Advertisement

ಉಳಿತಾಯದ ನಾಲ್ಕು ಗುಟ್ಟುಗಳು

06:00 AM Nov 19, 2018 | |

ಬ್ಯಾಂಕಿನಲ್ಲಿ ಫಿಕ್ಸೆಡ್‌ ಡಿಪಾಸಿಟ್‌ಗೆ ಮಾತ್ರವಲ್ಲ. ಸೇವಿಂಗ್ಸ್‌ ಡಿಪಾಸಿಟ್‌ನ ಹಣದಿಂದಲೂ ಬಡ್ಡಿ ಪಡೆಯುವ ಸೌಲಭ್ಯವಿದೆ. ಹಾಗೆಯೇ, ಫಿಕ್ಸೆಡ್‌ ಡಿಪಾಸಿಟ್‌ನ ಹಣಕ್ಕೆ ಸಿಗುವ ಬಡ್ಡಿಯನ್ನು ಅಸಲಿನೊಂದಿಗೆ ಮರು ಹೂಡಿಕೆ ಮಾಡಿದರೆ ಮತ್ತಷ್ಟು ಹೆಚ್ಚಿನ ಬಡ್ಡಿ ಪಡೆಯುವ ಅವಕಾಶವೂ ಇದೆ….

Advertisement

ಇಲ್ಲಿ ಬ್ಯಾಂಕ್‌ ಡಿಪಾಜಿಟ್‌ ಅಂದಾಕ್ಷಣ ನಿಮಗೆ ಎಫ್.ಡಿ. ನೆನಪಾಗುತ್ತದೆ ಅಲ್ಲವೇ? ಎಫ್.ಡಿ. ಅಂದರೆ ಫಿಕ್ಸೆಡ್‌ ಡಿಪಾಜಿಟ್‌  ಮಾತ್ರವಲ್ಲ, ನಮ್ಮ ಉಳಿತಾಯ ಖಾತೆಯಲ್ಲಿ ಇರುವ ಠೇವಣಿ ಮೊತ್ತದಿಂದಲೂ ಹೆಚ್ಚು ಬಡ್ಡಿ ಪಡೆಯುವಂತೆ ಮಾಡಬಹುದು. 

ಬ್ಯಾಲೆನ್ಸ್‌ ಗೂ ಬಡ್ಡಿ 
ಕೆಲವು ಬ್ಯಾಂಕಿನಲ್ಲಿ ಸೇವಿಂಗ್ಸ್‌ ಖಾತೆಯಲ್ಲಿರುವ ಮೊತ್ತಕ್ಕೆ, ಶೇ.6ರ ದರದಲ್ಲಿ ಬಡ್ಡಿ ಕೊಡಲಾಗುತ್ತದೆ. ಆದರೆ, ಸೇವಿಂಗ್ಸ್‌ ಖಾತೆಯಲ್ಲಿ ಒಂದು ಲಕ್ಷಕ್ಕಿಂತ ಹೆಚ್ಚಿನ ಮೊತ್ತದ್ದಲ್ಲಿ ಮಾತ್ರ ಈ ಸೌಲಭ್ಯ. ಇತರೆ ಬ್ಯಾಂಕುಗಳಲ್ಲಿ ಸೇವಿಂಗ್ಸ್‌ ಖಾತೆಯಲ್ಲಿರುವ ಮೊತ್ತಕ್ಕೆ ವಾರ್ಷಿಕ ಶೇ:4.5ರ ದರದಲ್ಲಿ ಬಡ್ಡಿ ಸಿಗುತ್ತದೆ. ಬ್ಯಾಂಕಿನಿಂದ ಬ್ಯಾಂಕಿಗೆ ಈ ದರಗಳು ವ್ಯತ್ಯಾಸವಾಗಿ ಇರುವ ಕಾರಣ ನೀವು ಯಾವ ಬ್ಯಾಂಕಿನ ಸೇವಿಂಗ್ಸ್‌ ಖಾತೆಯಲ್ಲಿ ಹೆಚ್ಚು ಹಣ ಇಟ್ಟಿರಬೇಕು? ಅದರಿಂದ ಬರುವ ಲಾಭಗಳೇನು ಎಂಬುದನ್ನು ಅರಿತುಕೊಂಡಲ್ಲಿ ಹೆಚ್ಚಿನ ಬಡ್ಡಿ ಇಳುವರಿ ಪಡೆಯುವುದು ಸಾಧ್ಯವಾಗುತ್ತದೆ.  ಹೀಗೆ ಅನೇಕ ವಿಧಗಳಲ್ಲಿ ಯೋಚನೆ ಮಾಡಿ ಹೂಡಿಕೆ ಮಾಡುವ ಮೂಲಕ ಬ್ಯಾಂಕುಗಳಲ್ಲಿ ಇರತಕ್ಕ ಮೊತ್ತ ಮತ್ತು ಠೇವಣಿಯ ಮೇಲಿನ ಬಡ್ಡಿ ಇಳುವರಿಯನ್ನು ಹೆಚ್ಚಿಸಿಕೊಳ್ಳುವುದು ಸಾಧ್ಯವಿದೆ. 

