Advertisement

ಮಂಗಳೂರು ತ್ಯಾಜ್ಯ ವಿಲೇವಾರಿಗೆ ನಾಲ್ಕು ವಲಯ ರಚನೆ: ಡಿಸಿ

10:11 PM Oct 05, 2020 | mahesh |

ಮಹಾನಗರ: ಪಚ್ಚನಾಡಿಯಿಂದಾಗಿ ಮಂದಾರದಲ್ಲಿ ಹರಡಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಈಗಾಗಲೇ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಈ ಮಧ್ಯೆ ಮಂಗಳೂರಿನ 60 ವಾರ್ಡ್‌ಗಳ ತ್ಯಾಜ್ಯವನ್ನು ಪಚ್ಚನಾಡಿ ಒಂದೇ ಕಡೆ ಹಾಕಿ ಸಮಸ್ಯೆ ಸೃಷ್ಟಿಸುವ ಬದಲು ನಾಲ್ಕು ವಲಯಗಳನ್ನಾಗಿ ಮಾಡಿ ಸೂಕ್ತ ಸ್ಥಳಗಳಲ್ಲಿ ವೈಜ್ಞಾನಿಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುವ ಬಗ್ಗೆ ಚಿಂತನೆಯಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ತಿಳಿಸಿದರು.

Advertisement

ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ಸೋಮವಾರ ದ.ಕ. ಜಿಲ್ಲಾ ಪಂಚಾಯತ್‌ನ ತ್ತೈಮಾಸಿಕ ಕೆಡಿಪಿ ಸಭೆ ನಡೆಯಿತು. ಈ ವೇಳೆ ಡಿಸಿ ಮಾತನಾಡಿ, ಈ ಬಗ್ಗೆ ಸ್ಥಳ ಗುರುತಿಸಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಒಂದು ವಾರದೊಳಗೆ ಈ ಕುರಿತು ಪ್ರತ್ಯೇಕ ಸಭೆ ನಡೆಸಿ ಚರ್ಚಿಸಲಾಗುವುದು ಎಂದರು.

ಶಾಸಕ ಡಾ| ಭರತ್‌ ಶೆಟ್ಟಿ ವೈ. ಮಾತನಾಡಿ, ಪಚ್ಚನಾಡಿಯಿಂದ ಹರಿದ ತ್ಯಾಜ್ಯದ ವಿಲೇವಾರಿ ಕಾರ್ಯ ನಡೆದಿಲ್ಲ. ಇದರಿಂದ ತೊಂದರೆಯಾಗುತ್ತಿದೆ. ನಗರ ವ್ಯಾಪ್ತಿಯ ಎಲ್ಲ ಕಡೆಯ ಟನ್‌ಗಟ್ಟಲೆ ಕಸ ಅಲ್ಲಿಗೆ ಮತ್ತೆ ಬರುತ್ತಿರುವುದರಿಂದ ಸಮಸ್ಯೆಯಾಗುತ್ತಿದೆ ಎಂದರು.

ಅತ್ತಾವರ ಬಾಬುಗುಡ್ಡೆ ಕುದ್ಮುಲ್‌ ರಂಗರಾವ್‌ ಸ್ಮಾರಕ ಭವನದ ಕಾಮಗಾರಿಯನ್ನು ಡಿಸೆಂಬರ್‌ ಒಳಗೆ, ತೊಕ್ಕೊಟ್ಟು ಸಮೀಪ ಅಬ್ಬಕ್ಕ ಭವನ ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಸಚಿವ ಕೋಟ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಮಾತನಾಡಿ, ತಣ್ಣೀರುಬಾವಿ ಬೆಂಗ್ರೆಯಿಂದ ತೋಟ ಬೆಂಗ್ರೆಯವರೆಗೆ ಈಗಾಗಲೇ ಮನೆಕಟ್ಟಿ ವಾಸ್ತವ್ಯವಿರುವ ಫಲಾನುಭವಿಗಳಿಗೆ ಹಕ್ಕುಪತ್ರದಲ್ಲಿ ಎದುರಾಗಿರುವ ಸಮಸ್ಯೆಗಳ ನಿವಾರಣೆಗಾಗಿ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಸಭೆ ನಡೆಸಿ ಕ್ರಮಕೈಗೊಳ್ಳಲಾಗುವುದು. ಪಾಲಿಕೆ ಆಯುಕ್ತರು ಈ ಬಗ್ಗೆ ವಿಶೇಷ ಆದ್ಯತೆ ನೀಡಲಿದ್ದಾರೆ ಎಂದರು.

