ಹೊನ್ನಾವರ: ನೆರೆಯ ಜಿಲ್ಲಾ ಕೇಂದ್ರಗಳನ್ನು ಮತ್ತು ಗೋವಾ ರಾಜ್ಯವನ್ನು 180 ಕಿಮೀ ಅಂತರದಲ್ಲಿ ಜೋಡಿಸುವ ರಾಷ್ಟ್ರೀಯ ಹೆದ್ದಾರಿಯ ಪಟ್ಟಣದ ಕಾಲೇಜು ಸರ್ಕಲ್‌ನಲ್ಲಿ ನಿತ್ಯ ಎಂಬಂತೆ ಅಪಘಾತ ನಡೆಯುತ್ತಿದೆ.
ಸಕ್ಕರೆ ತುಂಬಿಕೊಂಡು ಮಂಗಳೂರಿಗೆ ಹೊರಟ ಲಾರಿಯೊಂದು ತಿರುವಿನಲ್ಲಿ ಪಲ್ಟಿಯಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಬಿದ್ದಿದೆ. ಹಗಲಿಗೆ ಆಗಿದ್ದರೆ ಅಥವಾ ವಿದ್ಯುತ್ ಕಂಬ ಇಲ್ಲವಾಗಿದ್ದರೆ ದೊಡ್ಡ ಅನಾಹುತ ಆಗುತ್ತಿತ್ತು. ಹಗಲಲ್ಲಿ ಜನ ಓಡಾಡುತ್ತಿದ್ದರು. ಪಕ್ಕದಲ್ಲಿ ಪುಟ್ಟ ಒಂದು ಮನೆ ಇದೆ. ನಿತ್ಯ ಎಂಬಂತೆ ಇಲ್ಲಿ ಅಪಘಾತ ನಡೆಯುತ್ತಿದ್ದು, ಕಳೆದ ಹತ್ತು ವರ್ಷದಲ್ಲಿ ಹಲವರು ಮೃತಪಟ್ಟಿದ್ದಾರೆ. ಬಲಕ್ಕೆ ತಿರುಗಿದರೆ ದೊಡ್ಡ ಹೊಂಡವಿದೆ. ಆದ್ದರಿಂದ ಇಲ್ಲಿ ಚತುಷ್ಪಥ ನಿರ್ಮಾಣ ಆಗುವುದರ ಜೊತೆ ಮೇಲ್ಸೇತುವೆ ಬೇಕು ಎಂದು ಸಮೀಕ್ಷೆ ಮಾಡಿ ನಕ್ಷೆ ಸಿದ್ಧಪಡಿಸಿ ಭೂಮಿ ಪಡೆದು ಆಗಿತ್ತು.
ಒಂದಿಷ್ಟು ಜನ ಅಂದಿನ ಕಾಂಗ್ರೆಸ್ ಸರ್ಕಾರದ ಧುರೀಣರ ಮೇಲೆ ಒತ್ತಡ ತಂದು ಅವರಿಂದ ಕೇಂದ್ರ ಭೂ ಸಾರಿಗೆ ಮಂತ್ರಿ ನಿತಿನ್ ಗಡ್ಕರಿಯವರ ಮೇಲೆ ಪ್ರಭಾವಬೀರಿ ಚತುಷ್ಪಥವನ್ನು 30 ಮೀಟರ್‌ಗೆ ಇಳಿಸಿ ಮೇಲ್ಸೇತುವೆ ರದ್ದುಪಡಿಸಿದರು. ಈಗ 30 ಮೀಟರ್ ರಸ್ತೆಯೂ ಆಗಿಲ್ಲ, ಮೇಲ್ಸೆತುವೆ ಆಗುವುದಿಲ್ಲ. ಡಿಸೆಂಬರ್ ಒಳಗೆ ಕುಂದಾಪುರದಿಂದ ಗೋವಾ ಚತುಷ್ಪಥ ಉದ್ಘಾಟನೆಯಾಗುತ್ತದೆ ಎಂದು ನಿತಿನ್ ಗಡ್ಕರಿಯವರು ಹೇಳಿದ್ದಾರೆ.
ಇಲ್ಲಿಯ ಸಮಸ್ಯೆಯನ್ನು ನಿವಾರಿಸಿಕೊಡಿ ಎಂದು ಜನ ಹಲವು ಬಾರಿ ವಿನಂತಿ ಮಾಡಿದರು, ಅಂಗಡಿಗಳನ್ನು ಮುಚ್ಚಿ ಪ್ರತಿಭಟನೆ ಮಾಡಿದರೂ ಪ್ರಯೋಜನವಾಗಲಿಲ್ಲ. ಶಾಸಕ, ಸಂಸದರಿಗೆ ಮನವಿ ಕೊಟ್ಟರು. ಇನ್ನು ಹೊಸದಾಗಿ ರಾಜ್ಯ ಸರ್ಕಾರ ಜಾಗಕೊಟ್ಟರೆ ಕೇಂದ್ರದಿಂದ ಚತುಷ್ಪಥ ಮತ್ತು ಮೇಲ್ಸೇತುವೆ ಮಾಡಿಸಿಕೊಡುವುದಾಗಿ ಸಂಸದರು ಭರವಸೆಕೊಟ್ಟರು. ಆ ಕೆಲಸವೂ ಆಗಲಿಲ್ಲ. ಈಗ ಶಾಸಕರು, ಸಂಸದರು ಆ ಮಾತು ಮರೆತಿದ್ದಾರೆ.
ಡಿಸೆಂಬರ್ ಒಳಗೆ ಚತುಷ್ಪಥ ಮುಗಿಯಬೇಕು ಎಂದು ಮೊನ್ನೆ ಕಾರವಾರದಲ್ಲಿ ಸಂಸದರು ಹೇಳಿದ್ದಾರೆ. ಹೊನ್ನಾವರದಲ್ಲಿ ಮಾತ್ರ ಸದಾ ದಟ್ಟಣೆ ಇರುವ ಈ ಸರ್ಕಲ್ ದಾಟುವುದೇ ದೊಡ್ಡ ಸಮಸ್ಯೆ. ಪದೇ ಪದೆ ನಡೆಯುವ ಅಪಘಾತಗಳು ಎಚ್ಚರಿಸುತ್ತಿದ್ದರೂ ರಾಜಕಾರಣಿಗಳು ಎಚ್ಚರಾಗುತ್ತಿಲ್ಲ. ನಿತಿನ್ ಗಡ್ಕರಿಯವರಿಗೆ ಸಮಸ್ಯೆಯನ್ನು ಮನದಟ್ಟು ಮಾಡಿಕೊಟ್ಟು ಮತ್ತೆ ಚತುಷ್ಪಥ, ಮೇಲ್ಸೇತುವೆ ನಿರ್ಮಾಣ ಮಾಡಿಸುವುದು ಕನಸಿನ ಮಾತು.
-ಜೀಯು