ಠೇವಣಿ ಇಡುವ ಮುನ್ನ ತಿಳಿದುಕೊಳ್ಳಿ
ಆರ್‌.ಬಿ.ಐ. ಸೂಚನೆ, ರೆಪೋ ದರ ಇವೆಲ್ಲವುಗಳ ಜೊತೆಗೆ ಆಯಾ ಬ್ಯಾಂಕಿನ ವಿವೇಚನಾಧಿಕಾರದ ಮೇಲೆ ಬಡ್ಡಿದರ ನಿಗದಿಯಾಗುವುದು ಸಾಮಾನ್ಯ.  ಹಾಗಾಗಿ, ರಾಷ್ಟ್ರೀಕೃತ ಬ್ಯಾಂಕುಗಳು, ಖಾಸಗಿ ವಲಯದ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಹೀಗೆ ಎಲ್ಲೆಲ್ಲಿ ಬಡ್ಡಿದರ ಹೆಚ್ಚಿದೆ ಎಂಬುದನ್ನು ತಿಳಿದುಕೊಂಡರೆ ನಮ್ಮ ಹೂಡಿಕೆಯನ್ನು ಎಲ್ಲಿ ಮಾಡುವುದು ಲಾಭದಾಯಕ ಎಂದು ನಿಗದಿಪಡಿಸಿಕೊಳ್ಳಬಹುದು. ಇದಿಷ್ಟನ್ನು ಮಾಡಿದ ನಂತರ ಬ್ಯಾಂಕಿನಲ್ಲಿ ಡಿಪಾಜಿಟ್‌ ಮಾಡಲು ಮುಂದಾಗಬಹುದು. ಹೀಗಾಗಿ, ಇಡುಗಂಟು ಇಡುವ ಮನ್ನ ಅದರ ಬಗ್ಗೆ ತಿಳಿದು ಕೊಳ್ಳುವುದು ಬಹುಮುಖ್ಯ.  ನಿಮ್ಮಲ್ಲಿ ಠೇವಣಿ ಮಾಡತಕ್ಕ ಹೆಚ್ಚುವರಿ ಹಣ ಇದೆ ಎಂದಾದಲ್ಲಿ ಅದನ್ನು ಎಲ್ಲಿ ಹೂಡಿಕೆ ಮಾಡುವುದು ಸೂಕ್ತ ಮತ್ತು ಅದರ ಸುರಕ್ಷತಾ ಮಟ್ಟ ಎಂಥದ್ದು ಎಂಬುದನ್ನು ಮೊದಲಾಗಿ ಅಸೆಸ್‌ ಮಾಡುವುದು ಅತ್ಯಂತ ಸೂಕ್ತ,  ಈಗ ಬ್ಯಾಂಕುಗಳಿಗೆ ಬಡ್ಡಿದರ ನಿಗದಿಪಡಿಸಿಕೊಳ್ಳುವ ಅವಕಾಶ ಇರುವ ಕಾರಣ, ಒಂದೊಂದು ಬ್ಯಾಂಕಿನ ಬಡ್ಡಿದರ ಒಂದೊಂದು ತೆರನಾಗಿರುತ್ತದೆ.

