯುವ ಪ್ರೇಮಿಗಳೆಲ್ಲ ನೈಜ ಪ್ರೀತಿಯ ರಾಯಭಾರಿಗಳಾಗಲಿ.

– ಗಣೇಶ ಕುಳಮರ್ವ

Advertisement

Udayavani is now on Telegram. Click here to join our channel and stay updated with the latest news.

Next