ಸರಕಾರಿ ಕಾಮಗಾರಿ ವೇಳೆ ದಾಳಿ ಏಕೆ?
ಶಾಸಕ ಖಾದರ್‌ ಮಾತನಾಡಿ, ರಾಜ್ಯದಲ್ಲಿಯೇ ಮಹತ್ವದ ಯೋಜನೆಯಾದ ಹರೇಕಳದಲ್ಲಿ ಉಪ್ಪು ನೀರು ತಡೆ ಅಣೆಕಟ್ಟು ಕಾಮಗಾರಿ ವೇಳೆ ಏಕಾಏಕಿ ಪೊಲೀಸ್‌ ಇಲಾಖೆ, ಗಣಿ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದಾಳಿ ನಡೆಸುತ್ತಿರುವ ಸಂಗತಿ ಬೆಳಕಿಗೆ ಬಂದಿದೆ. ಸರಕಾರದ ವತಿಯಿಂದ ಕಾಮಗಾರಿ ಆಗುವಾಗ ಈ ರೀತಿ ಸಮಸ್ಯೆ ಯಾಕಾಗುತ್ತದೆ ಎಂದು ಪ್ರಶ್ನಿಸಿದರು. ಶಾಸಕ ಡಾ| ಭರತ್‌ ಶೆಟ್ಟಿ ವೈ. ಮಾತನಾಡಿ, ಸರಕಾರದ ವತಿಯಿಂದ ದೊಡ್ಡ ಕಾಮಗಾರಿ ನಡೆಯುವಾಗ ಕೆಲವು ಇಲಾಖೆಗಳು ಈ ರೀತಿ ಮಾಡುತ್ತಿವೆ ಎಂದರು. ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ಕಾಮಗಾರಿ ವೇಳೆ ಕೈಗೊಳ್ಳಬೇಕಾದ ನಿಯಮಗಳ ಬಗ್ಗೆ ಸಂಬಂಧಪಟ್ಟ ಇಲಾಖೆಯವರಿಗೆ ಸಭೆ ನಡೆಸಿ ಸೂಕ್ತ ಮಾರ್ಗದರ್ಶನ ನೀಡಲಾಗುವುದು ಎಂದರು.