ಟಿಡಿಎಸ್‌ ವಾಪಸಾತಿ
ಟಿ.ಡಿ.ಎಸ್‌ ಎಂದರೆ ಅದು ಮಧ್ಯಂತರವಾಗಿ ವಿಧಿಸಲಾದ ತೆರಿಗೆಯೇ ವಿನಃ ಅದೇ ಅಂತಿಮವಾದುದಲ್ಲ. ನಿಮ್ಮ ವಾರ್ಷಿಕ ವರಮಾನ ಎಷ್ಟಿದೆ ಎಂಬುದರ ಮೇಲೆ ತೆರಿಗೆ ನಿರ್ಧಾರವಾಗುತ್ತದೆ.  ಹೀಗೆ ಕಟಾವಣೆಗೆ ಒಳಗಾದ ತೆರಿಗೆ ಮೊತ್ತವನ್ನು ರಿಫ‌ಂಡ್‌ ಪಡೆಯುವುದಕ್ಕೂ ಅವಕಾಶ ಇದೆ. ಓ.ಡಿ.ಎಸ್‌. ಕಟಾವಣೆ ತಪ್ಪಿಸಬೇಕೆಂದಾದರೆ ನೀವು ನಿಮ್ಮ ಮೊತ್ತವನ್ನು ವಿಭಜನೆ ಮಾಡಿ, ಬೇರೆ ಬೇರೆ ಅವಧಿಯಲ್ಲಿ ಹೂಡಿಕೆ ಮಾಡಬಹುದು ಅಥವಾ ಬೇರೆ ಬೇರೆ ಬ್ಯಾಂಕುಗಳಲ್ಲಿಯೂ ಹೂಡಿಕೆ ಮಾಡಬಹುದು.  ಹೀಗೆ ಮಾಡುವುದರಿಂದ ಇನ್ನೊಂದು ಪ್ರಯೋಜನವೂ ಇದೆ. ತುಂಬಾ ತುರ್ತು ಸಂದರ್ಭದಲ್ಲಿ ಕೊಂಚ ಹಣ ಬೇಕೆಂದಾದಲ್ಲಿ ಅವಧಿಪೂರ್ವ ಹಿಂಪಡೆತವಾಗಿ ಯಾವುದಾದರೂ ಒಂದು ಎಫ್.ಡಿ.ಯನ್ನು ಮುರಿದು ನಿಮ್ಮ ತುರ್ತಿನ ಹಣಕಾಸು ಅಗತ್ಯವನ್ನು ತೀರಿಸಿಕೊಳ್ಳಬಹುದು. ದೊಡ್ಡ ಮೊತ್ತ ಒಂದೇ ಎಫ್.ಡಿ.ಯಲ್ಲಿದರೆ ಈ ಸೌಲಭ್ಯ ಇರುವುದಿಲ್ಲ. ಕೆಲವು ಬ್ಯಾಂಕುಗಳು, ಪ್ರೀಮೆಚೂÂರ್‌ ಕ್ಲೋಸರ್‌ಗೆ ಬಡ್ಡಿ ಕಡಿತ ಮಾಡುತ್ತವೆ.

