Advertisement

Darshanಗ್ಯಾಂಗ್‌ನ ನಾಲ್ವರು ತುಮಕೂರು ಜೈಲಿಗೆ: ಪರಪ್ಪನ ಅಗ್ರಹಾರದಲ್ಲಿ ಹಲ್ಲೆಯಾಗುವ ಸಾಧ್ಯತೆ

11:18 PM Jun 24, 2024 | Team Udayavani |

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದರ್ಶನ್‌ ಗ್ಯಾಂಗ್‌ನ ನಾಲ್ವರು ಆರೋಪಿಗಳನ್ನು ಭದ್ರತೆ ದೃಷ್ಟಿಯಿಂದ ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ 24ನೇ ಎಸಿಎಂಎಂ ನ್ಯಾಯಾಲಯ ಸೋಮವಾರ ಆದೇಶಿಸಿದೆ.

Advertisement

ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ಸ್ಥಳಾಂತರಿಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಆಗ ಸರಕಾರದ ವಿಶೇಷ ಅಭಿಯೋಜಕರಾದ ಪಿ. ಪ್ರಸನ್ನ ಕುಮಾರ್‌ ಏಕೆ ಈ ಆರೋಪಿಗಳನ್ನು ಬೇರೆ ಜೈಲಿಗೆ ಸ್ಥಳಾಂತರಿಸಬೇಕು ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತಂದರು.

ಕೊನೆಗೆ ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು 8ನೇ ಆರೋಪಿ ರವಿಶಂಕರ್‌, 15ನೇ ಆರೋಪಿ ಕಾರ್ತಿಕ್‌, 16ನೇ ಆರೋಪಿ ಕೇಶವಮೂರ್ತಿ ಹಾಗೂ 17ನೇ ಆರೋಪಿ ನಿಖೀಲ್‌ ನಾಯಕ್‌ನನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಆದೇಶ ನೀಡಿತು.

ಹಲ್ಲೆ ಸಾಧ್ಯತೆ ಹಿನ್ನೆಲೆ ಸ್ಥಳಾಂತರ
ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ 17 ಮಂದಿ ಆರೋಪಿಗಳನ್ನು ಬಂಧಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ತಾವೇ ಕೊಲೆ ಮಾಡಿದ್ದಾಗಿ ಕಾಮಾಕ್ಷಿಪಾಳ್ಯ ಠಾಣೆಗೆ ಶರಣಾಗಿದ್ದ ಈ ನಾಲ್ವರು ವಿಚಾರಣೆ ವೇಳೆ ಕೊಲೆಯ ಸಂಪೂರ್ಣ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ. ಆ ಬಳಿಕವಷ್ಟೇ ದರ್ಶನ್‌ ಸೇರಿ ಇತರರ ಬಂಧನವಾಗಿತ್ತು. ಹೀಗಾಗಿ ಆರೋಪಿಗಳು ಒಂದೇ ಜೈಲಿನಲ್ಲಿ ಇದ್ದರೆ ಇತರೆ ಆರೋಪಿಗಳು ಹಾಗೂ ನಟ ದರ್ಶನ್‌ ಅಭಿಮಾನಿ ಕೈದಿಗಳಿಂದ ಹಲ್ಲೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ನಾಲ್ವರನ್ನು ತುಮಕೂರು ಜೈಲಿಗೆ ಸ್ಥಳಾಂತರಿಸುವಂತೆ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು.

ಪತ್ನಿ, ಪುತ್ರನ ಕಂಡು ಕಣ್ಣೀರಿಟ್ಟ ದರ್ಶನ್‌
ಬೆಂಗಳೂರು: ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕಾರಾಗೃಹದಲ್ಲಿರುವ ನಟ ದರ್ಶನ್‌ ತನ್ನನ್ನು ಭೇಟಿ ಮಾಡಲು ಬಂದ ಪತ್ನಿ ಮತ್ತು ಪುತ್ರನನ್ನು ಕಂಡು ಕಣ್ಣೀರಿಟ್ಟಿದ್ದಾನೆ.