Advertisement

ಮಹಾಕಾಳಿಪಡ್ಪು ರೈಲ್ವೇ ಕೆಳಸೇತುವೆ; ವಿಶೇಷ ಸಭೆಗೆ ನಿರ್ಧಾರ
ರಾ.ಹೆ. 66ರಿಂದ ಮಹಾಕಾಳಿಪಡು³ ರೈಲ್ವೇ ಕೆಳ ಸೇತುವೆ ಮುಖಾಂತರ ಮೋರ್ಗನ್ಸ್‌ ಗೇಟ್‌ ಜಂಕ್ಷನ್‌ವರೆಗೆ ರಸ್ತೆ ವಿಸ್ತರಣೆ ಕಾಮಗಾರಿ ವಿಚಾರವು ಸಭೆಯಲ್ಲಿ ಚರ್ಚೆಯಾಯಿತು. ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಮಾತನಾಡಿ, ಮುಂದಿನ ಪಾಲಿಕೆ ಪರಿಷತ್‌ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ ಅನುಮೋದನೆ ಪಡೆಯಲಾಗುವುದು ಎಂದರು. ಶಾಸಕ ಖಾದರ್‌ ಮಾತನಾಡಿ, ಹೊರಭಾಗದಿಂದ ಮಂಗಳೂರಿಗೆ ಆಗಮಿಸುವ ಪ್ರಯಾಣಿಕರಿಗೆ ಅತ್ಯಂತ ಉಪಯೋಗವಾಗುವ ಯೋಜನೆಯಿದು. ಹೀಗಾಗಿ ಇದರ ಅನುಷ್ಠಾನದಲ್ಲಿ ನಿರಾಸಕ್ತಿ ಮಾಡಕೂಡದು. ತತ್‌ಕ್ಷಣವೇ ಬೆಂಗಳೂರಿನಲ್ಲಿ ಈ ವಿಚಾರದಲ್ಲಿ ಉನ್ನತ ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಬೇಕು ಎಂದು ಸಚಿವ ಕೋಟ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು ಅವರನ್ನು ಕೋರಿದಾಗ ಸಹಮತ ವ್ಯಕ್ತವಾಯಿತು. ಜಿಲ್ಲಾಧಿಕಾರಿ ಮಾತನಾಡಿ, ಕಾಫಿ ಡೇ ಸಂಸ್ಥೆಗೆ ಸೇರಿದ ಭೂಮಿ ಇಲ್ಲಿರುವ ಕಾರಣದಿಂದ ಕೊಂಚ ತಡವಾಗಿದೆ ಎಂದರು. ಯೋಜನೆಗೆ ವೇಗ ನೀಡುವಂತೆ ಸಚಿವ ಕೋಟ ಸೂಚಿಸಿದರು.

ಬಡವರಿಗೆ ಅನ್ಯಾಯ; ಸಹಾಯಕ ಆಯುಕ್ತರಿಗೆ ತರಾಟೆ
ಶಾಸಕ ಯು.ಟಿ. ಖಾದರ್‌ ಮಾತನಾಡಿ, ಕಿನ್ಯ ಗ್ರಾ.ಪಂ ವ್ಯಾಪ್ತಿಯಲ್ಲಿ ಬಡ ಮಹಿಳೆಯೊಬ್ಬರಿಗೆ ಕುಮ್ಕಿ ಜಾಗದಲ್ಲಿ ಮನೆ ನಿರ್ಮಿಸಲು ತಹಶೀಲ್ದಾರ್‌ ಹಕ್ಕುಪತ್ರ ನೀಡಿದ್ದರು. ಆದರೆ ಇದರ ವಿರುದ್ಧ ಸ್ಥಳೀಯ ಮೇಲ್ವರ್ಗದವರ ದೂರಿನ ಮೇರೆಗೆ ಸ್ಥಳ ತನಿಖೆಯನ್ನು ಮಾಡದೆ, ತಹಶೀಲ್ದಾರ್‌ ಸಹಿತ ಯಾರಿಂದಲೂ ಅಭಿಪ್ರಾಯವನ್ನೂ ಕೇಳದೆ ಮಂಗಳೂರು ಸಹಾಯಕ ಆಯುಕ್ತರು ಏಕಾಏಕಿ ಮನೆಗೆ ತಡೆ ನೀಡಿದ್ದಾರೆ. ಈ ಮೂಲಕ ಬಡವರ ಮೇಲೆ ಅಧಿಕಾರಿಯೊಬ್ಬರು ದಬ್ಟಾಳಿಕೆ ಮಾಡಿದ್ದಾರೆ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ| ರಾಜೇಂದ್ರ, ಯಾವುದೇ ರೀತಿಯ ದೂರುಗಳ ಸಂದರ್ಭ ಕೆಳಹಂತದ ನ್ಯಾಯಾಲಯದ ಆದೇಶವನ್ನು ಪಾಲನೆ ಮಾಡಬೇಕು. ಮುಖ್ಯವಾಗಿ ಸ್ಥಳ ಪರಿಶೀಲನೆ ನಡೆಸಿ ನ್ಯಾಯಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಸಹಾಯಕ ಆಯುಕ್ತರಿಗೆ ಸೂಚಿಸಿದರು. ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, “ಬಡವರಿಗೆ ಸಮಸ್ಯೆ ಆಗದಂತೆ ಅಧಿಕಾರಿಗಳು ನೋಡಿಕೊಳ್ಳಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next