Advertisement

ಬಂದದ್ದನ್ನು ಮತ್ತೆ ಹೂಡಿ
ಎಫ್.ಡಿ.ಯಲ್ಲಿ ಎರಡು ಬಗೆಯ ಹೂಡಿಕೆಗಳಿರುತ್ತವೆ. ಒಂದು ನೀವು ಮಾಹೆಯಾನ ಬಡ್ಡಿ ಮೊತ್ತವನ್ನು ಪಡೆಯುವ ಅವಕಾಶ, ಅವಧಿಯ ಕೊನೆಗೆ ಅಥವಾ ಮಧ್ಯದಲ್ಲಿ ಅಗತ್ಯ ಬಿದ್ದಾಗ ನಿಮ್ಮ ಅಸಲು ಮೊತ್ತ ವಾಪಾಸು ಪಡೆಯಬಹುದು. ಇನ್ನೊಂದು ಬಗೆಯಲ್ಲಿ ನೀವು ಹೂಡಿದ ಮೊತ್ತ ಇಂತಿಷ್ಟೇ ಅವಧಿಗೆ ಎಂದು ನಿಗದಿಪಡಿಸಲ್ಪಟ್ಟು ಹೂಡಿಕೆಯಾಗಿ ಅದಕ್ಕೆ ನಿಮಗೆ ಸಿಗುವ ಬಡ್ಡಿ ಸಹಿತವಾಗಿ ಅಸಲೂ ಸೇರಿ ಸಿಗುವ ಮೊತ್ತ ಎಷ್ಟೆಂಬುದು ಮೊದಲೇ ನಿಗದಿಯಾಗಿರುತ್ತದೆ.  ಆದರೆ ನಿಮಗೆ ಬರತಕ್ಕ ಬಡ್ಡಿಮೊತ್ತವನ್ನು ಮರುಹೂಡಿಕೆ ಮಾಡಿದಾಗ ಮುಂಬರುವ ವರ್ಷದಲ್ಲಿ ನಿಮಗೆ ಸಿಗುವ ಬಡ್ಡಿಮೊತ್ತ ಹೆಚ್ಚಿನದಾಗಿರುತ್ತದೆ. ಇದನ್ನೊಂದು ಉದಾಹರಣೆಯ ಮೂಲಕ ವಿವರಿಸುವುದು ಸೂಕ್ತವೆನಿಸುತ್ತದೆ:-

ಉದಾಹರಣೆಗೆ ನೀವು ಐವತ್ತುಸಾವಿರ ರೂಪಾಯಿಗಳನ್ನು ಒಂದು ಎಫ್.ಡಿ.ಯೋಜನೆಯಡಿಯಲ್ಲಿ ಬ್ಯಾಂಕೊಂದರಲ್ಲಿ ಠೇವಣಿ ಇಟ್ಟಿದ್ದೀರಿ ಎಂದಿಟ್ಟುಕೊಳ್ಳಿ,  ಐದು ವರ್ಷಗಳ ಅವಧಿಯ ಈ ಹೂಡಿಕೆಗೆ ವಾರ್ಷಿಕ ಬಡ್ಡಿದರ ಶೇ. 9.5 ಎಂದಿಟ್ಟುಕೊಳ್ಳಿ. 

ನೀವು ಪ್ರತಿವರ್ಷ ಬಡ್ಡಿಮೊತ್ತವನ್ನು ಪಡೆಯುತ್ತಾ ಹೋದಲ್ಲಿ ಐದು ವರ್ಷಗಳ ಕೊನೆಗೆ ಬಡ್ಡಿರೂಪದಲ್ಲಿ ನಿಮಗೆ ಸಿಗತಕ್ಕ ಒಟ್ಟು ಮೊತ್ತ ರೂ. 24,609-00 ಆಗಿರುತ್ತದೆ. ಇದಕ್ಕೆ ಬದಲಾಗಿ ನೀವು ಪ್ರತಿ ವರ್ಷ ನಿಮ್ಮ ಬ್ಯಾಂಕ್‌ ಖಾತೆಯಲ್ಲಿಗಳಿಸುವ ಬಡ್ಡಿ ಮೊತ್ತವನ್ನು ಅಸಲಿನೊಂದಿಗೆ ಜೋಡಿಸಿ ಮರುಹೂಡಿಕೆ ಮಾಡುತ್ತ ಹೋದಲ್ಲಿ ಐದು ವರ್ಷಗಳ ಕೊನೆಯಲ್ಲಿ ನೀವು ಬಡ್ಡಿರೂಪದಲ್ಲಿ ಒಟ್ಟು ರೂ:29,955 ಮೊತ್ತವನ್ನು ಪಡೆದಿರುತ್ತೀರಿ. ಅಂದರೆ ರೂ;5,345ಗಳಷ್ಟು ಹೆಚ್ಚುವರಿ ಮೊತ್ತ ನಿಮಗೆ ಬಡ್ಡಿರೂಪದಲ್ಲಿ ಪ್ರಾಪ್ತವಾಗುತ್ತದೆ. 

– ಗುರು ಸಾಗರ

Advertisement

Udayavani is now on Telegram. Click here to join our channel and stay updated with the latest news.

Next