Advertisement

ಬಣಗುಡುತ್ತಿರುವ ಸಿದ್ದಯ್ಯನಪುರದ ನಾಲ್ಕು ಕೆರೆಗಳು

09:37 PM May 05, 2019 | Lakshmi GovindaRaj |

ಕೊಳ್ಳೇಗಾಲ: ಒಂದು ಗ್ರಾಮದಲ್ಲಿ ಒಂದು ಕೆರೆ ಇರುವುದೇ ಹೆಚ್ಚು ಆದರೆ ತಾಲೂಕಿನ ಸಿದ್ದಯ್ಯನಪುರದಲ್ಲಿ ಪುರಾತನ ಕಾಲದಿಂದಲೂ ನಾಲ್ಕು ಕೆರೆಗಳು ಇವೆ. ಆದರೆ ಕೆರೆಗಳು ಯಾವುದೇ ರೀತಿ ಅಭಿವೃದ್ಧಿಯಾಗದೆ ಬತ್ತಿಹೋಗಿ, ರೈತರಿಗೆ ಮತ್ತು ದನ-ಕರುಗಳಿಗೆ ನೀರು ಇಲ್ಲದೆ ಗಿಡಗಂಟಿಗಳು ಬೆಳೆದು ನಿಂತಿದೆ.

Advertisement

ತಾಲೂಕಿನಲ್ಲಿ ಸಿದ್ದಯ್ಯನಪುರ ಗ್ರಾಮ ಅತ್ಯಂತ ದೊಡ್ಡ ಗ್ರಾಮವಾಗಿದ್ದು, ಇಲ್ಲಿ ಗ್ರಾಮ ಪಂಚಾಯಿತಿಯನ್ನು ಒಳಗೊಂಡಿದೆ. ಗ್ರಾಮದಲ್ಲಿ ಗೂಗಲಕಟ್ಟೆ ಕೆರೆ, ಎರಡು ಬಸವನಗುಡಿ ಕೆರೆ, ಈರಯ್ಯನ ಕೆರೆ ಒಟ್ಟು ನಾಲ್ಕು ಕೆರೆಗಳು ಗ್ರಾಮದ ಹಿಂಬದಿಯಲ್ಲಿರುವ ಬಸವನಗುಡಿ ದೇವಸ್ಥಾನದ ಬಳಿ ನಿರ್ಮಾಣವಾಗಿದೆ.

ಗ್ರಾಮಸ್ಥರು ತಮ್ಮ ಜಮೀನುಗಳಿಗೆ ತೆರಳಲು ಇದೇ ದೇವಸ್ಥಾನದ ಮುಂಬದಿಯಲ್ಲಿಯೇ ತೆರಳಬೇಕಾಗಿದ್ದು, ತಮ್ಮ ಜಾನುವಾರುಗಳನ್ನು ಗದ್ದೆ ಬಯಲಿಗೆ ಮೇವಿಗಾಗಿ ತೆರಳುವ ವೇಳೆ ಜಾನುವಾರುಗಳು ಇಲ್ಲೇ ನೀರನ್ನು ಕುಡಿದು ಹೋಗುತ್ತವೆ ಮತ್ತು ತುಂಬಿದ ಕೆರೆಯ ನೀರನ್ನು ಸುತ್ತಮುತ್ತಲಿನ ರೈತರು ಜಮೀನುಗಳಿಗೆ ಹರಿಸಿಕೊಂಡು ಫ‌ಸಲ ತೆಗೆಯುವುದು ವಾಡಿಕೆ.

ಪ್ರಯೋಜನಕ್ಕೆ ಬಾರದ ಕೆರೆಗಳು:ಇತ್ತೀಚಿನ ದಿನಗಳಲ್ಲಿ ಫೋನಿ ಚಂಡಮಾರುತ ಎದ್ದರೂ ಸಹ ಸಮರ್ಪಕ ಮಳೆಯಾಗದೆ ಕೆರೆಯಲ್ಲಿ ಒಂದು ಹನಿ ನೀರಿಲ್ಲದೆ ಸಂಪೂರ್ಣ ಗಿಡಗಂಟಿಗಳು ಬೆಳೆದು ಅಭಿವೃದ್ಧಿಯೇ ಇಲ್ಲದೆ ಯಾವುದಕ್ಕೂ ಪ್ರಯೋಜನವಾಗದೆ ಬರಿದಾದ ಕೆರೆಯಾಗಿವೆ.

