ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ಸಂಭವಿಸಿದ ಪ್ರತ್ಯೇಕ ಅಪಘಾತ ಪ್ರಕರಣಗಳಲ್ಲಿ ನಾಲ್ವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಸುಮನಹಳ್ಳಿ ಹೊರವರ್ತುಲ ರಸ್ತೆಯ ಸರ್ವೀಸ್ ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ಗೆ ಹಿಂದಿನಿಂದ ಮಿನಿ ಲಾರಿ ಡಿಕ್ಕಿಹೊಡೆದ ಪರಿಣಾಮ ಸವಾರ ಭಾಸ್ಕರ್ (52) ಎಂಬವರು ಮೃತಪಟ್ಟಿದ್ದಾರೆ.
ಲಾರಿ ಚಾಲಕನ ಅಜಾಗರೂಕ ಚಾಲನೆಯೇ ಅಪಘಾತಕ್ಕೆ ಕಾರಣ ಎಂದು ಗೊತ್ತಾಗಿದೆ. ಘಟನೆ ಬಳಿಕ ಲಾರಿ ನಿಲ್ಲಿಸಿ ಚಾಲಕ ಪರಾರಿಯಾಗಿದ್ದು, ಆತನ ಬಂಧನಕ್ಕೆ ಕ್ರಮ ವಹಿಸಲಾಗಿದೆ ಎಂದು ವಿಜಯನಗರ ಸಂಚಾರ ಪೊಲೀಸರು ತಿಳಿಸಿದ್ದಾರೆ.
ಬೈಕ್ ಮರಕ್ಕೆ ಡಿಕ್ಕಿ: ವೇಗವಾಗಿ ಬಂದ ಬೈಕ ಆಯತಪ್ಪಿ ರಸ್ತೆ ಬದಿಯಿದ್ದ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಸವಾರ ಮೃತಪಪಟ್ಟ ಘಟನೆ ಪಾಪಾರೆಡ್ಡಿ ಪಾಳ್ಯದ ಸಮೀಪ ನಡೆದಿದೆ. ಅನ್ನಪೂರ್ಣೇಶ್ವರಿ ನಗರದ ಹರೀಶ್ (23) ಮೃತರು. ಶನಿವಾರ ರಾತ್ರಿ 11 ಗಂಟೆ ಸುಮಾರಿಗೆ ನಾಗರಬಾವಿ ಬಿಡಿಎ ಕಾಂಪ್ಲೆಕ್ಸ್ ಕಡೆಯಿಂದ ಹರೀಶ್ ತನ್ನ ಬೈಕ್‌ನಲ್ಲಿ ಪಾಪಾರೆಡ್ಡಿ ಪಾಳ್ಯದ ಕಡೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ಅದೇ ರೀತಿ ನೈಸ್ ರಸ್ತೆಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್‌ನಲ್ಲಿ ತೆರಳುತ್ತಿದ್ದ ಶಿವಮೂರ್ತಿ (34) ಎಂಬವರು ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಎಲೆಕ್ಟ್ರಾನಿಕ್ ಸಿಟಿ ಸಂಚಾರ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಮದ್ಯ ಸೇವಿಸಿ ವೇಗವಾಗಿ ಬೈಕ್ ಚಾಲನೆ!: ಶನಿವಾರ ರಾತ್ರಿ ಹೊಸೂರು ಮುಖ್ಯರಸ್ತೆಯಲ್ಲಿ ವೇಗವಾಗಿ ಬೈಕ್ ಚಾಲನೆ ಮಾಡುತ್ತಿದ್ದ ಸವಾರ ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾನೆ. ಸಂತೋಷ್ ( 28) ಮೃತ ಸವಾರ.
ಮದ್ಯ ಸೇವಿಸಿದ್ದ ಸಂತೋಷ್ ಹೆಲ್ಮೆಟ್ ಧರಿಸದೆ ಸ್ನೇಹಿತ ಮೋಹನ್‌ನ್ನು ಹಿಂಬದಿ ಕೂರಿಸಿಕೊಂಡು ಕೋನಪ್ಪನ ಅಗ್ರಹಾರ ಕಡೆಯಿಂದ ವೇಗವಾಗಿ ಬರುತ್ತಿದ್ದಾಗ ನಿಯಂತ್ರಣ ಸಿಗದೆ ಮುಂದೆ ಹೋಗುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಸಿದ್ದಾರೆ. ಕೆಳಗೆ ಬಿದ್ದು ಗಾಯಗೊಂಡಿದ್ದ ಸಂತೋಷ್ ಹಾಗೂ ಮೋಹನ್‌ರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೆ ಸಂತೋಷ್ ಮೃತಪಟ್ಟಿದ್ದಾನೆ.