ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಂಬಿ ಎಣಿಸುತ್ತಿರುವ ನಟ ದರ್ಶನ್ ಆ್ಯಂಡ್ ಗ್ಯಾಂಗ್‌ನ ನಾಲ್ವರು ಸದಸ್ಯರನ್ನು ಬುಧವಾರ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿದೆ.ಬೆಂಗಳೂರಿನ 24ನೇ ಎಸಿಎಂಎಂ ಕೋರ್ಟ್ ಆದೇಶದ ಮೇರೆಗೆ ಬಿಗಿ ಪೊಲೀಸ್ ಭದ್ರತೆಯಲ್ಲಿ ಆರೋಪಿಗಳಾದ ರವಿಶಂಕರ್, ಕಾರ್ತಿಕ್, ಕೇಶವ್, ನಿಖೀಲ್ ತುಮಕೂರು ಊರುಕೆರೆ ಬಳಿಯ ರಂಗಾಪುರದಲ್ಲಿರುವ ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಸ್ಥಳಾಂತರ ಏಕೆ?
ನಾಲ್ವರು ಆರೋಪಿಗಳನ್ನು ತುಮಕೂರು ಜೈಲಿಗೆ ಸ್ಥಳಾಂತರಿಸಲು 24ನೇ ಎಸಿಎಂಎಂ ನ್ಯಾಯಾಲಯವು ಜೂನ್ 24ರಂದು ಆದೇಶಿಸಿತ್ತು. ಅರ್ಜಿ ವಿಚಾರಣೆ ವೇಳೆ ಆರೋಪಿಗಳ ಪರ ವಕೀಲರು ತುಮಕೂರು ಜೈಲಿಗೆ ವರ್ಗಾವಣೆಗೆ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ, ಆರೋಪಿಗಳ ವರ್ಗಾವಣೆಯ ಅಗತ್ಯತೆಯ ಕುರಿತು ಎಸ್‌ಪಿಪಿ ಪ್ರಸನ್ನ ಕುಮಾರ್ ನ್ಯಾಯಾಲಯಕ್ಕೆ ವಿವರಿಸಿದ್ದರು. ಅನಂತರ ಭದ್ರತೆಯ ದೃಷ್ಟಿಯಿಂದ ಈ ನಾಲ್ವರು ಆರೋಪಿಗಳನ್ನು ಪ್ರತ್ಯೇಕವಾಗಿಡಲು ಕೋರ್ಟ್ ಆದೇಶಿಸಿತ್ತು. ಕೊಲೆ ನಡೆದ ಬಳಿಕ ಮೊದಲು ಪೊಲೀಸರ ಮುಂದೆ ಕಾರ್ತಿಕ್, ಕೇಶವ್ ಮತ್ತು ನಿಖೀಲ್ ಶರಣಾಗಿದ್ದರು. ಈ ಮೂವರು ಕೊಲೆ ಬಗ್ಗೆ ಸಂಪೂರ್ಣವಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದರು. ಇದರಿಂದ ದರ್ಶನ್ ಮತ್ತು ಗ್ಯಾಂಗ್ ಬಂಧನಕ್ಕೊಳಗಾಗಿತ್ತು. ಇವರು ಒಂದೇ ಜೈಲಿನಲ್ಲಿದ್ದರೆ ಅವರವರೇ ಹೊಡೆದಾಡಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದರಿಂದ ನಾಲ್ವರು ಆರೋಪಿಗಳಿಗೆ ಪ್ರಾಣಾಪಾಯ ಉಂಟಾಗಬಹುದು ಎಂಬ ಕಾರಣದಿಂದ ತುಮಕೂರು ಜೈಲಿಗೆ ಸ್ಥಳಾಂತರಿಸಲಾಗಿದೆ.