Advertisement

ಸೋಮವಾರ ಪತ್ನಿ ವಿಜಯಲಕ್ಷ್ಮಿ ಮತ್ತು ಪುತ್ರ ವಿನೀಶ್‌ ಕಾರಾಗೃಹಕ್ಕೆ ತೆರಳಿ ದರ್ಶನ್‌ರನ್ನು ಭೇಟಿಯಾಗಿ ಮಾತನಾಡಿದರು. ದರ್ಶನ್‌ ಪುತ್ರನನ್ನು ತಬ್ಬಿಕೊಂಡು ಕಣ್ಣೀರು ಸುರಿಸಿದ್ದಲ್ಲದೆ ಪತ್ನಿಗೆ ಧೈರ್ಯ ತುಂಬಿದನು. ಮುಂದಿನ ಕಾನೂನು ಹೋರಾಟದ ಬಗ್ಗೆಯೂ ಸುಮಾರು ಅರ್ಧ ತಾಸು ಕಾಲ ದಂಪತಿ ಚರ್ಚಿಸಿದರು ಎಂದು ಹೇಳಲಾಗಿದೆ.

ವಿನೋದ್‌ ಪ್ರಭಾಕರ್‌ಗೆ ಏನ್‌ ಟೈಗರ್‌ ಎಂದ ದರ್ಶನ್‌!
ನೆಚ್ಚಿನ ನಟ ದರ್ಶನ್‌ನನ್ನು ನಟ ವಿನೋದ್‌ ಪ್ರಭಾಕರ್‌ ಭೇಟಿಯಾದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ದರ್ಶನ್‌ರನ್ನು ಭೇಟಿಯಾಗದೆ 4 ತಿಂಗಳು ಕಳೆದಿತ್ತು. ಬಳಿಕ ರೇಣುಕಾಸ್ವಾಮಿ ಕೊಲೆ ಸುದ್ದಿ ನೋಡಿ ದರ್ಶನ್‌ ಬಗ್ಗೆ ತಿಳಿದುಕೊಂಡೆ. ಅನ್ನಪೂರ್ಣೇಶ್ವರಿ ನಗರ ಠಾಣೆಯಲ್ಲಿದ್ದಾ ಗ ದರ್ಶನ್‌ ಭೇಟಿಗೆ ಪ್ರಯತ್ನಿಸಿದ್ದೆ . ಆದರೆ ಸಾಧ್ಯವಾಗಲಿಲ್ಲ. ಇಂದು ಭೇಟಿಯಾದಾಗಲೂ ಹೆಚ್ಚೇನು ಮಾತನಾಡಲಾಗಲಿಲ್ಲ. ಕೈ ಕುಲುಕಿದ ದರ್ಶನ್‌, ನನ್ನನ್ನು ಏನು ಟೈಗರ್‌ ಎಂದರು. ನಾನು ಬಾಸ್‌ ಎಂದು ಕರೆದೆ ಅಷ್ಟೇ ಎಂದರು.

ಮಂಗಳಮುಖಿಯಿಂದ ನಾಗರಾಜ್‌ ಭೇಟಿ
ಇದೇ ಪ್ರಕರಣದಲ್ಲಿ ಜೈಲುಪಾಲಾಗಿರುವ ಆರೋಪಿ ನಾಗರಾಜ್‌ನನ್ನು ಮಂಗಳಮುಖಿ ನಕ್ಷತ್ರ ಭೇಟಿಯಾದರು. ನಮ್ಮ ಟ್ರಸ್ಟ್‌ ವಿಚಾರದಲ್ಲಿ ನಾಗರಾಜ್‌ ಸಹಾಯ ಮಾಡಿದ್ದರು. ಅವರೀಗ ಕಷ್ಟದಲ್ಲಿರುವ ಕಾರಣ ಕುಶಲೋಪರಿ ವಿಚಾರಿಸಿದ್ದೇನೆ ಎಂದು ಮಾಧ್ಯಮ ಪ್ರತಿನಿಧಿಗಳಿಗೆ ಸ್ಪಷ್ಟನೆ ನೀಡಿದರು.

 

Advertisement

Udayavani is now on Telegram. Click here to join our channel and stay updated with the latest news.

Next