ರೈತರಲ್ಲಿ ಆತಂಕ: ಕೆರೆಗಳು ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಇಲಾಖೆ, ಕಾವೇರಿ ಮತ್ತು ಕಬಿನಿ ನಾಲಾ ವಿಭಾಗ ಮತ್ತು ಗ್ರಾಮ ಪಂಚಾಯಿತಿಗೆ ಒಳಪಡುವುದೇ ಎಂಬ ಗೊಂದಲದಲ್ಲಿ ಸಿಲುಕಿರುವ ಗ್ರಾಮದ ರೈತರು ಯಾರೂ ಸಹ ಕೆರೆಗಳತ್ತ ಗಮನ ಹರಿಸದೆ ಇರುವುದು ವಿಪರ್ಯಾಸವೇ ಸರಿ, ನೀರಿಲ್ಲದೆ ಗ್ರಾಮದಲ್ಲಿ ಜನರು ಹಾಗೂ ಜಾನುವಾರುಗಳು ಪರದಾಡುತ್ತಿವೆ ಎಂದು ರೈತರು ತಮ್ಮ ಆತಂಕವನ್ನು ತೊಡಿಕೊಂಡಿದ್ದಾರೆ.

Advertisement

ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ: ಗ್ರಾಮದ ರೈತರು ಹಲವಾರು ಬಾರಿ ಅಧಿಕಾರಿಗಳಿಗೆ ಮತ್ತು ಚುನಾಯಿತ ಪ್ರತಿನಿಧಿಗಳಿಗೆ ಕೆರೆ ಅಭಿವೃದ್ಧಿ ಪಡಿಸಬೇಕೆಂದು ಹಲವಾರು ಬಾರಿ ದೂರುಗಳನ್ನು ಸಲ್ಲಿಸಿದರೂ ಸಹ ಯಾರು ಇದರ ಬಗ್ಗೆ ಗಮನಹರಿಸದೆ ಇರುವುದು ಕುಂಠಿತಕ್ಕೆ ಕಾರಣವಾಗಿದೆ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ.

ಕಬಿನಿ ನಾಲೆ ನೀರೆ ಗತಿ: ಮಳೆಗಾಲದಲ್ಲಿ ಕಬಿನಿ ಮತ್ತು ಇನ್ನಿತರ ಜಲಾಶಯಗಳು ಭರ್ತಿಗೊಂಡು ಹೆಚ್ಚುವರಿ ನೀರನ್ನು ಕಾವೇರಿ ನದಿ ಮತ್ತು ಕಬಿನಿ ನಾಲೆ ಮೂಲಕ ನೀರನ್ನು ಹರಿದು ಬಿಟ್ಟಾಗ ಮಾತ್ರ ಗ್ರಾಮದ ಎಲ್ಲಾ ಕೆರೆಗಳು ಭರ್ತಿಯಾಗುತ್ತದೆ. ಇಲ್ಲವಾದ ಪಕ್ಷದಲ್ಲಿ ಕೆರೆಯನ್ನು ನೋಡುವವರಾಗಲಿ, ಕೇಳುವವರಾಗಲಿ ದಿಕ್ಕಿಲ್ಲದಂತೆ ಆಗಿದೆ.

ಯಾವುದೇ ಗ್ರಾಮದಲ್ಲಿ ನಾಲ್ಕು ಕೆರೆಗಳು ಇರುವುದಿಲ್ಲ. ಆದರೆ ಸಿದ್ದಯ್ಯನಪುರದಲ್ಲಿ ಹೆಚ್ಚು ಜನರು ಜಮೀನು ಹೊಂದಿದ್ದು, ರೈತರ ಅನುಕೂಲಕ್ಕಾಗಿ ನಾಲ್ಕು ಕೆರೆಗಳು ಇದೆ. ಇದನ್ನು ಹೂಳೆತ್ತುವ ಮತ್ತು ಗಿಡಗಂಟಿಗಳನ್ನು ತೆರವು ಮಾಡುವ ಪ್ರಯತ್ನ ಮಾಡದೆ ಇರುವುದರಿಂದ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಕೆರೆಯಿಂದ ರೈತರಿಗೆ ಅಪಾರ ನಷ್ಟ ಉಂಟಾಗುತ್ತಿದೆ.
-ರಾಚಯ್ಯ, ರೈತ ಮುಖಂಡ

ಕೆರೆಗಳು ಜಿಲ್ಲಾ ಪಂಚಾಯಿತಿ, ಸಣ್ಣ ನೀರಾವರಿ ಅಥವಾ ಗ್ರಾಮ ಪಂಚಾಯಿತಿಗೆ ಯಾವುದಕ್ಕೆ ಸೇರಿದ್ದರೂ ಸಹ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಗಮನ ಸೆಳೆದು ಬತ್ತಿಹೋಗಿರುವ ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗುವುದು.
-ಶಿವಮ್ಮ, ಜಿಪಂ ಅಧ್ಯಕ್ಷೆ

* ಡಿ.ನಟರಾಜು

Advertisement

Udayavani is now on Telegram. Click here to join our channel and stay updated with the latest news.

Next